ಎಲ್ಲರೂ ವೈಯಕ್ತಿಕ ಶುಚಿತ್ವ ಮತ್ತು ಸ್ವಚ್ಛತೆಯಿಂದ ದೈವತ್ವಕ್ಕೆ ಹೋಗಬಹುದು

ತುಮಕೂರು

     ಪ್ರತಿಯೊಬ್ಬ ವ್ಯಕ್ತಿಯೂ ತಾನು ವಾಸಿಸುವ ಮನೆ, ಸುತ್ತಮುತ್ತಲಿನ ಪರಿಸರ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಶುಚಿತ್ವ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಎಲ್ಲರೂ ಶುಚಿತ್ವದಿಂದ ದೈವತ್ವದ ಕಡೆಗೆ ಹೋಗಬಹುದೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಶ್ರೀ ಹಂಚಾಟೆ ಸಂಜೀವ್‍ಕುಮಾರ್ ತಿಳಿಸಿದರು.

    ಅವರು ಇಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಸ್ವಚ್ಛತಾ ‘ನಮ್ಮ ನ್ಯಾಯಾಲಯ-ಸ್ವಚ್ಛ ನ್ಯಾಯಾಲಯ’ ಕಾರ್ಯಕ್ರಮವನ್ನು ನ್ಯಾಯಾಲಯ ಆವರಣವನ್ನು ಸ್ವತಃ ಸ್ವಚ್ಛಗೊಳಿಸುವ ಮೂಲಕ ಅವರು ಮಾತನಾಡಿದರು. ಎಲ್ಲಾ ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಮತ್ತು ಪೌರ ಕಾರ್ಮಿಕರ ಸಹಯೋಗದಲ್ಲಿ ನ್ಯಾಯಾಲಯ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

    ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ವಕೀಲರ ಸಂಘದ ವತಿಯಿಂದ ಎರಡನೇ ಬಾರಿ ಇಡೀ ನ್ಯಾಯಾಲಯದ ಆವರಣವನ್ನು ಸ್ವಚ್ಛಗೊಳಿಸಲಾಗುತ್ತಿದೆ. ಇದೊಂದು ತಂಡಕಾರ್ಯವಾಗಿದ್ದು, ಸ್ವಚ್ಛಗೊಳಿಸ ಬೇಕೆಂಬ ಮನೋಭಾವದಿಂದ ಎಲ್ಲರೂ ಭಾಗವಹಿಸಿದಾಗ ಇಂತಹ ಕಾರ್ಯಗಳು ಯಶಸ್ವಿಯಾಗುತ್ತವೆ. ಜಿಲ್ಲೆಯ ಎಲ್ಲಾ ನಾಗರೀಕರು, ಅಧಿಕಾರಿಗಳು ಮತ್ತು ಸಾರ್ವಜನಿಕರು ತಾವು ವಾಸಿಸುತ್ತಿರುವ ಪ್ರದೇಶಗಳಲ್ಲಿರುವ ಶಾಲೆ, ಕಾಲೇಜು, ಆಸ್ಪತ್ರೆಗಳಂತಹ ಸಾರ್ವಜನಿಕ ಸ್ಥಳಗಳನ್ನು ಸಮುದಾಯ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸಿದಾಗ ಊರು, ಪಟ್ಟಣ, ನಗರ ಹಾಗೂ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

   ಯಾವುದೇ ಒಂದು ಸಂಸ್ಥೆ ಅಥವಾ ಸಂಘಟನೆಗಳು ಸ್ವಚ್ಛಗೊಳಿಸಬೇಕೆಂಬ ಮನೋಭಾವ ತೊರೆದು ಭಾರತದ ಸ್ವಚ್ಛ ಅಭಿಯಾನದಲ್ಲಿ ಎಲ್ಲರೂ ಭಾಗವಹಿಸಿ ದೇಶದ ಈ ಸಿದ್ಧಾಂತವನ್ನು ಯಶಸ್ವಿಗೊಳಿಸಿದಾಗ ವಿಶ್ವಗುರು ಸ್ಥಾನ ಗಳಿಸಲು ಸಾಧ್ಯವಾದೀತು ಅದಕ್ಕಾಗಿ ಪ್ರೇರಣೆ ಮೂಡಿಸಲು ಈ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ 8 ಜನ ಪೌರ ಕಾರ್ಮಿಕರಾದ ರಾಮಮೂರ್ತಿ, ದೊಡ್ಡಹನುಮಯ್ಯ, ಅಂಜನಮೂರ್ತಿ, ತಿಮ್ಮಕ್ಕ, ಪ್ರವೀಣ್, ನರಸಿಂಹಮೂರ್ತಿ, ಅಂಜನಮೂರ್ತಿ ಹಾಗೂ ರಂಗಸ್ವಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

    ಸ್ವಚ್ಛತಾ ಕಾರ್ಯಕ್ರಮದಲ್ಲಿ ಎಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಕೆ. ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಆರ್. ದೇವರಾಜ್ ಹಾಗೂ ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಪೌರ ಕಾರ್ಮಿಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link