ಚಿತ್ರದುರ್ಗ
ಕೋವಿಡ್-19 ರಿಂದ ಇಂದು ನಾವು ಸ್ವತಂತ್ರವಾಗಬೇಕಿದೆ. ಇನ್ನೂ ಇದರ ಬಗೆಗೆ ನಾವು ಆತಂಕ ಪಡುವ ಅಗತ್ಯವಿಲ್ಲ. ಗುಣಪಡಿಸುವ ಲಸಿಕೆ ಅವಿಷ್ಕಾರಗೊಳ್ಳುವ ಹಂತದಲ್ಲಿದೆ. ನಾವು ಆತಂಕಕ್ಕೆ ಒಳಗಾಗದೇ ಮೂರು ಸೂತ್ರಗಳಾದ ಸ್ಯಾನಿಟೈಸರ್, ಮುಖಗವಸು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದು ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ 74ನೇ ಭಾರತ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಭಾರತ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಕೋವಿಡ್‍ನಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯೇ ಸರಿ. ನಮ್ಮ ಜಿಲ್ಲೆಯಲ್ಲಿ ಕೋವಿಡ್-19ನ್ನು ನಿಯಂತ್ರಿಸಲು ಹೋರಾಟ ನಡೆಸಿದ ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ನಾವು ಆಚರಿಸುತ್ತಿರುವ ಸ್ವಾತಂತ್ರ್ಯೋತ್ಸವವು ಹಲವು ಶ್ರೇಷ್ಟ ಹೋರಾಟಗಾರರ ಅವಿರತ ಶ್ರಮ, ತ್ಯಾಗ ಬಲಿದಾನದ ಫಲವಾಗಿದೆ. ಈ ಸಮಯದಲ್ಲಿ ಅಂತಹ ಮಹನೀಯರನ್ನು ನಾವು ಸ್ಮರಿಸಲೇಬೇಕು. ಅನೇಕ ಭಾಷೆ, ಸಂಸ್ಕøತಿ, ಧರ್ಮ, ಜನಾಂಗ, ಜಾತಿಗಳನ್ನು ಹೊಂದಿರುವ ಭಾರತವು ವೈವಿದ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದೆ. ಸ್ವತಂತ್ರ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ ಬಾಹ್ಯ ಹಾಗೂ ಆಂತರಿಕ ಶಕ್ತಿಗಳಿಂದ ಎದುರಾಗಬಹುದಾದ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದರು.
ಸ್ವಾತಂತ್ರ್ಯ ಬಂದ ನಂತರ ನಮ್ಮ ದೇಶ ಹಲವಾರು ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗಿದೆ ಅಲ್ಲದೇ ಗಣನೀಯ ಸಾಧನೆಗೈದಿದೆ. ಕೃಷಿಯಲ್ಲಿ ಸ್ವಾವಲಂಬನೆ, ಕೈಗಾರಿಕೋದ್ಯಮದಲ್ಲಿ ಸಫಲತೆ, ತಲಾದಾಯದಲ್ಲಿ ಏರಿಕೆ, ಶೈಕ್ಷಣಿಕ ಪ್ರಗತಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಹಿರಿಮೆಯನ್ನು ಮೆರೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆ ಕರ್ನಾಟಕದಲ್ಲಿಯೇ ಒಂದು ವಿಶಿಷ್ಟ ಜಿಲ್ಲೆಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಈ ಜಿಲ್ಲೆ ಅಮೋಘ ಕೊಡುಗೆ ನೀಡಿದೆ. ಅಂತಹ ಮಹನೀಯರನ್ನು ಈ ಸಂದರ್ಭದಲ್ಲಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು, ಕೋವಿಡ್-19 ಹಿನ್ನಲೆಯಲ್ಲಿ ಅವರ ಸುರಕ್ಷತೆಯ ದೃಷ್ಠಿಯಿಂದ ಜಿಲ್ಲಾಡಳಿತದ ವತಿಯಿಂದ ಅವರುಗಳ ಮನೆಗೆ ತೆರಳಿ ಸನ್ಮಾನಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ರಾಷ್ಟ್ರನಾಯಕರು, ಮಾಜಿ ಮುಖ್ಯಮಂತ್ರಿಗಳು ಆದ ಎಸ್.ನಿಜಲಿಂಗಪ್ಪ ಅವರು ನಮ್ಮ ಜಿಲ್ಲೆಯ ಹೆಮ್ಮೆಯ ವ್ಯಕ್ತಿಯಾಗಿರುತ್ತಾರೆ ಎಂದು ಸ್ಮರಿಸಿದರು.
ನಮ್ಮ ಈ ಜಿಲ್ಲೆಯ ಕೃಷಿ, ಗಣಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದಿದೆ. ಇದು ಏಳು ಸುತ್ತಿನ ಕೋಟೆಯನ್ನು ಹೊಂದಿದ್ದು, ಕೋಟೆ ನಗರಿ ಎಂದೇ ಪ್ರಸಿದ್ದಿ ಪಡೆದಿದೆ. ಇದು ಪವನಶಕ್ತಿಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಮೊಳಕಾಲ್ಮೂರು ತಾಲ್ಲೂಕಿನ ಜಟಿಂಗ ರಾಮೇಶ್ವರದಲ್ಲಿ ದೊರೆತಿರುವ ಶಿಲಾಶಾಸನ ಅಶೋಕ ಚಕ್ರವರ್ತಿಯನ್ನು “ದೇವನಾಂಪ್ರಿಯ ಅಶೋಕ” ಎಂದು ವರ್ಣಿಸುತ್ತದೆ. ಪ್ರಖ್ಯಾತ ಗಿರಿಧಾಮ ಜೋಗಿಮಟ್ಟಿ, ಏಳು ಸುತ್ತಿನ ಕೋಟೆ, ಚಂದ್ರವಳ್ಳಿ ಕೆರೆ, ಹೊಸದುರ್ಗ ತಾಲ್ಲೂಕಿನ ಹಾಲುರಾಮೇಶ್ವರ, ವಜ್ರ, ಅಪೂರ್ವ ಐತಿಹಾಸಿಕ ಸ್ಮಾರಕಗಳನ್ನು ಹೊಂದಿ ದೇಶ, ವಿದೇಶಗಳ ಪ್ರವಾಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ ಎಂಬುದು ನಮ್ಮ ಜಿಲ್ಲೆಯ ಹೆಗ್ಗಳಿಕೆ ಎಂದರು.
ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದಿಯಾಗಿರುವ ತ.ರಾ.ಸುಬ್ಬರಾಯರು, ತಳುಕಿನ ವೆಂಕಣ್ಣಯ್ಯ, ಹುಲ್ಲೂರು ಶ್ರೀನಿವಾಸ ಜೋಯಿಸರು, ಬೆಳಗೆರೆ ಜಾನಕಮ್ಮ, ಬಿ.ಎಲ್.ವೇಣು ನಮ್ಮವರೇ ಆಗಿದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ. ಸಂಶೋಧಕರಾದ ಬಿ.ರಾಜಶೇಖರಪ್ಪ, ಲಕ್ಷ್ಮಣ್ ತೆಲಗಾವಿ ಅವರು ನಮ್ಮೊಟ್ಟಿಗಿದ್ದಾರೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ಈಗಾಗಲೇ ಸರ್ಕಾರ 2020-21ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟಿದೆ. ಅದರಂತೆ ಈಗಾಗಲೇ ಜಿಲ್ಲೆಯಲ್ಲಿ ಮೊಬೈಲ್ ಆಪ್ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಆಗಸ್ಟ್ 24ರವರೆಗೆ ಸಮೀಕ್ಷೆ ನಡೆಯಲಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಕೋವಿಡ್-19ರ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಗಳಂತೆ ಈ ಬಾರಿ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕೋವಿಡ್-19ರ ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕೊರೊನಾ ವಾರಿಯರ್ಸ್ ಅವರ ಕರ್ತವ್ಯ ಪ್ರಜ್ಞೆ ಶ್ಲಾಘನೀಯವಾಗಿದೆ. ಎಲ್ಲರೂ ಕೈ ಜೋಡಿಸಿ, ಕೊರೊನಾ ರೋಗದಿಂದ ಮುಕ್ತವಾಗಲು ಶ್ರಮಿಸೋಣ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸೋಣ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‍ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ವೆಂಕಟೇಶಯ್ಯ, ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ