ಆನ್‍ಲೈನ್ ನ್ಯಾಯಾಲಯ ಕಲಾಪ : ವೃತ್ತಿ ಘನತೆ ಕಾಪಾಡದಿದ್ದರೆ ಶಿಸ್ತು ಕ್ರಮ

ಬೆಂಗಳೂರು

     ನ್ಯಾಯಾಲಯದ ಕಲಾಪಗಳಲ್ಲಿ ಆನ್‍ಲೈನ್ ಮೂಲಕ ಪ್ರತಿನಿಧಿಸುವಾಗ ವೃತ್ತಿ ಘನತೆಗೆ ವಿರುದ್ಧವಾಗಿ ಕೆಲ ವಕೀಲರು ದುರ್ವರ್ತನೆ ತೋರುತ್ತಿದ್ದು, ಇದು ಗಂಭೀರ ವಿಚಾರವಾಗಿದೆ. ಇಂತಹ ವಕೀಲರ ವಿರುದ್ಧ ವಕೀಲರ ಅಧಿನಿಯಮ ಕಲಂ 35ರಡಿ ಶಿಸ್ತುಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ವಕೀಲರ ಪರಿಷತ್ತಿನ ಕಾರ್ಯದರ್ಶಿ ಕೆ. ಮಹದೇವ ಎಚ್ಚರಿಕೆ ನೀಡಿದ್ದಾರೆ

    ಅನ್ ಲೈನ್ ನ್ಯಾಯಾಲಯದ ಕಲಾಪದ ಸಂದರ್ಭದಲ್ಲಿ ಕೆಲ ವಕೀಲರು ವೃತ್ತಿ ಘನತೆ, ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಈ ಕುರಿತು ವ್ಯಾಪಕ ದೂರುಗಳು ಬರುತ್ತಿವೆ. ಇದೇ 6 ರ ಭಾನುವಾರ ನಡೆದ ಕರ್ನಾಟಕ ವಕೀಲರ ಪರಿಷತ್ತಿನಲ್ಲೂ ಕೆಲ ವಕೀಲರ ವರ್ತನೆ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಇನ್ನು ಮುಂದೆ ನ್ಯಾಯಾಲಯದ ಶಿಷ್ಟಾಚಾರ, ವಕೀಲರ ಘನತೆ, ಗೌರವಕ್ಕೆ ಧಕ್ಕೆ ತರುವ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕೆ. ಮಹದೇವ, ವಕೀಲರುಗಳು ನ್ಯಾಯಾಲಗಳ ಕಲಾಪಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿನಿಧಿಸುವಾಗ, ಅಖಿಲ ಭಾರತೀಯ ವಕೀಲರ ಪರಿಷತ್ತು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನಿಗದಿ ಪಡಿಸಿದ ಸಮವಸ್ತ್ರಗಳನ್ನು ಧರಿಸುತ್ತಿಲ್ಲ. ವೃತ್ತಿಯ ಘನತೆ ಎತ್ತಿ ಹಿಡಿಯದೆ ನ್ಯಾಯಾಲಯದ ಕಲಾಪಗಳಿಗೆ ತೊಂದರೆ ಉಂಟು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದಿದ್ದಾರೆ.

     ವಿಡಿಯೋ ಕಾನ್ಫರೆನ್ಸ್‍ನಲ್ಲಿ ಪ್ರತಿನಿಧಿಸುವಾಗ ವಕೀಲರುಗಳು ಕಾರಿನಲ್ಲಿ, ಆಟೋದಲ್ಲಿ ಪ್ರಯಾಣಿಸುತ್ತಾ ಅಥವಾ ಅಡುಗೆ ಮನೆ, ಗೃಹೋಪಯೋಗಿ ಕೆಲಸ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದು ಸಹ ಬೆಳಕಿಗೆ ಬಂದಿದೆ. ಇನ್ನು ಕೆಲ ಪ್ರಕರಣಗಳಲ್ಲಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿದೆ. ಇದಲ್ಲದೇ ವಕೀಲರುಗಳು ಆಡಿಯೋ ಮ್ಯೂಟ್ ಮಾಡದೆ ಇತರರ ಜೊತೆಯಲ್ಲಿ ಅವಾಚ್ಯ ಶಬ್ಧಗಳಿಂದ ಮಾತನಾಡುತ್ತಾ ಕೋರ್ಟ್ ಕಲಾಪಗಳಿಗೆ ಭಂಗ ಉಂಟು ಮಾಡುತ್ತಿದ್ದಾರೆ.

    ಇಂತಹ ವರ್ತನೆ ವಿರುದ್ಧ ವಕೀಲರ ಪರಿಷತ್ತಿನ ಸಭೆಯಲ್ಲಿ ತೀವ್ರ ಆಕ್ಷೇಪ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಚರ್ಚಿಸಿದ್ದು, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಗಮನಕ್ಕೆ ಬಂದ ಪಕ್ಷದಲ್ಲಿ ವಕೀಲರ ಮೇಲೆ ವಕೀಲರ ಅಧಿನಿಯಮ ಕಲಂ 35ರಡಿ ಶಿಸ್ತುಕ್ರಮ ತೆಗೆದುಕೊಳ್ಳಲಾಗುದು ಎಂದು ಕೆ. ಮಹದೇವ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ