ವಿದ್ಯುನ್ಮಾನ ಮತಯಂತ್ರಗಳು ವಿಶ್ವಾಸಕ್ಕೆ ಅರ್ಹ

ಚಿತ್ರದುರ್ಗ

         ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಬಳಸಲಾಗುತ್ತಿರುವ ವಿದ್ಯುನ್ಮಾನ ಮತಯಂತ್ರಗಳು ಅತ್ಯಂತ ಸುರಕ್ಷಿತ ಹಾಗೂ ವಿಶ್ವಾಸಕ್ಕೆ ಅರ್ಹವಾಗಿದ್ದು, ಯಂತ್ರಗಳ ಬಗ್ಗೆ ವರದಿಯಾಗುವ ಯಾವುದೇ ವದಂತಿಗಳನ್ನು ಮತದಾರರು ಅಥವಾ ಸಾರ್ವಜನಿಕರು ನಂಬಬಾರದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಅವರು ಹೇಳಿದರು.

        ಚಿತ್ರದುರ್ಗ ಜಿಲ್ಲಾಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ನಗರದ ತ.ರಾ.ಸು. ರಂಗಮಂದಿರದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

         ಸುಲಲಿತವಾಗಿ ಚುನಾವಣೆ ಪ್ರಕ್ರಿಯೆ ಹಾಗೂ ವಿಶ್ವಾಸರ್ಹವಾಗಿ ಮತದಾನ ಪ್ರಕ್ರಿಯೆ ನಡೆಯಬೇಕು ಎನ್ನುವ ಉದ್ದೇಶದಿಂದ ಚುನಾವಣಾ ಆಯೋಗ ಅತ್ಯಂತ ಸುರಕ್ಷಿತ ಹಾಗೂ ನಂಬಲಾರ್ಹ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಜಾರಿಗೆ ತಂದಿದೆ. ಆದರೆ ಕೆಲವರು, ವಿದ್ಯುನ್ಮಾನ ಮತಯಂತ್ರವನ್ನು ರಿಮೋಟ್ ಕಂಟ್ರೋಲ್‍ನಿಂದ ನಿಯಂತ್ರಿಸಬಹುದು, ಇಂಟರ್‍ನೆಟ್ ಅಥವಾ ಇನ್ಯಾವುದೇ ವಿಧಾನದಿಂದ ಹ್ಯಾಕ್ ಮಾಡಿ, ತಮಗೆ ಅನುಕೂಲವಾಗುವ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದು, ಹೀಗೆ ಇಂತಹ ಅನೇಕ ಕಪೋಲ ಕಲ್ಪಿತ ಹಾಗೂ ಸತ್ಯಕ್ಕೆ ದೂರವಾದ ವದಂತಿಗಳನ್ನು ಹರಡುತ್ತಿದ್ದು, ಮತದಾರರು ಅಥವಾ ಸಾರ್ವಜನಿಕರು ಇಂತಹ ಸುಳ್ಳು ವರದಿಯನ್ನು ನಂಬಬಾರದು.

         ಚುನಾವಣೆ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಮೂಲಕ ಮತದಾರರು ಚಲಾಯಿಸುವ ಪ್ರತಿಯೊಂದು ಮತವೂ ಅತ್ಯಂತ ಸುರಕ್ಷಿತ ಹಾಗೂ ಖಚಿತವಾಗಿರುತ್ತದೆ. ಹೀಗಾಗಿ ಮತಯಂತ್ರಗಳ ಬಳಕೆ, ಮತದಾನ ಚಲಾಯಿಸುವ ಬಗೆ ಹಾಗೂ ಮತಯಂತ್ರಗಳ ಕುರಿತು ಮತದಾರರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.

         ಅಲ್ಲದೆ ಚುನಾವಣೆ ಬಳಿಕ, ಮತಯಂತ್ರಗಳನ್ನು ನಿಯಮಾನುಸಾರ 5 ವರ್ಷಗಳ ಕಾಲ ಸುರಕ್ಷಿತವಾಗಿ ಕಾಯ್ದಿರಿಸುವ ವ್ಯವಸ್ಥೆಯೂ ಜಾರಿಯಲ್ಲಿದೆ. ಇತ್ತೀಚಿನ ಚುನಾವಣೆಗಳನ್ನು ಗಮನಿಸಿದಾಗ, ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಿನ ಮತದಾನ ಪ್ರಮಾಣ ದಾಖಲಾಗುತ್ತಿದೆ. ನಗರಗಳಲ್ಲಿಯೇ ಹೆಚ್ಚು ಅಕ್ಷರಸ್ಥರಿದ್ದರೂ, ಮತದಾನದಲ್ಲಿ ಮಾತ್ರ ಪಾಲ್ಗೊಳ್ಳದಿರುವುದು, ಮತದಾನ ಪ್ರಕ್ರಿಯೆಯಿಂದ ವಿಮುಖರಾಗುವುದು ಸರಿಯಲ್ಲ. ಏಕೆಂದರೆ ಪ್ರತಿಯೊಂದು ಮತವೂ ಅಮೂಲ್ಯವಾಗಿದ್ದು, ಅಭಿವೃದ್ಧಿಯ ದೃಷ್ಟಿಕೋನದಿಂದ ಒಳ್ಳೆಯ ವ್ಯಕ್ತಿಯನ್ನು ಚುನಾವಣೆಯಲ್ಲಿ ಆರಿಸುವುದು ಪ್ರತಿಯೊಂದು ಮತದಾರರ ಕರ್ತವ್ಯವಾಗಿರುತ್ತದೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನೂ ತಪ್ಪದೆ ಮತದಾನ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಅವರು ಮನವಿ ಮಾಡಿದರು.

        ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ವಿದ್ಯುನ್ಮಾನ ಮತಯಂತ್ರಗಳ ಸುರಕ್ಷತೆ ಹಾಗೂ ಬಳಕೆ ಕುರಿತಂತೆ ಪ್ರತಿಯೊಂದು ಮತಗಟ್ಟೆಯ ವ್ಯಾಪ್ತಿಯಲ್ಲಿ ಮತಯಂತ್ರಗಳ ಮೂಲಕ ಮತದಾನ ಮಾಡುವ ಪ್ರಾತ್ಯಕ್ಷಿಕೆ ಏರ್ಪಡಿಸಲಾಗುವುದು. ಸೆಕ್ಟರ್ ಅಧಿಕಾರಿಗಳಿಗೆ ಇದರ ಜವಾಬ್ದಾರಿ ನೀಡಲಾಗಿದ್ದು, ಗ್ರಾಮಗಳಲ್ಲಿ ಮತಯಂತ್ರ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮ ಏರ್ಪಡಿಸುವ ದಿನಾಂಕ ಹಾಗೂ ಸ್ಥಳದ ಕುರಿತು ಪ್ರಕಟಿಸಲಾಗುವುದು.

         ಮತಯಂತ್ರ ಬಳಕೆ ಮತದಾನಕ್ಕೆ ಅತ್ಯಂತ ಸುರಕ್ಷಿತ ವಿಧಾನವಾಗಿದ್ದು, ಮತದಾರರು ತಮ್ಮ ಮತವನ್ನು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ವಿವಿ ಪ್ಯಾಟ್ ಯಂತ್ರವನ್ನು ಪರಿಚಯಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲಿಯೂ ಮತ ಖಾತ್ರಿ ಯಂತ್ರವನ್ನು ಅಳವಡಿಸಲಾಗುತ್ತಿದ್ದು, ಮತಯಂತ್ರದಲ್ಲಿ ಮತ ಚಲಾಯಿಸಿದ ಬಳಿಕ ವಿವಿ ಪ್ಯಾಟ್ ಯಂತ್ರದಲ್ಲಿ ಮತದಾರರು ತಾವು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೀರಿ ಎಂಬುದನ್ನು ಪ್ರದರ್ಶಿಸುವ ವ್ಯವಸ್ಥೆ ವಿವಿ ಪ್ಯಾಟ್ ಯಂತ್ರದಲ್ಲಿದ್ದು, ಇದು 7 ಸೆಕೆಂಡ್‍ಗಳ ಕಾಲ ಡಿಸ್‍ಪ್ಲೇ ಇರುತ್ತದೆ. ಮತಯಂತ್ರಗಳಿಗೆ ಯಾವುದೇ ರಿಮೋಟ್ ಯಂತ್ರದಿಂದ ನಿಯಂತ್ರಿಸುವ ಅಥವಾ ಬೇರೆ ಉಪಕರಣ ಅಥವಾ ಇಂಟರ್‍ನೆಟ್ ಸಂಪರ್ಕ ಕಲ್ಪಿಸಲು ಸಾಧ್ಯವಿರುವುದಿಲ್ಲ. ಹೀಗಾಗಿ ಮತಯಂತ್ರದ ಬಗ್ಗೆ ಯಾರೂ ಗೊಂದಲಕ್ಕೆ ಅಥವಾ ಅನುಮಾನಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.

         ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಅವರು ಮಾತನಾಡಿ, ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಮತ ಯಂತ್ರಗಳ ಬಳಕೆ ಹಾಗೂ ಮತದಾನ ವಿಧಾನ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗುವುದು. ರಾಜಕೀಯ ಪಕ್ಷಗಳು ಇಂತಹ ಜಾಗೃತಿ ಕಾರ್ಯಕ್ರಮಕ್ಕೆ ಬೂತ್ ಮಟ್ಟದ ಏಜೆಂಟರು ಹಾಜರಿರುವಂತೆ ನೋಡಿಕೊಳ್ಳಬೇಕು. ಸ್ಥಳೀಯ ಮಟ್ಟದ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣ ದಾಖಲಾಗುವಂತೆ, ಬರುವ ಲೋಕಸಭೆ ಚುನಾವಣೆಯಲ್ಲಿಯೂ ಜಿಲ್ಲೆಯಲ್ಲಿ ಹೆಚ್ಚಿನ ಮತದಾನ ಪ್ರಮಾಣ ಆಗಬೇಕು. ಎಲ್ಲ ಮತದಾರರು ಸದೃಢ ಪ್ರಜಾಪ್ರಭುತ್ವ, ಸದೃಢ ದೇಶ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತಪ್ಪದೆ ಮತದಾನ ಮಾಡಬೇಕು ಎಂದರು.

          ಜಿಲ್ಲಾ ರಕ್ಷಣಾಧಿಕಾರಿ ಡಾ. ಅರುಣ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ನಗರಸಭೆ ಪೌರಾಯುಕ್ತ ಚಂದ್ರಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ತಹಸಿಲ್ದಾರ್ ಕಾಂತರಾಜ್ ಉಪಸ್ಥಿತರಿದ್ದರು. ಜಿಲ್ಲೆಯ ಸೆಕ್ಟರ್ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು, ಬೂತ್ ಮಟ್ಟದ ಅಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡು, ಮತಯಂತ್ರಗಳ ಬಳಕೆ ಕುರಿತು ಅಣಕು ಮತದಾನದ ಮೂಲಕ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಶ್ಮೀರದಲ್ಲಿ ಗುರುವಾರದಂದು ಉಗ್ರರ ದಾಳಿಗೆ ಒಳಗಾಗಿ ವೀರ ಮರಣವನ್ನಪ್ಪಿದ ದೇಶದ ಯೋಧರಿಗೆ ಎರಡು ನಿಮಿಷ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link