ದಾವಣಗೆರೆ:
ಮಹಾನಗರ ಪಾಲಿಕೆ ಚುನಾವಣೆಗೆ ಇಂದು (ನ.12ರಂದು) ಮತದಾನ ನಡೆಯಲಿದ್ದು, ಶಾಂತಿಯುತ ಮತದಾನ ನಡೆಸಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಕಲ ಸಿದ್ಧತೆ ನಡೆಸಿದೆ.
ಮತಗಟ್ಟೆಗೆ ತೆರಳಿದ ಸಿಬ್ಬಂದಿ:
ನಗರದ ಪಿ.ಬಿ. ರಸ್ತೆಯಲ್ಲಿರುವ ಡಿ.ಆರ್.ಆರ್. ಪ್ರೌಢಶಾಲೆಯಲ್ಲಿ ತೆರೆದಿದ್ದ ಮಸ್ಟರಿಂಗ್ ಕೇಂದ್ರಕ್ಕೆ ಸೋಮವಾರ ಹೋದ ಚುನಾವಣಾ ಸಿಬ್ಬಂದಿಗಳು ವಿದ್ಯುನ್ಮಾನ ಮತಯಂತ್ರ (ಇವಿಎಂ), ಮತದಾರರ ಪಟ್ಟಿ, ಮತ ಚಲಾಯಿಸಲು ಬರುವ ಮತದಾರರ ಬೆರಳಿಗೆ ಹಚ್ಚಲು ಶಾಯಿ (ಮಸಿ) ಸೇರಿದಂತೆ ಇತರೆ ಸಾಮಗ್ರಿಗಳನ್ನು ಪಡೆದು ಬಸ್‍ಗಳ ಮೂಲಕ ಸೋಮವಾರ ಸಂಜೆಯೇ ಮತಗಟ್ಟೆಗಳಿಗೆ ಬಂದಿಳಿದಿದ್ದಾರೆ.
ಡಿಸಿ-ಎಸ್ಪಿ ಪರಿಶೀಲನೆ:
ಮಸ್ಟರಿಂಗ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚುನಾವಣಾ ಸಿಬ್ಬಂದಿಗಳ ಜೊತೆಗೆ ಮಧ್ಯಾಹ್ನದ ಉಪಹಾರ ಸವಿದರು.ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮತದಾನ ಒಂದು ಮಹಾನ್ ಕಾರ್ಯ ಆಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಈಗಾಗಲೇ ಸೂಕ್ಷ್ಮ, ಅತಿಸೂಕ್ಷ್ಮ ಬೂತಗಳನ್ನು ಗುರುತಿಸಲಾಗಿದ್ದು, ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.
ಕಣದಲ್ಲಿ 208 ಅಭ್ಯರ್ಥಿ:
ಇಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದ್ದು, ಮಹಾನಗರ ಪಾಲಿಕೆಯ 45 ವಾರ್ಡುಗಳಿಂದ 85 ಜನ ಪಕ್ಷೇತರರು, 44 ಮಂದಿ ಕಾಂಗ್ರೆಸ್, 45 ಜನ ಬಿಜೆಪಿ, 23 ಜನ ಜೆಡಿಎಸ್, ಆರು ಮಂದಿ ಸಿಪಿಐ, ಮೂವರು ಬಿಎಸ್‍ಪಿ, ಇಬ್ಬರು ಕೆಪಿಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 208 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
28 ಅತಿಸೂಕ್ಷ್ಮ ಮತಗಟ್ಟೆ:
1,89,794 ಪುರುಷ, 1,89,526 ಮಹಿಳೆ, 66 ಇತರರು ಮತದಾರರು ಸೇರಿ ಒಟ್ಟು 3,79,386 ಮತದಾರರು ಪಾಲಿಕೆ ವ್ಯಾಪ್ತಿಯ 377 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ. 28 ಅತಿಸೂಕ್ಷ್ಮ, 67 ಸೂಕ್ಷ್ಮ ಹಾಗೂ 282 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಪ್ರತಿ ಅತಿಸೂಕ್ಷ್ಮ ಮತಗಟ್ಟೆಗಳಿಗೆ ಒರ್ವ ಎಎಸ್‍ಐ, ಓರ್ವ ಪೇದೆಯನ್ನು ನಿಯೋಜಿಸಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ. ಚುನಾವಣೆಗೆ 490 ವಿದ್ಯುನ್ಮಾನ ಮತ ಯಂತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ.
ವಾರ್ಡ್ 7ರ ಜಾಲಿ ನಗರ, ದೇವರಾಜ ಅರಸು ಬಡಾವಣೆ ಬಿ ಬ್ಲಾಕ್, ವಾರ್ಡ್ 12 ಅಹಮ್ಮದ್ ನಗರದಲ್ಲಿ ತಲಾ 13 ಅತೀ ಹೆಚ್ಚು ಮತಗಟ್ಟೆ ಕೇಂದ್ರಗಳಿವೆ. ವಾರ್ಡ್ 42ರಲ್ಲಿ ಸಿದ್ದವೀರಪ್ಪ ಬಡಾವಣೆಯಲ್ಲಿ 5 ಮತಗಟ್ಟೆ ಇದ್ದು, ಇದು ಅತೀ ಕಡಿಮೆ ಮತಗಟ್ಟೆ ಕೇಂದ್ರ ಹೊಂದಿರುವ ವಾರ್ಡ್ ಆಗಿದೆ. ವಿಕಲಚೇತನ ಮತ್ತು ಹಿರಿಯ ನಾಗರೀಕ ಮತದಾರರನ್ನು ಗುರುತಿಸಿ, ಮತ ಚಲಾವಣೆ ಮಾಡಲು ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ ಮಾಡಲಾಗುವದು. ಅಲ್ಲದೇ, ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರು ಸೇರಿದಂತೆ ಇತರೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ