ಶಿರಾ
ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲೇಬೇಕೆಂದು ವಿವಿಧ ಹಂತದ ಪ್ರಚಾರದಲ್ಲಿ ತೊಡಗಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದಲೂ ಬೂತ್ ಮಟ್ಟದಲ್ಲಿ ನಿರಂತರವಾಗಿ ಕಾರ್ಯಕರ್ತರ ಸಭೆ ಕೈಗೊಳ್ಳಲಾಗುತ್ತಿದೆ. ನೇರ ಪರಿವಾರ, ಬಿಜೆಪಿ ಪರಿವಾರ ಎಂಬ ಅಭಿಯಾನ ಪಾಲನೆ ಆಗಿದೆ. ಫೆ.23 ರಂದು ಶಿರಾ ನಗರದ ವಿಜಯರಾಜ್ ಹಾಗೂ ದಿ.ದಾಸರಂಗಪ್ಪ ಅವರ ನಿವಾಸದ ಮೇಲೆ ಪಕ್ಷದ ಧ್ವ್ವಜವನ್ನು ಹಾರಿಸುವ ಮೂಲಕ ವಿವಿಧ ಹಂತದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕಳ್ಳಂಬೆಳ್ಳ-ಚಿಕ್ಕನಹಳ್ಳಿಯಲ್ಲೂ ಧ್ವಜಾರೋಹಣ ಸಭೆಯನ್ನು ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರದ ಸಾಧನೆಗಳನ್ನು ಕರ ಪತ್ರದ ಮೂಲಕ ಮನೆ ಮನೆಗಳಿಗೂ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗುವುದು. ಚಿತ್ರದುರ್ಗದಲ್ಲಿ 27 ರಂದು ಪಕ್ಷದ ಬೃಹತ್ ಸಮಾವೇಶ ನಡೆಯಲಿದೆ. ಮಾ.1 ರಂದು ಚಳ್ಳಕೆರೆಯಲ್ಲಿ ಬೃಹತ್ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ. ಅಂದು ನಡೆಯುವ ಆ ಕಾರ್ಯಕ್ರಮದಲ್ಲಿ 30,000 ಕ್ಕೂ ಹೆಚ್ಚು ಮಂದಿ ಪಕ್ಷದ ಕಾರ್ಯಕರ್ತರು ಸೇರಲಿದ್ದಾರೆ ಎಂದರು
ಮಾರ್ಚ್.2 ರಂದು ದೇಶಾದ್ಯಂತ ಪಕ್ಷದ ವತಿಯಿಂದ ಬೈಕ್ ರ್ಯಾಲಿ ಕೈಗೊಂಡಿದ್ದು ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯ ವಿವಿಧ ತಾಲ್ಲೂಕುಗಳಲ್ಲೂ ಬೈಕ್ ರ್ಯಾಲಿ ನಡೆಯಲಿದೆ. ಕ್ಷೇತ್ರದಲ್ಲಿ ಈ ಹಿಂದೆ ಆಯ್ಕೆಗೊಂಡ ಕಾಂಗ್ರೆಸ್ ಪಕ್ಷದ ಸಂಸದ ಚಂದ್ರಪ್ಪ ಅವರು ಜನ ಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿಲ್ಲವೆಂಬ ಆಪಾದನೆ ಇದ್ದು, ಪ್ರಸಕ್ತ ಚುನಾವಣಾ ಫಲಿತಾಂಶ ಬಿಜೆಪಿ ಪರವಾಗಲಿದೆ ಎಂದು ನವೀನ್ ತಿಳಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ.ಮಂಜುನಾಥ್, ತಾ.ಬಿಜೆಪಿ ಅಧ್ಯಕ್ಷ ಮಾಲಿ ಮರಿಯಪ್ಪ, ನಗರ ಘಟಕದ ಅಧ್ಯಕ್ಷ ಬಿ.ಗೋವಿಂದಪ್ಪ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಲಕ್ಷ್ಮೀನಾರಾಯಣ್, ಬಸವರಾಜು, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ವಿಜಯರಾಜ್, ಕೃಷ್ಣಮೂರ್ತಿ, ರಮೇಶ್(ಪಡಿ), ಶ್ರೀಧರ್, ರಂಗಸ್ವಾಮಿ, ದೇವರಾಜು, ಗಿರಿಧರ್, ವಿರೂಪಾಕ್ಷ ಮುಂತಾದವರು ಹಾಜರಿದ್ದರು.