ಮಾಜಿ ಶಾಸಕರಿಂದ ಪ್ರಜಾಪ್ರಭುತ್ವ ಕಗ್ಗೊಲೆ

ತುಮಕೂರು
     ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಅಧಿಕಾರಿಗಳು ಹಾಗೂ ಪೋಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ಮಾಡುತ್ತಿದ್ದು, ಇದರಲ್ಲಿ  ಮಾಜಿ ಶಾಸಕ ಸುರೇಶ್‍ಗೌಡರ ಕೈವಾಡವೂ ಇದೆ. ಇದರಿಂದ ಪ್ರಜಾಪ್ರಭುತ್ವ ಕಗ್ಗೊಲೆ ಆಗುತ್ತಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾಜಿ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದರು.
      ನಗರದ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಗೌರಿಶಂಕರ್ ತಮಗೆ ಬೇಕಾದ ಅಧಿಕಾರಿಗಳನ್ನು ಕ್ಷೇತ್ರದಲ್ಲಿ ಇಟ್ಟುಕೊಳ್ಳಲು ಲಂಚೆ ಪಡೆಯುತ್ತಾರೆ ಎಂದು ಆರೋಪ ಮಾಡಿದ್ದ ಮಾಜಿ ಶಾಸಕ ಬಿ.ಸುರೇಶ್‍ಗೌಡರು ಇದೀಗ ಬಿಜೆಪಿ ಸರ್ಕಾರ ಬರುತ್ತಲೇ ತುಮಕೂರು ಗ್ರಾಮಾಂತರ ಠಾಣೆ, ಕ್ಯಾತ್ಸಂದ್ರ ಪೋಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಗೆ ಯಾಕೆ ಮುಂದಾದರು ಎಂದು ಪ್ರಶ್ನಿಸಿದರು.
    ನಗರ ಶಾಸಕರು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದರೆ, ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕರು ವರ್ಗಾವಣೆ ಮಾಡುವುದು ಬೇಡ ಎಂದು ಪತ್ರ ಬರೆಯುತ್ತಾರೆ. ಇಲ್ಲಿ ಹಾಲಿ ಶಾಸಕ, ಸಂಸದರ ಪತ್ರಗಳಿಗಿಂತ ಮಾಜಿ ಶಾಸಕರ ಪತ್ರಕ್ಕೆ ಹೆಚ್ಚಿನ ಬೆಲೆ ನೀಡಲಾಗುತ್ತಿದೆ. ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರು ಅಸಹಾಯಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು.
    ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ವಿವಿಧ ರಸ್ತೆಗಳು ಅದ್ವಾನವಾಗಿದ್ದು, ಈ ರಸ್ತೆಗಳ ಅಭಿವೃದ್ಧಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ 40 ಕೋಟಿ ರೂಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಅನುದಾನದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದರೆ, ಇತ್ತ ಮಾಜಿ ಶಾಸಕರು ಈ ರಸ್ತೆಗಳೆಲ್ಲಾ ಉತ್ತಮವಾಗಿದೆ. ಹಾಗಾಗಿ ಈಗ ಮಾಡಲಾಗುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಬೇಕು. ಅನುದಾನದ ಹಣವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದು, ಇದರ ವಸ್ತು ಸ್ಥಿತಿ ಅರಿಯದ ಮುಖ್ಯಮಂತ್ರಿಗಳು ಕಾಮಗಾರಿ ತಡೆ ಹಿಡಿಯಲು ಸೂಚನೆ ನೀಡಿ ಸಹಿ ಹಾಕಿದ್ದಾರೆ. ಇದು ಯಾವ ಕಾನೂನಿನ ಅಡಿಯಲ್ಲಿ ಆದೇಶ ನೀಡಿದ್ದಾರೆ ಎಂದು ಪ್ರಶ್ನಿಸಿದರು.
    ಪಂಚಾಯತ್‍ರಾಜ್ ಅಭಿವೃದ್ಧಿ ಇಲಾಖೆಯಿಂದ ಕಾಮಗಾರಿಗಳಿಗಾಗಿ ನೀಡಿದ ಅನುದಾನ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂಬ ಕಾನೂನು ಇದ್ದರೂ ಅದರ ಬಗ್ಗೆ ತಿಳುವಳಿಕೆ ಇಲ್ಲದೆ ಅದೇಗೆ ಪತ್ರದ ಮೇಲೆ ಸಹಿ ಹಾಕುತ್ತಾರೆ ಎಂದು ಪ್ರಶ್ನಿಸಿದರಲ್ಲದೆ, ಈ ಬಗ್ಗೆ ಪ್ರಧಾನಿ ಮೋದಿ, ಕೇಂದ್ರ ಗೃಹ ಮಂತ್ರಿ ಅಮಿತ್‍ಶಾ, ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲರಿಗೆ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸುತ್ತೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳಿಗೆ ಮನವಿ
    ಮುಖ್ಯಮಂತ್ರಿಗಳೇ ನಿಮ್ಮ ಪಕ್ಷದಲ್ಲಿನ ನಾಯಕರಿಗೆ ಜ್ಞಾನ ಇಲ್ಲ. ಮಾಜಿ ಶಾಸಕ ಸುರೇಶ್‍ಗೌಡರು ತಮಗೆ ಬೇಕಾದಂತೆ ಪತ್ರಗಳನ್ನು ಬರೆದು ಕಳಿಸುತ್ತಿದ್ದಾನೆ. ಇದರ ಬಗ್ಗೆ ತಿಳಿಯದೇ ನೀವು ಪತ್ರಕ್ಕೆ ಸಹಿ ಹಾಕಿ ಕಳುಹಿಸಿತ್ತೀರಾ. ಈ ಬಾರಿ ಸುರೇಶ್‍ಗೌಡ ನಿಮ್ಮ ಬಳಿ ಬಂದರೆ ಆತನ ಕಿವಿಹಿಂಡು ಬುದ್ದಿವಾದ ಹೇಳಿ ಎಂದು ಮನವಿ ಮಾಡಿ.
ಡಾಬಾದಲ್ಲಿ ಹಲ್ಲೆ ವಿಚಾರ
     ಇತ್ತೀಚೆಗೆ  ಡಾಬಾ ಒಂದರಲ್ಲಿ ಮದ್ಯ ಸೇವಿಸಿ ದಾಂಧಲೆ ನಡೆಸಿದ್ದ ಪುಡಾರಿಗಳು ಗೌರಿಶಂಕರ್‍ನ ಶಿಷ್ಯರು ಎಂದು ಬಿಂಬಿಸಲಾಗಿತ್ತು. ಆದರೆ  ನಿಜಕ್ಕೂ ಅವರು, ಮಾಜಿ ಶಾಸಕರ ಚೇಲಾಗಳು. ಅವರೆಲ್ಲರೂ ಮಾಜಿಶಾಸಕರ ಹುಟ್ಟುಹಬ್ಬದಾಚರಣೆ ಮಾಡುತ್ತಿರುವಾಗ ತೆಗೆದ ಫೋಟೋಗಳು ಎಂದು ಕೆಲವು ಚಿತ್ರಗಳನ್ನು ಪ್ರದರ್ಶಿಸಿದರು. 
      ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜಿನಪ್ಪ, ತುಮಕೂರು ಗ್ರಾಮಾಂತರ ಘಟಕದ ಅಧ್ಯಕ್ಷ ಹಾಲನೂರು ಅನಂತ್‍ಕುಮಾರ್, ಯುವ ಘಟಕದ ಅಧ್ಯಕ್ಷ  ಹಿರೇಹಳ್ಳಿ ಮಹೇಶ್, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಸಿ.ಮಹದೇವಯ್ಯ ಸೇರಿದಂತೆ ಮಹಿಳಾ ಘಟಕದ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap