ಚಿಕ್ಕಬಳ್ಳಾಪುರ
ಚುನಾವಣಾ ಅಕ್ರಮಗಳನ್ನು ಪತ್ತೆ ಮಾಡುವ ಚುನಾವಣಾ ಕಣ್ಗಾವಲು ತಂಡ ಇಲ್ಲಿಗೆ ಸಮೀಪದ ನಂದಿ ಕ್ರಾಸ್ ಬಳಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಕಾರು ತಡೆದು ತಪಾಸಣೆ ನಡೆಸಿತು. ಕುಮಾರ ಸ್ವಾಮಿ ಕಾರು ಸಾಗುತ್ತಿದ್ದಾಗ ತಪಾಸಣಾ ತಂಡ ಕಾರು ನಿಲ್ಲಿಸುವಂತೆ ಸೂಚಿಸಿತು. ಚುನಾವಣಾಧಿಕಾರಿಗಳು ಕಾರಿನಲ್ಲಿ ಹಣ, ಬೆಲೆ ಬಾಳುವ ವಸ್ತುಗಳಿಗಾಗಿ ತಡಕಾಡಿತು. ಕೊನೆಗೆ ಏನೂ ಸಿಗದ ಕಾರಣ ಮುಂದೆ ಹೋಗುವಂತೆ ಸೂಚಿಸಿತು.
ಈ ಬೆಳವಣಿಗೆಯಿಂದ ಸಿಡಿಮಿಡಿಗೊಂಡ ಕುಮಾರ ಸ್ವಾಮಿ, ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸುಧಾಕರ್ ಕಾರನ್ನು ತಪಾಸಣೆ ಮಾಡುವುದಿಲ್ಲವೆ ಎಂದು ಖಾರವಾಗಿ ಪ್ರಶ್ನಿಸಿದರು. ಅವರ ವಾಹನದಲ್ಲಿ ಅಮೂಲ್ಯ ವಸ್ತುಗಳು ದೊರೆಯಬಹದು. ನಮ್ಮ ವಾಹನದಲ್ಲಿ ಏನಿದೆ ಎಂದು ತಪಾಸಣೆ ಮಾಡುತ್ತಿದ್ದೀರಾ ಎಂದು ರೇಗಿದರು.
ಉಪ ಚುನಾವಣೆಯಲ್ಲಿ ಪೊಲೀಸರ ಕಾರಿನಲ್ಲೇ ಹಣ ಸಾಗಾಣಿಕೆ ಆಗುತ್ತಿದೆ ಎಂಬುದು ತಮಗೆ ಗೊತ್ತಿದೆ. ಪೊಲೀಸರ ಮೇಲೆ ನಮಗೆ ದೂರುಗಳು ಬಂದಿವೆ. ಎಚ್ಚರಿಕೆಯಿಂದ ಇರಿ ಎಂದು ಬೆದರಿಸಿದರು. ಪೊಲೀಸರು ನಿಮ್ಮ ಕೆಲಸವನ್ನು ಆತ್ಮ ಸಾಕ್ಷಿಯಿಂದ ನಿರ್ವಹಿಸಿ. ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರಿಗೆ ಮತ ಹಾಕಿ ಎಂದು ನಮ್ಮ ಜೆಡಿಎಸ್ ಕಾರ್ಯಕರ್ತರಿಗೆ ನೀವೇ ಹೇಳುತ್ತಿದ್ದೀರಾ. ಹಾಗೊಂದು ವೇಳೆ ಅನರ್ಹ ಶಾಸಕರ ಪರವಾಗಿ ಮತ ಯಾಚಿಸಿ ನನ್ನ ಕೈಗೆ ಸಿಕ್ಕಿಹಾಕಿಕೊಂಡರೆ ಆಗ ಗೊತ್ತಾಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಡಿಸೆಂಬರ್ 9 ರ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವುದಿಲ್ಲ. ಸುಧಾಕರ್ ಸಹ ರಾಜಕೀಯದಲ್ಲಿ ಮುಂದುವರೆ ಯುವುದಿಲ್ಲ. ಇವೆಲ್ಲವನ್ನು ತಿಳಿದುಕೊಂಡು ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಬುದ್ದಿ ಮಾತು ಹೇಳಿದರು. ನೀವೆಲ್ಲಾ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ನೀವೆಲ್ಲಾ ಯುವಕರು. ನಮ್ಮ ಪಕ್ಷದ ಪರ ಮಾಡಿ ಎಂದು ನಾನು ಹೇಳುವುದಿಲ್ಲ. ಆದರೆ ಕ್ರಿಮಿನಲ್ ಹಿನ್ನೆಲೆಯುಳ್ಳವರಿಗೆ ಬೆಂಬಲ ಕೊಟ್ಟರೆ ಸಮಾಜದ ಅದಃಪತನಕ್ಕೆ ನಾಂದಿಯಾಗುತ್ತದೆ ಎಂದು ಕುಮಾರ ಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ