ಪಾವಗಡ
ಬಿಜೆಪಿ ರಾಜ್ಯಾಧ್ಯಕ್ಷರ ಅಪ್ಪಣೆಯ ಮೇರೆಗೆ ಪಕ್ಷ ಸಂಘಟನೆ ಹಾಗೂ ಮುಂಬರುವ ಲೋಕಸಮರಕ್ಕೆ ಕಾರ್ಯಕರ್ತರು ಸಜ್ಜಾಗುವಂತೆ ಮಾಜಿ ಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.
ಅವರು ಪಾವಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಹಾಗೂ ಮಾದಿಗರ ಸಭೆ ನಡೆಸಿ ಪ್ರತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದ ಮೊದಲ ವಿಶ್ವನಾಯಕ ಎಂದ ಅವರು ಹತ್ತು ಕೋಟಿ ಶೌಚಾಲಯ ನಿರ್ಮಾಣ, 6 ಕೋಟಿ ಉಜ್ವಲ ಯೋಜನೆ, ಆಯುಶ್‍ಮಾನ್ ಯೋಜನೆಯಲ್ಲಿ 5 ಲಕ್ಷದ ವರೆಗೆ ಭದ್ರತೆ ನೀಡಿದ್ದು, ದೇಶದ ರಕ್ಷಣಾ ಕ್ಷೇತ್ರದಲ್ಲಿ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ಭಾರತ ವಿಶ್ವದಲ್ಲೇ ಬಲಿಷ್ಠರಾಷ್ಟ್ರವಾಗಲು ಸಾಧ್ಯವಾಯಿತೆಂದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ನೀಡುವುದರ ಮೂಲಕ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿ ಕಾಣಬೇಕೆಂದ ಅವರು, ರಾಜ್ಯಾಧ್ಯಕ್ಷರು ಹಾಗೂ ಪಕ್ಷ ಬಯಸಿದರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂದು ತಿಳಿಸಿದರು.
ಹಾಲಿ ಸಂಸದರ ನಡೆಗೆ ಮಾದಿಗ ಸಮುದಾಯ ಖಂಡನೆ:
ಇದೇ ಸಂದರ್ಭದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎ.ನಾರಾಯಣ ಸ್ವಾಮಿಗೆ ಬಿಜೆಪಿಯಲ್ಲಿ ಟಿಕೆಟ್ ನೀಡಿದರೆ ತಾಲ್ಲೂಕಿನ ಮಾದಿಗ ಸಮುದಾಯದ ಸಂಘಟನೆಗಳಿಂದ ಬೆಂಬಲ ಸೂಚಿಸುವುದಾಗಿ ಸಮುದಾಯದ ಮುಖಂಡ ಸಿ.ಕೆ.ತಿಪ್ಪೆಸ್ವಾಮಿ ತಿಳಿಸಿದರು.
ಸಮುದಾಯದ ಮತ್ತೊಬ್ಬ ಮುಖಂಡ ವಳ್ಳೂರು ನಾಗೇಶ್, ಹಾಲಿ ಸಂಸದರು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದಾಗ ತಮ್ಮ ಸಮುದಾಯದವರೆಂದು ಭಾವಿಸಿ ತಾಲ್ಲೂಕಿನಿಂದ ಹೆಚ್ಚು ಮತಗಳನ್ನು ನೀಡಿ ಲೋಕಸಭೆಗೆ ಆರಿಸಿ ಕಳುಹಿಸಿದರೆ ತಾವು ಅಭಿವೃದ್ದಿಯಾದರೆ ಹೊರತು, ತಮ್ಮ ಸಮುದಾಯದ ಮಾದಿಗರನ್ನು ಅಭಿವೃದ್ದಿಯಾಗಲು ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐದು ವರ್ಷಗಳ ಅವಧಿಯಲ್ಲಿ ತಾಲ್ಲೂಕಿಗೆ ಭೇಟಿ ನೀಡಿದ ವೇಳೆ ಒಂದು ಬಾರಿಯಾದರೂ ತಾಲ್ಲೂಕಿನ ಯಾವುದೇ ಗ್ರಾಮದ ಮಾದಿಗರ ಕಾಲನಿಗೆ ಭೇಟಿ ನೀಡಿದ್ದರೆ ಹೇಳಲಿ. ಇಂತಹವರು ನಮ್ಮ ಸಂಸದರು ಎಂದು ಕಡಪಲಕೆರೆ ಹನುಂತರಾಯ ವ್ಯಂಗವಾಡಿದರು.
ಈ ಸಂದರ್ಭದಲ್ಲಿ ಮಾದಿಗ ಸಂಘಟನೆಗಳ ಮುಖಂಡರಾದ ರಾಮಸುಬ್ಬಯ್ಯ, ಕನ್ನಮೇಡಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
