ಚಳ್ಳಕೆರೆ
ಚಳ್ಳಕೆರೆ ತಾಲ್ಲೂಕಿನಾದ್ಯಂತ ಜನರಲ್ಲಿ ಭಯವನ್ನುಂಟು ಮಾಡಿದ್ದ ಕೊರೋನಾ ವೈರಾಣುವನ್ನು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಯಶಸ್ವಿಯಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಕೊರೋನಾ ವೈರಾಣುವಿನಿಂದ ಯಾವುದೇ ಪ್ರಾಣಾಪಾಯವಾಗದಂತೆ ಎಚ್ಚರಿಕೆ ವಹಿಸಿದ ಎಲ್ಲಾ ಅಧಿಕಾರಿಗಳಿಗೂ ಅಭಿನಂದಿಸುವುದಾಗಿ ತಿಳಿಸಿದ ಶಾಸಕ ಟಿ.ರಘುಮೂರ್ತಿ. ಜನರ ಸಮಸ್ಯೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಅವರು, ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ವಿವಿಧ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಾರಂಭದ ಹಂತದಲ್ಲಿ ಕೃಷಿ ಇಲಾಖೆಯ ಬಗ್ಗೆ ಮಾಹಿತಿ ನೀಡಿ ಡಾ.ಮೋಹನ್‍ಕುಮಾರ್, ಪ್ರಸ್ತುತ 34 ಸಾವಿರ ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜ ದಾಸ್ತಾನಿದ್ದು, 7800 ಕ್ವಿಂಟಾಲ್ ವಿತರಣೆಯಾಗಿದ್ದು, 23 ಸಾವಿರ ಕ್ವಿಂಟಾಲ್ ಬೀಜ ದಾಸ್ತಾನಿದೆ. ಪ್ರಸ್ತುತ 104 ಎಂ.ಎಂ. ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಹೆಚ್ಚಾಗಿದೆ ಎಂದರು.
ತೋಟಗಾಕರಿಕೆ ಅಧಿಕಾರಿ ವಿರೂಪಾಕ್ಷಪ್ಪ ಮಾಹಿತಿ ನೀಡಿ, ಸರ್ಕಾರದಿಂದ ತೋಟಗಾರಿಕೆ ಬೆಳೆಗಳಿಗೆ ಪರಿಹಾರ ವಿತರಣೆಯಾಗಿದ್ದು, ಇದುವರೆಗೂ 226 ಜನರಿಗೆ 26 ಲಕ್ಷ ಹಣವನ್ನು ಪರಿಹಾರ ರೂಪದಲ್ಲಿ ನೀಡಲಾಗಿದೆ. ಇನ್ನೂ315 ಜನರಿಗೆ 36 ಲಕ್ಷ ಹಣ ಬಾಕಿ ಇದೆ ಎಂದರು. ಹೂವಿನ, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಸರ್ಕಾರದ ನಿಗದಿ ಪಡಿಸಿದ ಪರಿಹಾರವನ್ನು ನೀಡಲಾಗುತ್ತಿದೆ ಎಂದರು. ಹೂವಿನ ಬೆಳೆಗಾರರಿಗೆ ಹೆಕ್ಟೇರ್‍ಗೆ 25 ಸಾವಿರ, ಹಣ್ಣು, ತರಕಾರಿ, ಈರುಳ್ಳಿ ಬೆಳೆಗಾರರಿ 15 ಸಾವಿರ ಪರಿಹಾರವನ್ನು ಸರ್ಕಾರ ನಿಗದಿ ಪಡಿಸಿದೆ ಎಂದರು.
ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕಾವ್ಯ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ ಒಟ್ಟು 66 ಶುದ್ದ ಕುಡಿಯುವ ನೀರಿನ ಘಟನಗಳನ್ನು ತುರ್ತು ರಿಪೇರಿಗೊಳಿಸಬೇಕಿದ್ದು, ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಕೊಡಲಾಗಿದೆ. ಗ್ರಾಮೀಣ ಭಾಗಗಳು ಸೇರಿದಂತೆ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಸರ್ಕಾರ ಒಂದು ಕೋಟಿ ಹಣ ಮಂಜೂರು ಮಾಡಿದ್ದು, ಕ್ರಿಯಾಯೋಜನೆ ಸಿದ್ದಪಡಿಸಲಾಗುವುದು. ಪಗಡಲಬಂಡೆ ಗ್ರಾಮದಲ್ಲಿ ನೀರು ದೊರೆಯುವ ಸ್ಥಳಬಿಟ್ಟು ಬೇರೆಡೆ ಬೋರುಕೊರೆಸಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚನೆ ನೀಡಿದರು.
ಪಂಚಾಯಿತಿ ರಾಜ್ ಇಲಾಖೆಯ ಇಂಜಿನಿಯರ್ ಬಸವರಾಜ್‍ಗೆ ಸೂಚನೆ ನೀಡಿದ ಶಾಸಕರು ಗ್ರಾಮೀಣ ಭಾಗಗಳಲ್ಲಿ ಸ್ಮಶಾನ ಹಾಗೂ ರಸ್ತೆ ಅಭಿವೃದ್ಧಿ ಕೈಗೊಳ್ಳುವ ಬಗ್ಗೆ ಹೆಚ್ಚು ಗಮನ ನೀಡಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಹೆಚ್ಚು ಜಾಗೃತೆ ವಹಿಸಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಹಿತಿ ನೀಡಿ, ಜೂನ್ 25ರಿಂದ ಎಸ್‍ಎಸ್‍ಎಲ್ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, 4578 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, 18 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಗ್ರಾಮೀಣ ಭಾಗಗಳ ಪರೀಕ್ಷಾ ಕೇಂದ್ರಗಳೂ ಸೇರಿದಂತೆ ಎಲ್ಲೆಡೆ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯ ಜೊತೆಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂದರು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಇಲ್ಲದೆ ಇರುವ ಕಡೆ ಸೂಕ್ತ ವ್ಯವಸ್ತೆ ಮಾಡುವಂತೆ ಸಂಬಂಧಪಟ್ಟ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ 700 ವಿದ್ಯಾರ್ಥಿಗಳು ಪಾದಯಾತ್ರೆ ಮೂಲಕ 1400 ವಿದ್ಯಾರ್ಥಿಗಳು ಪೋಷಕರೊಂದಿಗೆ ದ್ವಿಚಕ್ರವಾಹನಗಳಲ್ಲಿ, 750 ವಿದ್ಯಾರ್ಥಿಗಳು ಸೈಕಲ್‍ಗಳಲ್ಲಿ ಆಗಮಿಸುವರು.
ಬೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರ ತಿಮ್ಮರಾಜುರವರಿಗೆ ಪ್ರತಿನಿತ್ಯ ವಿದ್ಯುತ್ ಸರಬರಾಜಿನಲ್ಲಿ ಬಾರಿ ವ್ಯತ್ಯಯ ಉಂಟಾಗುತ್ತಿದ್ದು, ಎಸ್‍ಎಸ್‍ಎಲ್‍ಸಿ ಪರೀಕ್ಷೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಈ ಬಗ್ಗೆ ಗಮನ ಹರಿಸಬೇಕೆಂದರು.ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್ ಸ್ವಾಗತಿಸಿದರು. ಉಪಾಧ್ಯಕ್ಷೆ ತಿಪ್ಪಮ್ಮ ಲಿಂಗಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ಸದಸ್ಯರಾದ ಗದ್ದಿಗೆ ತಿಪ್ಪೇಸ್ವಾಮಿ, ಟಿ.ಗಿರಿಯಪ್ಪ, ಸಣ್ಣಸೂರಪ್ಪ, ಜಿ.ವೀರೇಶ್, ಈ.ರಾಮರೆಡ್ಡಿ, ತಿಪ್ಪೇಸ್ವಾಮಿ, ನವೀನ್‍ಕುಮಾರ್, ತಿಮ್ಮಾರೆಡ್ಡಿ, ಸಾಕಮ್ಮ, ಗಂಗೀಬಾಯಿ, ತಿಪ್ಪಕ್ಕ, ರಂಜಿತಾ, ಕವಿತಾರಾಮಣ್ಣ, ಉಮಾ, ರತ್ನಮ್ಮ, ಸುವರ್ಣಮ್ಮ, ಸಮರ್ಥರಾಯ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
