ಬೆಂಗಳೂರು
ರಾಜ್ಯದ ದೇವಸ್ಥಾನಗಳ ಪ್ರಸಾದ ತಯಾರಿಕಾ ಘಟಕಗಳು ಇನ್ನು ಮುಂದೆ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಸುಳ್ವಾಡಿಯ ಕಚ್ಚುಗತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿತರಿಸಿದ ವಿಷ ಪ್ರಸಾದ ದುರಂತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರವು ದೇವಸ್ಥಾನ ಆಹಾರ ತಯಾರಿಕಾ ಘಟಕಗಳು ಕಡ್ಡಾಯ ಪರಾವನಗಿ ಪಡೆದುಕೊಳ್ಳುವ ಸಂಬಂಧ ಕಟ್ಟುನಿಟ್ಟಾದ ಕಾಯ್ದೆ ರೂಪಿಸಲು ಆರೋಗ್ಯ ಹಾಗು ಮುಜರಾಯಿ ಇಲಾಖೆಗೆ ತಿಳಿಸುವಂತೆ ಸೂಚಿಸಿದೆ.
ರಾಜ್ಯದಲ್ಲಿ ಇದುವರೆಗೂ ಒಟ್ಟು 30 ಸಾವಿರಕ್ಕೂ ಅಧಿಕ ದೇವಸ್ಥಾನಗಳು, ಆಹಾರ ತಯಾರಿಕಾ ಘಟಕಗಳನ್ನು ಹೊಂದಿವೆ. ಇನ್ನು ಮುಂದೆ ಎಲ್ಲ ದೇವಸ್ಥಾನಗಳು ಆರೋಗ್ಯ ಇಲಾಖೆ ರೂಪಿಸುವ ಕಾಯ್ದೆ ಪಡೆದುಕೊಂಡ ನಂತರವೇ ಆಹಾರ ತಯಾರಿಕೆಗೆ ಅನುಮತಿ ದೊರೆಯಲಿದೆ.
ಕಳೆದ ಕೆಲ ದಿನಗಳ ಹಿಂದೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದ ಮುಜರಾಯಿ ಇಲಾಖೆ, ದೇವಸ್ಥಾನಗಳಲ್ಲಿ ಸ್ವಚ್ಛತೆ, ಸಿಸಿ ಕ್ಯಾಮರಾ ಅಳವಡಿಕೆ, ಅಡುಗೆ ತಯಾರಿಕರಿಗೆ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಪ್ರಮಾಣಪತ್ರ ಪಡೆದುಕೊಳ್ಳುವುದು,ಆಹಾರ ತಯಾರಿಸುವ ಘಟಕಗಳಿಗೆ ಪರಾವನಗಿ ಪಡೆದುಕೊಳ್ಳುವ ಕುರಿತಂತೆ ಸೂಚನೆ ನೀಡಿತ್ತು.
ರಾಜ್ಯದ ಮಲೆ ಮಹದೇಶ್ವರ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ ಮಂಜುನಾಥೇಶ್ವರ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಗಳ ಪ್ರಸಾದ ತಯಾರಿಕಾ ಘಟಕಗಳೂ ಸೇರಿದಂತೆ 70 ದೇವಸ್ಥಾನಗಳ ಆಹಾರ ತಯಾರಿಕಾ ಘಟಕಗಳ ಪರಾವನಗಿಯನ್ನು ಪಡೆದುಕೊಂಡಿವೆ.
ಕಾಯ್ದೆ ಜಾರಿಯಾದ ನಂತರ ಪ್ರತಿ ಪ್ರಸಾದ ವಿತರಿಸುವ ದೇವಸ್ಥಾನಗಳು ಕಡ್ಡಾಯ ಪರಾವನಗಿಯನ್ನು ಪಡೆದುಕೊಳ್ಳಬೇಕಾಗಿದೆ. ಶೀಘ್ರದಲ್ಲೇ ಆರೋಗ್ಯ ಇಲಾಖೆ ಈ ಸಂಬಂಧ ಸುತ್ತೋಲೆ ಹೊರಡಿಸಲಿದೆ ಹಾಗೂ ಇನ್ನು ಮುಂದೆ ಪ್ರಸಾದವನ್ನು ಪ್ಲಾಸ್ಟಿಕ್ ಮತ್ತು ರದ್ದಿ ಕಾಗದದಲ್ಲಿ ನೀಡುವಂತಿಲ್ಲ. ಪ್ರಸಾದ ಪ್ಯಾಕ್‍ಗಳ ಮೇಲೆ ಕಡ್ಡಾಯ ದಿನಾಂಕ, ಅವಧಿ ಮುಕ್ತಾಯ ಇನ್ನಿತರ ವಿವರಗಳನ್ನು ಮುದ್ರಿಸುವುದನ್ನು ಆರೋಗ್ಯ ಇಲಾಖೆ ಈಗಾಗಲೇ ಕಡ್ಡಾಯಗೊಳಿಸಿ ಆದೇಶಿಸಿದೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ 37 ಸಾವಿರ ದೇವಸ್ಥಾನ ಸೇರಿದಂತೆ ಒಟ್ಟು 2 ಲಕ್ಷಕ್ಕೂ ಅಧಿಕ ದೇವಸ್ಥಾನಗಳಿದ್ದು, ಇವುಗಳಲ್ಲಿ ಅಂದಾಜು 40 ಸಾವಿರ ದೇವಸ್ಥಾನಗಳು ಪ್ರಸಾದ ವಿತರಿಸುತ್ತಿವೆ. ಈ ಹಿನ್ನೆಲೆ ದೇವಸ್ಥಾನಗಳಲ್ಲಿ ಆಹಾರ ತಯಾರಿಸುವ ಅಡುಗೆ ಮನೆಗಳನ್ನು ಸುರಕ್ಷತಾ ಕಾಯ್ದೆಯಡಿ ತರುವ ಅಗತ್ಯತೆಯನ್ನು ಸರ್ಕಾರ ಕಂಡುಕೊಂಡಿದೆ.
ಕೇಂದ್ರ ಸರ್ಕಾರ ಮಾರ್ಗಸೂಚಿಯನ್ವಯ ಈಗಾಗಲೇ ರಾಜ್ಯ ಆಹಾರ ಸುರಕ್ಷತಾ ಇಲಾಖೆ ದೇವಸ್ಥಾನ ಆಹಾರ ತಯಾರಿಕಾ ಘಟಕಗಳ ಕಡ್ಡಾಯ ಪರಾವನಗಿ ಸಂಬಂಧ ಸುತ್ತೋಲೆ ಕರಡು ಸಿದ್ಧಪಡಿಸಿದೆ. ಬಹುತೇಕ 15 ದಿನಗಳೊಳಗೆ ಈ ಸಂಬಂಧ ಕಾಯ್ದೆ ಜಾರಿಗೆ ಬರಲಿದೆ ಎನ್ನಲಾಗಿದೆ.