ಬೆಂಗಳೂರು
ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯಿದೆ ತಿದ್ದುಪಡಿಯು ರಾಜ್ಯದಲ್ಲಿ ಮತ್ತೆ ಜಮೀನ್ದಾರಿ ಪದ್ಧತಿ ಅಸ್ತಿತ್ವಕ್ಕೆ ಬರಲು ದಾರಿ ಮಾಡಿಕೊಡಲಿದ್ದು, ಈ ತಿದ್ದುಪಡಿಯಿಂದ ಬೆಂಗಳೂರು ಭೂ ಮಾಫಿಯಾ ಮತ್ತೆ ತಲೆ ಎತ್ತಲಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಭೂ ಸ್ವಾಧೀನ ಕಾಯ್ದೆ ಬಗ್ಗೆ ಉಲ್ಲೇಖಿಸಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಬಡ ರೈತರ ಕುಟುಂಬಗಳು ಬೀದಿಗೆ ಬೀಳಲಿವೆ. ರಿಯಲ್ ಎಸ್ಟೇಟ್ ಕುಳಗಳಿಗೆ ದಾರಿ ಮಾಡಿಕೊಡಲಿದೆ. ಕೆಐಎಡಿಬಿ 36 ಸಾವಿರ ಎಕರೆ ಅಭಿವೃದ್ಧಿಯಾಗದ ಭೂಮಿ ಹೊಂದಿದೆ. ಇದನ್ನು ಕೈಗಾರಿಕಾ ಅಭಿವೃದ್ಧಿಗೆ ಬಳಸಿಕೊಳ್ಳಬಹುದಾಗಿದೆ. ಇದನ್ನು ಬಿಟ್ಟು ರೈತರನ್ನು ಬೀದಿಗೆ ತಳ್ಳುವುದು ಸರಿಯಲ್ಲ ಎಂದು ಪತ್ರದಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಳುವವನೇ ಭೂಮಿಯ ಒಡೆಯ ಕಾಯ್ದೆಯನ್ನು ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದು, ಈ ಕಾಯ್ದೆ ಇಲ್ಲಿಯವರೆಗೆ ರೈತರ ಹಿತ ರಕ್ಷಣೆಯನ್ನು ಮಾಡುತ್ತಿತ್ತು. ಆದರೀಗ ಸರ್ಕಾರದ ಹೊಸ ತಿದ್ದುಪಡಿ ಇದಕ್ಕೆ ತದ್ವಿರುದ್ಧವಾಗಿದೆ. ಇದನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಬೇಕು. ಭಾರತದಲ್ಲಿ ಕೃಷಿ ಅತಿ ದೊಡ್ಡ ಜೀವನೋಪಾಯವಾಗಿದೆ. ಕೃಷಿ ಭೂಮಿ ಗ್ರಾಮೀಣ ಜೀವನೋಪಾಯದ ಆಂತರಿಕ ಭಾಗವಾಗಿದೆ. ಅದಕ್ಕೆ ಭಾವನಾತ್ಮಕ ಮೌಲ್ಯವಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೃಷಿ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ಕರ್ನಾಟಕ ಸರ್ಕಾರ ತೆಗೆದುಕೊಂಡ ನಿರ್ಧಾರ ಏಕಪಕ್ಷೀಯವಾಗಿದೆ. ಕಾಯ್ದೆ ಜಾರಿಗೆ ಮೊದಲು ವಿಧಾನಸಭೆಯಲ್ಲಿ ಚರ್ಚಿಸಬೇಕಿತ್ತು. ರೈತ ವಿರೋಧಿಯಾಗಿರುವ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಯನ್ನು ತಡೆ ಹಿಡಿಯಲು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪಗೆ ನಿರ್ದೇಶಿಸಿ ರದ್ದು ಪಡಿಸುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
