ಕೊರೋನಾ ವಿರುದ್ಧ ಎಲ್ಲರೂ ಒಗ್ಗೂಡಿ ಹೋರಾಡಬೇಕು : ಡಿ ಕೆ ಶಿವಕುಮಾರ್

ಬೆಂಗಳೂರು

      ಕೊರೋನಾ ವಿಚಾರದಲ್ಲಿ ನಾವು ರಾಜಕೀಯ ಮಾಡಲು ಹೋಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು. ಸರ್ವಪಕ್ಷ ನಾಯಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನನಿತ್ಯದ ವಸ್ತುಗಳು, ಆಹಾರ ಸಿಗದೆ ಜನ ಕಂಗಾಲಾಗಿದ್ದಾರೆ. ಇಲ್ಲಿ ಇರಲೂ ಆಗದೆ, ತಮ್ಮೂರಿಗೆ ಹೋಗಲು ಆಗದೆ ಪರಿತಪಿಸುತ್ತಿದ್ದಾರೆ. ಇದಕ್ಕೊಂದು ಸ್ಪಷ್ಟ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

      ಸರಕಾರದ ಎಲ್ಲ ಸಕಾರಾತ್ಮಕ ಕ್ರಮಗಳಿಗೆ ನಮ್ಮ ಪಕ್ಷದ, ವೈಯಕ್ತಿಕವಾಗಿ ನನ್ನ ಬೆಂಬಲವಿದೆ. ಆದರೆ, ಈ ಪಿಡುಗು ನಿವಾರಣೆ ವಿಚಾರದಲ್ಲಿ ಉಪ ಮುಖ್ಯಮಂತ್ರಿಗಳು, ಸಚಿವರ ನಡುವೆ ಸಮನ್ವಯ ಇಲ್ಲ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ, ಭಯ ಮೂಡಿಸುತ್ತಿದ್ದಾರೆ.

     ನಾನು ಅವರ ಹೆಸರು ಹೇಳಲು ಹೋಗುವುದಿಲ್ಲ. ಆದರೆ ಅವರಲ್ಲಿ ಸಮನ್ವಯ ತರುವ ಜವಾಬ್ದಾರಿ ಮುಖ್ಯಮಂತ್ರಿಯಾಗಿ ನಿಮ್ಮದು. ಇಲ್ಲದಿದ್ದರೆ ಜನ ಮತ್ತಷ್ಟು ಹೆದರಿ ಹೋಗುತ್ತಾರೆ ಎಂದಿದ್ದಾರೆ. ಸಾಮಾನ್ಯ ಜನರ ಕೊರೋನಾ ಸೋಂಕು ನಿವಾರಣೆಗೆ ಹೋರಾಡುತ್ತಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಯಾರಿಗೂ ಮಾಸ್ಕ್ ಸಿಗುತ್ತಿಲ್ಲ. ಇದನ್ನು ಉಚಿತವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

ರಕ್ಷಕರಿಗೇ ಸುರಕ್ಷೆ ಇಲ್ಲದಿದ್ದರೆ ಹೇಗೆ?  

    ಕೊರೋನಾ ನಿಯಂತ್ರಣ, ಪರಿಸ್ಥಿತಿ ನಿರ್ವಹಣೆಗೆ ಸರಕಾರದ ಕ್ರಮಗಳು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗೆ, ಮಾರ್ಗಸೂಚಿಗಳಿಗೆ ಅನುಗುಣವಾಗಿ ಇರಬೇಕೇ ಹೊರತು ಸರಕಾರದ ಪ್ರತಿನಿಧಿಗಳ, ಯಾವುದೋ ರಾಜಕೀಯ ಪಕ್ಷದ ತತ್ವ, ಸಿದ್ಧಾಂತ, ರಾಜಕೀಯ ಲಾಭಕ್ಕೆ ಬಳಕೆ ಆಗಬಾರದು.

     ಕೊರೋನಾ ಇಡೀ ರಾಜ್ಯದ, ದೇಶದ, ವಿಶ್ವದ ಸಮಸ್ಯೆ. ಬರೀ ಆಡಳಿತರೂಢ ಸರಕಾರದ, ಪಕ್ಷದ ಸಮಸ್ಯೆ ಅಲ್ಲ. ಇದು ಎಲ್ಲರ ಸಮಸ್ಯೆ. ಎಲ್ಲರೂ ಒಗ್ಗೂಡಿ ಹೋರಾಡಬೇಕು. ಈ ವಿಚಾರದಲ್ಲಿ ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎಂಬುದಿಲ್ಲ.ರೈತರು ಬೆಳೆದ ಬೆಳೆಗಳು ವಿಲೇವಾರಿ ಆಗುತ್ತಿಲ್ಲ. ರೇಷ್ಮೆ ಗೂಡುಗಳು ಬಿಕರಿ ಆಗದೆ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದಾರೆ. ಅವರು, ಇವರು ಎನ್ನದೇ ಎಲ್ಲ ವರ್ಗದವರ ಸಂಕಷ್ಟಕ್ಕೆ ಪರಿಹಾರ ಸೂತ್ರಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು‌

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap