ಪ್ರತಿ ನಗರಗಳನ್ನು ರೈಲು ಮಾರ್ಗದ ಮೂಲಕ ಜೋಡಿಸಲು ಕ್ರಮ : ಸುರೇಶ್ ಅಂಗಡಿ

ಬೆಳಗಾವಿ

    ಧಾರವಾಡ ಮತ್ತು ಶಿವಮೊಗ್ಗ-ರಾಣೇಬೆನ್ನೂರ ರೈಲ್ವೆ ಯೋಜನೆಗಳನ್ನು ಮುಂದಿನ ರೈಲ್ವೆ ಬಜೆಟ್ ನಲ್ಲಿ ಅಳವಡಿಸಿಕೊಂಡು ಆದಷ್ಟು ಬೇಗನೇ ಕಾಮಗಾರಿ ಆರಂಭಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ಲಿಫ್ಟ್, ಮೂಲಸೌಕರ್ಯಗಳು, ಸ್ಟೇಷನ್ ಬಿಲ್ಡಿಂಗ್ (ಮ್ಯೂಸಿಯಂ ಬಿಲ್ಡಿಂಗ್) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್ ಫಾರ್ಮ್ ಗಳನ್ನು ವರ್ಚುವಲ್ ವೇದಿಕೆಯ ಮೂಲಕ ತಮ್ಮ ಬೆಳಗಾವಿ ಕಚೇರಿಯಿಂದಲೇ ಉದ್ಘಾಟಿಸಿ ಅವರು ಮಾತನಾಡಿದರು.

     ಒಟ್ಟು 994 ಕೋಟಿ ರೂಪಾಯಿ ವೆಚ್ಚದಲ್ಲಿ ಶಿವಮೊಗ್ಗ-ರಾಣೇಬೆನ್ನೂರ ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉಚಿತವಾಗಿ ಭೂಮಿ ಒದಗಿಸುವ ಜತೆಗೆ ರಾಜ್ಯ ಸರ್ಕಾರದಿಂದ ಶೇ.50 ರಷ್ಟು ಯೋಜನಾ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ದಾವಣಗೆರೆ-ಬೆಂಗಳೂರು ನಡುವೆ ಡಬಲ್ ಲೈನ್ ನಿರ್ಮಾಣಕ್ಕೂ ಜಮೀನು ಒದಗಿಸುವುದಾಗಿ ತಿಳಿಸಿದ್ದಾರೆ ಎಂದರು.

    ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲು ಅಗತ್ಯ ಕ್ರಮವನ್ನು ಇಲಾಖೆಯಿಂದ ಕೈಗೊಳ್ಳಲಾಗುವುದು. ಪ್ರತಿ ನಗರಗಳನ್ನು ರೈಲು ಮಾರ್ಗದ ಮೂಲಕ ಜೋಡಿಸಲು ರೈಲ್ವೆ ಇಲಾಖೆ ಉತ್ಸುಕವಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಸಹಕಾರ ಅಗತ್ಯವಿದೆ ಎಂದರು.

    ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರ ಮನವಿಯ ಮೇರೆಗೆ ಶಿವಮೊಗ್ಗದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗೊಬ್ಬರ ಮತ್ತು ಔಷಧಿಗಳನ್ನು ಸಮರ್ಪಕವಾಗಿ ಸಾಗಾಣಿಕೆ ಮಾಡುವ ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಕೊರೊನಾ ಯೋಧರಂತೆಯೇ ಕಾರ್ಯನಿರ್ವಹಿಸಿದೆ ಎಂದು ಸಚಿವ ಸುರೇಶ್ ಅಂಗಡಿ ಮೆಚ್ಚುಗೆ ವ್ಯಕ್ತಪಡಿಸಿದರು.

     ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಜಿಲ್ಲೆಯ ರೈಲ್ವೆ ಜಾಲ ವಿಸ್ತರಣೆ, ರೈಲುಗಳ ಸಂಖ್ಯೆ ಹೆಚ್ಚಳ ಹಾಗೂ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದು ಕೋರಿದರು.ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಚುವಲ್ ವೇದಿಕೆಯ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap