ತುರುವೇಕೆರೆ
ಕರೊನಾ ಸೋಂಕಿನ ಇಂದಿನ ವಿಷಮ ಸ್ಥಿತಿಯಲ್ಲಿಯೂ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಏಕೆ ಚಾಲನೆ ಮಾಡಿಲ್ಲ? ಯಾರಿಗಾದರೂ ಸೋಂಕು ಕಂಡು ಬಂದರೆ ತಕ್ಷಣ ಏನು ಕ್ರಮ ಕೈಗೊಳ್ಳುತ್ತೀರಿ? ಕೂಡಲೇ ವೆಂಟಿಲೇಟರ್ ಕನೆಕ್ಷನ್ ಮಾಡಿಸಿರೆಂದು ಟಿಎಚ್‍ಓ ಮತ್ತು ಸಾರ್ವಜನಿಕ ಆಸ್ಪತ್ರೆಯ ಎಎಂಗೆ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಅಧ್ಯಕ್ಷತೆ ಹಾಗು ಶಾಸಕ ಮಸಾಲ ಜಯರಾಮ್ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಕಾರಿಗಳೊಂದಿಗೆ ಕರೊನಾ ಸೋಂಕಿನ ಮುಂಜಾಗ್ರತಾ ಕ್ರಮಗಳ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಇಲ್ಲಿರುವ 2 ಆ್ಯಂಬ್ಯುಲೆನ್ಸ್‍ನಿಂದ ರೋಗಿಗಳನ್ನು ಕರೆತರಲು ಸಾಧ್ಯವಿದೆಯಾ? ಪಟ್ಟಣದಲ್ಲಿ ಖಾಸಗಿ ಕ್ಷಿನಿಕ್‍ಗಳು ತೆರೆದಿವೆಯಾ? ತೆರೆಯದಿದ್ದರೆ ಪರವಾನಗಿ ರದ್ದು ಪಡಿಸಿ, ಎಂದರಲ್ಲದೆ ನಂಜನಗೂಡು ಮತ್ತು ನಿಜಾಮುದ್ದೀನ್‍ನಂತಹ ಪ್ರಕರಣಗಳನ್ನು ನೋಡಿದರೆ ಕರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಹಾಗಾಗಿ ಎಲ್ಲರೂ ಬಹು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಅವರು ಟಿಎಚ್‍ಓಗೆ ಸೂಚಿಸಿದರು.
ತಾಲ್ಲೂಕಿನಲ್ಲಿ 22 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಬೆಂಗಳೂರಿನಿಂದ 15,688 ಮಂದಿ ತಾಲ್ಲೂಕಿಗೆ ಬಂದಿದ್ದಾರೆಂದು ಟಿಎಚ್‍ಓ ಡಾ.ಸುಪ್ರಿಯಾ ಸಭೆಯಲ್ಲಿ ಮಾಹಿತಿ ನೀಡಿದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇದೆ. ಆದರೆ ಆಕ್ಸಿಜನ್ ಇಲ್ಲವಲ್ಲ ಹೇಗೆ ನಿಭಾಯಿಸುತ್ತೀರಿ, ನೀವು ಇತ್ತ ಗಮನ ಹರಿಸಿಲ್ಲವೆ ಎಂದು ಸಚಿವರು ಡಿಹೆಚ್‍ಓ ಅವರನ್ನು ಪ್ರಶ್ನಿಸಿದರು.
ಪಟ್ಟಣವನ್ನು ಸ್ವಚ್ಛಗೊಳಿಸಿ ಸುಸ್ಥಿತಿಯಲ್ಲಿಡಿ. ಅಗತ್ಯ ವಸ್ತುಗಳು ಜನರಿಗೆ ಸಿಗುವಂತೆ ನೋಡಿಕೊಳ್ಳಿ, ಸರ್ಕಾರ ನೀಡುವ ಹಾಲನ್ನು ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಮಾಡಿ. ಇದರಲ್ಲಿ ರಾಜಕೀಯ ತರಬೇಡಿ, ರಾಜಕೀಯದವರನ್ನು ಹೊರತು ಪಡಿಸಿ ಸ್ಕೌಟ್ಸ್ ಮತ್ತು ಎನ್‍ಸಿಸಿ ಪಡೆ ನೆರವನ್ನು ಪಡೆದುಕೊಳ್ಳಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿಗೆ ತಾಕೀತು ಮಾಡಿದರು.
ಆಯಾ ಹೋಬಳಿ ವ್ಯಾಪ್ತಿಯಲ್ಲಿ ನಿಗದಿಪಡಿಸಿದ ದಿನದಂದು ಸಾರ್ವಜನಿಕರು ತರಕಾರಿ ಹಾಗೂ ಇತರೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಅನುವು ಮಾಡಿ ಕೊಡಿ. ರೈತರು ಬೆಳೆದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಡಿ ಎಂದು ತೋಟಗಾರಿಕೆ ಇಲಾಖಾಧಿಕಾರಿ ರೇಖಾ ಮತ್ತು ತಹಸೀಲ್ದಾರ್‍ಗೆ ಸಲಹೆ ನೀಡಿದರು.
ಆಹಾರ ಇಲಾಖೆಯ ಶಿರಸ್ತೆದಾರ್ ಪ್ರೇಮ ಮಾತನಾಡಿ, ತಾಲ್ಲೂಕಿನಾದ್ಯಂತ ಪಡಿತರ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದಾಗ, ಶಾಸಕರು ಕೆಲ ನ್ಯಾಯ ಬೆಲೆ ಅಂಗಡಿಗಳಲ್ಲಿ 100 ರೂಪಾಯಿಗಳ ಲಂಚ ಕೇಳುತ್ತಿದ್ದಾರೆಂಬ ಆರೋಪವಿದೆ ಎಂದು ಆರೋಪಿಸಿದಾಗ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಅಂತಹ ಅಂಗಡಿಗಳ ಪರವಾನಗಿಯನ್ನು ಮುಲಾಜಿಲ್ಲದೆ ರದ್ದುಪಡಿಸಲಾಗುವುದೆಂದು ಖಡಕ್ ಎಚ್ಚರಿಕೆ ರವಾನಿಸಿದರು.
ಎಪಿಎಂಸಿಯಲ್ಲಿ ರೈತರಿಂದ ಕೊಬ್ಬರಿ ಮಾತ್ರ ತೆಗೆದುಕೊಳ್ಳಿ, ಯಾವುದೇ ಕಾರಣಕ್ಕೂ ಆ ಕೊಬ್ಬರಿಯನ್ನು ಹೊರಗೆ ರವಾನೆ ಮಾಡಲು ಅವಕಾಶ ಕೊಡಬೇಡಿ. ಇಲ್ಲವಾದರೆ ನೀವೇ ಮನೆಗೆ ಹೋಗಬೇಕಾದೀತು ಎಂದು ಸಚಿವರು ಎಪಿಎಂಸಿ ಕಾರ್ಯದರ್ಶಿಗೆ ಖಡಕ್ ಎಚ್ಚರಿಕೆ ನೀಡಿದರು.
ಬೇಸಿಗೆಯಲ್ಲೂ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು, ಖುದ್ದು ಸ್ಥಳಕ್ಕೆ ಹೋಗಿ ವಾಸ್ತವಾಂಶದ ಮಾಹಿತಿ ತನ್ನಿ ಎಂದು ತಾ.ಪಂ ಇಓ ಜಯಕುಮಾರ್ ಹಾಗೂ ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿ ಇಂತಿಯಾಜ್ ಅಹಮದ್‍ಗೆ ಸಚಿವರು ಹಾಗೂ ಶಾಸಕ ಮಸಾಲಜಯರಾಮ್ ತರಾಟೆಗೆ ತೆಗೆದುಕೊಂಡರು.
ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ತುರುವೇಕೆರೆ ಕೊರೊನಾ ಸೋಂಕಿನಲ್ಲಿ ಸುರಕ್ಷಿತವಾಗಿದೆ. ಆದರೆ ಈಚಿನ ಮಂಡ್ಯ ಜಿಲ್ಲೆಯ ಕೊರೊನಾ ಬೆಳವಣಿಗೆಯ ಭೀತಿ ತುರುವೇಕೆರೆಯನ್ನೂ ಬಾಧಿಸದೆ ಬಿಡದು. ಅನಾವಶ್ಯಕವಾಗಿ ವಾಹನಗಳಲ್ಲಿ ಓಡಾಡುವವರಿಗೆ ಪೆಟ್ರೋಲ್ ನಿಲ್ಲಿಸಿ. ಇಂತಹ ಸಂದರ್ಭದಲ್ಲಿ ತಹಸೀಲ್ದಾರ್, ಎಸಿ ಹಾಗು ಪಿಎಸ್‍ಐ ಜವಾಬ್ದಾರಿ ಹೆಚ್ಚಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೃಷಿಗೆ ಸಂಬಂಧಿಸಿದಂತೆ ಬೀಜ, ರಸಗೊಬ್ಬರ ವಿತರಣೆ, ಸಮರ್ಪಕ ವಿದ್ಯುತ್‍ಗೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಕಲ್ಯಾಣ್, ಡಿಹೆಚ್‍ಓ. ಚಂದ್ರಕಲಾ, ಎಸ್‍ಪಿ. ಡಾ.ವಂಶಿಕೃಷ್ಣ, ಎಸಿ. ಕೆ.ಆರ್.ನಂದಿನಿ, ತಹಸೀಲ್ದಾರ್ ಆರ್.ನಯಿಂಉನ್ನೀಸಾ, ಟಿಹೆಚ್‍ಓ. ಸುಪ್ರಿಯಾ, ಪ.ಪಂ. ಮುಖ್ಯಾಧಿಕಾರಿ ಮಂಜುಳಾದೇವಿ, ಸಿಪಿಐ. ಲೋಕೇಶ್ ಸೇರಿದಂತೆ ತಾಲ್ಲೂಕು ಮಟ್ಟದ ಇಲಾಖಾಧಿüಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ