ಚಿಕ್ಕನಾಯಕನಹಳ್ಳಿ

ಪ್ರತಿ ವರ್ಷ ಮಾರ್ಗಶಿರ ಶುದ್ಧ ಪೌರ್ಣಮಿ ದಿವಸದಿಂದ ಆರಂಭವಾಗುವ ಕುಪ್ಪೂರು ಜಾತ್ರಾ ಮಹೋತ್ಸವ ಮೂರು ದಿನಗಳ ವಿಜೃಂಭಣೆಯಿಂದ ಭಾರಿ ಭಕ್ತ ಸಮೂಹದ ನಡುವೆ ನೆರವೇರಲಿದೆ. ಈ ಬಾರಿ ರಾಜ್ಯದ ಮುಖ್ಯಮಂತ್ರಿ ಬರುತ್ತಿರುವುದು ಜಾತ್ರೆಯ ವಿಶೇಷ.
ಮುಖ್ಯಮಂತ್ರಿ ಆಗಮನಕ್ಕೆ ಬಿಗಿಭದ್ರತೆ :
ಕುಪ್ಪೂರು ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಗುರುವಾರ (ಡಿ.12) ಆಗಮಿಸುತ್ತಿದ್ದು, ಕುಪ್ಪೂರು ಮಠಕ್ಕೆ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ 2ನೇ ಬಾರಿ ಆಗಮಿಸುತ್ತಿದ್ದಾರೆ. ಇವರ ಆಗಮನದ ವೇಳೆ ಹೆಚ್ಚು ಜನಜಂಗುಳಿ ಉಂಟಾಗದಂತೆ ಪೊಲೀಸರು ಬಿಗಿಭದ್ರತೆ ಕಲ್ಪಿಸಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೊರಭಾಗದಲ್ಲಿ ಕಾರ್ಯಕ್ರಮದ ವೀಕ್ಷಣೆಗಾಗಿ ಎಲ್.ಇ.ಡಿ ಟಿ.ವಿ ವ್ಯವಸ್ಥೆ ಮಾಡಲಾಗುತ್ತಿದೆ.
ಪೊಲೀಸ್ ಭದ್ರತೆ :
ಮುಖ್ಯಮಂತ್ರಿಗಳ ಆಗಮನದ ಹಿನ್ನಲೆಯಲ್ಲಿ ಡಿಎಸ್ಪಿ-02, ಸಿಪಿಐ-7, ಪಿಎಸ್ಐ-18, ಎಎಸ್ಐ-45, ಪೆÇಲೀಸ್ ಕಾನ್ಸ್ಟೆಬಲ್-206, ಮಹಿಳಾ ಪೊಲೀಸ್-32 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಾಲ್ಕು ಗಣ್ಯರಿಗೆ ಮಾತಿಗೆ ಅವಕಾಶ : ಮುಖ್ಯಮಂತ್ರಿ ಕುಪ್ಪೂರು ಜಾತ್ರೆಗೆ ಆಗಮಿಸಿದಾಗ ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಕೆಲವೇ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಕುಪ್ಪೂರು ಮಠದ ಡಾ.ಯತೀಶ್ವರಶಿವಾಚಾರ್ಯ ಸ್ವಾಮೀಜಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಸನ್ಮಾನಿತರಾದ ಶಾಮನೂರು ಶಿವಶಂಕರಪ್ಪರಿಗೆ ಮಾತ್ರ ಮಾತನಾಡಲು ಅವಕಾಶ ಕಲ್ಪಿಸಲಾಗುವುದು.
ಮುಖ್ಯಮಂತ್ರಿಗೆ ತುಲಾಭಾರ :
ಮುಖ್ಯಮಂತ್ರಿ ಆಗಮನದ ವೇಳೆ ಶ್ರೀ ಮರುಳಸಿದ್ದಸ್ವಾಮಿಯವರ ಸನ್ನಿಧಾನದಲ್ಲಿ ಯಡಿಯೂರಪ್ಪನವರಿಗೆ ತುಲಾಭಾರ ಮಾಡಲಾಗುವುದುಮಠದಲ್ಲಿ ಮುಖ್ಯಮಂತ್ರಿಗೆ ರಾಗಿದೋಸೆ, ಸೊಪ್ಪಿನ ಪಲ್ಯ, ಅವರೆಕಾಳಿನ ಸಾರು : ಮಧ್ಯಾಹ್ನ 12ರ ಸುಮಾರಿಗೆ ಆಗಮಿಸುವ ಮುಖ್ಯಮಂತ್ರಿಗಳಿಗೆ ಊಟಕ್ಕಾಗಿ ರಾಗಿ ಮುದ್ದೆ, ರಾಗಿದೋಸೆ, ಮೆಂಥ್ಯಾಸೊಪ್ಪಿನೊಂದಿಗೆ ಅಕ್ಕಿ ರೊಟ್ಟಿ, ಸೊಪ್ಪಿನ ಪಲ್ಯ, ಮೊಳಕೆ ಕಾಳುಗಳ ಉಸ್ಲಿ, ಅವರೆಕಾಯಿ ಹಿಸಿಕಿದ ಬೇಳೆ ಸಾರು ತಯಾರಿಸಲು ಸಿದ್ದತೆ ನಡೆಯುತ್ತಿದೆ.
ಅಣೆಕಟ್ಟೆ ಬಳಿ ಹೆಲಿಪ್ಯಾಡ್:
ಕುಪ್ಪೂರು ಜಾತ್ರಾ ಮಹೋತ್ಸವಕ್ಕೆ ಮಧ್ಯಾಹ್ನ 12ರ ವೇಳೆಗೆ ಆಗಮಿಸುವ ಮುಖ್ಯಮಂತ್ರಿಗಳು ಅಣೆಕಟ್ಟೆ ಬಳಿ ನಿರ್ಮಿಸಲಾಗಿರುವ ಹೆಲಿಪ್ಯಾಡ್ ಬಳಿ ಇಳಿಯುವರು. ನಂತರ ಕಾರಿನಲ್ಲಿ ಕುಪ್ಪೂರಿಗೆ ತೆರಳಿ ಮರುಳಸಿದ್ದರ ದರ್ಶನ ಮಾಡಿ, ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ಮಧ್ಯಾಹ್ನ 1.10ಕ್ಕೆ ಹೊರಡುವುದಾಗಿ ಅವರ ತಾತ್ಕಾಲಿಕ ಪ್ರವಾಸ ಪಟ್ಟಿಯಲ್ಲಿದೆ.
ಕುಪ್ಪೂರು ಶ್ರೀಮರುಳಸಿದ್ದೇಶ್ವರ ಮಠದ ಇತಿಹಾಸ:
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಶ್ರೀ ಗುರುಮರುಳಸಿದ್ದೇಶ್ವರ ಪ್ರಸಿದ್ಧವಾದ ಐತಿಹಾಸಿಕ ಕ್ಷೇತ್ರವಾಗಿದೆ. ಪಂಚಪೀಠದ ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಶಾಖಾಮಠವಾಗಿ ಸಮಾಜಕ್ಕೆ ಧಾರ್ಮಿಕ ಕೊಡುಗೆಯನ್ನು ನೀಡುತ್ತಿದೆ.ಸುಮಾರು 15-16ನೇ ಶತಮಾನದಲ್ಲಿ ಕಡೂರು ತಾಲ್ಲೂಕಿನ ನಿಡುವಳ್ಳಿ ಗ್ರಾಮದ ಬಸವಲಿಂಗಾರ್ಯ ಮತ್ತು ಸಿದ್ದಾಂಬೆ ದಂಪತಿಗಳು ಮರುಳಸಿದ್ದನಿಗೆ ಜನ್ಮ ನೀಡಿದರು. ಇವರು ಬಿದರೆಯ ದೊಡ್ಡಮಠದ ಪ್ರಭುಲಿಂಗಸ್ವಾಮೀಜಿಯವರಿಂದ ಗುರುದೀಕ್ಷೆ ಪಡೆದರು. ಲೋಕಕಲ್ಯಾಣಕ್ಕಾಗಿ ಊರು ಗ್ರಾಮಗಳ ಪ್ರವೇಶದಿಂದ ಕುಂದುಕೊರತೆ, ನೈರ್ಮಲ್ಯಗಳನ್ನು ಪವಾಡದಿಂದ ಬಗೆಹರಿಸುತ್ತಿದ್ದರು, ಶ್ರೀಶೈಲದ ಭ್ರಮರಾಂಬಿಕೆ ಮಲ್ಲಿಕಾರ್ಜುನರನ್ನು ಒಲಿಸಿಕೊಂಡು ಸಾಕ್ಷಾತ್ ಅನ್ನಪೂಣೇಶ್ವರಿಯು ತಮ್ಮಲ್ಲಿರುವಂತೆ ವರವನ್ನು ಪಡೆದು ಅನ್ನದಾನಿ ಶ್ರೀ ಗುರುಮರುಳಸಿದ್ದೇಶ್ವರರಾದರು. ಅಂದಿನಿಂದ ಮಠದಲ್ಲಿ ನಿತ್ಯವೂ ತ್ರಿಕಾಲ ಪೂಜೆ, ದಾಸೋಹ ತಪ್ಪದೆ ನಡೆಯುತ್ತಿದೆ.
ಕುಪ್ಪೂರಿನಲ್ಲಿ ಮರುಳಸಿದ್ದರ ಗದ್ದಿಗೆ : ಕುಪ್ಪೂರಿನಲ್ಲಿನ ಸಮಾಧಿ ಗದ್ದುಗೆ ಮೇಲೆ ಸುಂದರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ, ಮರುಳಸಿದ್ದರ ಬೆಳ್ಳಿಯ ಮುಖಪದ್ಮರೂಪದ ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಪೀಠಾಧ್ಯಕ್ಷರ ಹಿನ್ನೋಟ: ಕ್ರಿ.ಶ.1924ರಲ್ಲಿ ಚಂದ್ರಶೇಖರ ಶಿವಾಚಾರ್ಯರು ಪಟ್ಟಾಧಿಕಾರವನ್ನು ಸ್ವೀಕರಿಸಿ ಧರ್ಮ ಹಾಗೂ ಪೂಜಾ ಕೈಂಕರ್ಯಗಳನ್ನು ಅಭಿವೃದ್ಧಿಗೊಳಿಸಿದರು. ಈಗಿರುವ ಡಾ.ಯತೀಶ್ವರ ಶಿವಾಚಾರ್ಯರಿಗೆ ಪಟ್ಟಾಧಿಕಾರ ನೆರವೇರಿಸಿ ಮಾರ್ಗದರ್ಶನ ನೀಡಿ ಜೀವನದ ಅಂತ್ಯ ಕಂಡು ಶಿವೈಕ್ಯರಾದರು. ಪ್ರತಿ ಅಮಾವಾಸ್ಯೆಯಂದು ಶ್ರೀಗಳ ಸಾನ್ನಿಧ್ಯದಲ್ಲಿ ಶಿವನೊಲುಮೆಗಾಗಿ ಸತ್ಚಿಂತನೆ ಧಾರ್ಮಿಕ ಪುರಾಣವನ್ನು, ನೆರದ ಭಕ್ತರಿಗೆ ಶಿವ ಪಂಚಾಕ್ಷರಿ ಮಂತ್ರದಿಂದ ಧ್ಯಾನ ಮಾಡಿಸಿ ಮನಸ್ಸಿಗೆ ಶಾಂತಿ ಮೂಲಕ ಆಂತರಿಕ ಧರ್ಮಜ್ಯೋತಿಯನ್ನು ಬೆಳಗಿಸುತ್ತಿದ್ದಾರೆ.
ಪ್ರತಿವರ್ಷ ಮಾರ್ಗಶಿರ ಶುದ್ಧಪೌರ್ಣಮಿ ದಿವಸ ಮರುಳಸಿದ್ದೇಶ್ವರನಿಗೆ ಅಡ್ಡಪಲ್ಲಕ್ಕಿ ಉತ್ಸವ, ದೊಡ್ಡಜಾತ್ರೆಯನ್ನು ಭಕ್ತರು ವಿಜೃಂಭಣೆಯಿಂದ ನಡೆಸುತ್ತಾರೆ. ಗದ್ದಿಗೆ ಸನ್ನಿಧಾನದಲ್ಲಿ ಕಷ್ಟ ಕಾರ್ಪಣ್ಯ ಸಮಸ್ಯೆಗಳನ್ನು ಪರಿಹರಿಸಲು ನಂಬಿಕೆಯಿಂದ ಜನರು ಸೇವೆ ಹಾಗೂ ಹರಕೆಗಳನ್ನು ಮಾಡಿಕೊಳ್ಳುವ ಮುಖಾಂತರ ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.
ಜಾತ್ರೆಗೆ ಬರುವ ಭಕ್ತರಿಗೆ ಮಾಹಿತಿ:
ತುಮಕೂರಿನಿಂದ ಚಿಕ್ಕನಾಯಕನಹಳ್ಳಿ ಮಾರ್ಗವಾಗಿ 11.ಕಿ.ಮೀ. ಕ್ರಮಿಸಿದರೆ ಮಠ ತಲುಪಬಹುದು ಮತ್ತು ಚಿಕ್ಕಮಗಳೂರು, ಅರಸೀಕೆರೆಯಿಂದ ಹಾಗೂ ಹಾಸನ ಕಡೆಯಿಂದ ತಿಪಟೂರಿನ ಮಾರ್ಗವಾಗಿ ಮಠವನ್ನು ತಲುಪಲು ಬಸ್ಸಿನ ಸೌಕರ್ಯಗಳಿವೆ. ಭಕ್ತರಿಗೆ ರಾತ್ರಿ ವಾಸ್ತವ್ಯಕ್ಕೆ ಅನುಕೂಲವಿದೆ. ಬರುವ ಎಲ್ಲಾ ಭಕ್ತರಿಗೆ ಸಿಹಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
