ಕುರುಬ ಸಮಾಜದ ಕ್ಷಮೆ ಕೋರಿದ ಸುರೇಶ್‍ಗೌಡರು
ತುಮಕೂರು
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ತಡೆಯುವಲ್ಲಿ ಹೆಬ್ಬೂರು ಠಾಣೆ ಪೊಲೀಸರು ವಿಫಲವಾಗಿದ್ದಾರೆಂದು ಟೀಕಿಸುವ ಭರದಲ್ಲಿ ಠಾಣೆಯ ಎಸ್ ಬಿ ಕಾನ್ಸ್‍ಟೇಬಲ್‍ರನ್ನು ಕುರುಬ ಎಂದು ಜಾತಿ ಹೆಸರಿನಲ್ಲಿ ತರಾಟೆ ತೆಗೆದುಕೊಂಡ ಮಾಜಿ ಶಾಸಕ ಸುರೇಶ್ ಗೌಡರು, ಕುರುಬ ಸಮುದಾಯದ ನಿಂದನೆ ಆರೋಪ ಬಂದಿದ್ದರಿಂದ ಸಮಾಜದ ಕ್ಷಮೆಯಾಚಿಸಿದರು.
ಸುರೇಶ್‍ಗೌಡರ ಆ ಬೈಗುಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿ ವಿವಾದವಾಗಿತ್ತು. ಅದನ್ನು ರಾಜಕೀಯಕರಣಗೊಳಿಸುವ ಪ್ರಯತ್ನವೂ ನಡೆದಿತ್ತು. ವಿವಾದ ವಿಕೋಪಕ್ಕೋಗುತ್ತಿರುವುದನ್ನು ಅರಿತ ಸುರೇಶ್ ಗೌಡರು ಗುರುವಾರ ಕುರುಬ ಸಮುದಾಯದ ಮುಖಂಡರ ಸಮ್ಮುಖದಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕುರುಬ ಸಮುದಾಯದ ಕ್ಷಮೆ ಕೋರಿದರು.
ಕುರುಬ ಸಮುದಾಯವನ್ನು ಟೀಕಿಸುವ ಉದ್ದೇಶದಿಂದ ಆ ಮಾತನಾಡಲಿಲ್ಲ, ಆ ಪೊಲೀಸ್ ಪೇದೆಯ ಹೆಸರು ಗೊತ್ತಿರಲಿಲ್ಲ, ಜನ ಆತನನ್ನು ಜಾತಿ ಹೆಸರಿನಲ್ಲಿ ಗುರುತಿಸಿ ತಮಗೆ ವಿಷಯ ತಿಳಿಸಿದ್ದರು, ಆಗ ಮಾತಿನ ಭರದಲ್ಲಿ ಜಾತಿ ಹೆಸರು ಹಿಡಿದು ಬೈದೆ ಹೊರತು ಕುರುಬ ಸಮುದಾಯದ ಜಾತಿ ನಿಂದನೆ ಮಾಡುವ ಉದ್ದೇಶವಿರಲಿಲ್ಲ. ತಾವು ಯಾವ ಸಮುದಾಯವನ್ನೂ ಟೀಕೆ ಮಾಡುವುದಿಲ್ಲ, ನನ್ನ ಮಾತಿನಿಂದ ಕುರುಬ ಸಮುದಾಯಕ್ಕೆ ನೋವಾಗಿದ್ದರೆ, ವಿಷಾದಿಸುತ್ತೇನೆ ಎಂದು ಹೇಳಿದರು.
ಆದರೆ, ಜೆಡಿಎಸ್‍ನವರು ಇದನ್ನೇ ರಾಜಕೀಯ ಅಸ್ತ್ರ ಮಾಡಿಕೊಂಡು ತಮ್ಮ ವಿರುದ್ಧ ಕ್ಷುಲ್ಲಕ ರಾಜಕಾರಣ ಮಾಡಲು ಹೊರಟಿದ್ದಾರೆ, ತಾವು ಇದಕ್ಕೆಲ್ಲಾ ಕೇರ್ ಮಾಡುವುದಿಲ್ಲ ಎಂದು ಗ್ರಾಮಾಂತರ ಕ್ಷೇತ್ರ ಶಾಸಕ ಗೌರಿಶಂಕರ್ ವಿರುದ್ಧ ಹರಿಹಾಯ್ದರು.
ಗ್ರಾಮಾಂತರ ಕ್ಷೇತ್ರದಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿವೆ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವುದಿಲ್ಲ. ಪೊಲೀಸರು ಕಳ್ಳರೊಂದಿಗೆ ಶಾಮೀಲಾಗಿದ್ದಾರೆ ಎಂದು ಜನ ಹೇಳುತ್ತಾರೆ. ಕಳ್ಳತನ ತಡೆಯುವಲ್ಲಿ ಹೆಬ್ಬೂರು ಠಾಣೆ ಸಬ್‍ಇನ್ಸ್‍ಪೆಕ್ಟರ್ ಸಂಪೂರ್ಣ ವಿಫಲವಾಗಿದ್ದಾರೆ, ಅವರ ವಿರುದ್ದ ತನಿಖೆ ನಡೆಸಿ, ಕ್ರಮ ತೆಗೆದುಕೊಳ್ಳಬೇಕು ಎಂದು ಎಸ್ಪಿಗೆ ಮನವಿ ಮಾಡಿದ್ದೇನೆ, ಗೃಹ ಇಲಾಖೆ ಕಾರ್ಯದರ್ಶಿಗಳಿಗೂ ಪತ್ರ ನೀಡುತ್ತೇನೆ ಎಂದರು.
ಹುಳ್ಳೇನಹಳ್ಳಿಯ ತಿಮ್ಮೇಗೌಡ ಎಂಬುವವರ ಮನೆಯಲ್ಲಿ ಹಾಡಹಗಲೇ ಕಳ್ಳತನವಾಗಿತ್ತು. ಅವರ ಮನೆಯಲ್ಲಿ ವಾರದ ಹಿಂದೆ ಮದುವೆ ನಡೆದಿತ್ತು. ಮನೆಗೆ ನುಗ್ಗಿದ ಕಳ್ಳರು 2 ಲಕ್ಷ ರೂ. ನಗದು, 3 ಲಕ್ಷ ರೂ ಮೌಲ್ಯದ ಒಡವೆಗಳನ್ನು ಕಳವು ಮಾಡಿದ್ದರು, ಈ ಸಂಬಂದ ಹೆಬ್ಬೂರು ಠಾಣೆಗೆ ದೂರು ನೀಡಿದರೆ ಅವರು ಕಂಪ್ಲೇಂಟ್ ದಾಖಲು ಮಾಡಿಕೊಂಡಿಲ್ಲ, ಈ ಬಗ್ಗೆ ಗ್ರಾಮಸ್ಥರು ತಮಗೆ ವಿಷಯ ತಿಳಿಸಿದ್ದರು.
ಈ ವೇಳೆ ಪೊಲೀಸ್ ಕಾನ್ಸ್‍ಟೇಬಲ್ ಟೀಕಿಸುವ ವೇಳೆ ಬಾಯಿ ತಪ್ಪಿ ಕುರುಬ ಎಂದಿದ್ದೆ ಎಂದು ಸುರೇಶ್ ಗೌಡ ಹೇಳಿದರು.
ಹೆಬ್ಬೂರು ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು, ಹಸುಗಳ ಕಳವು ಪ್ರಕರಣ ನಡೆಯುತ್ತಲೇ ಇವೆ, ಪೊಲೀಸರು ಪ್ರಕರಣ ದಾಖಲಿಸದೆ, ನ್ಯಾಯ ಪಂಚಾಯ್ತಿ ಮಾಡಿಕೊಂಡಿದ್ದಾರೆ. ಯಾವ ಕಳವು ಪ್ರಕರಣಗಳನ್ನು ಪತ್ತೆ ಮಾಡುವ ಪ್ರಯತ್ನ ಮಾಡಿಲ್ಲ ಎಂದ ಆಪಾದಿಸಿದರು.
ವಿಧಾನ ಪರಿಷತ್ತನ ಮಾಜಿ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್ ಮಾತನಾಡಿ, ತಾವೂ ಸುರೇಶ್ ಗೌಡರ ವಿವಾದಿತ ಹೇಳಿಕೆ ಕೇಳಿದ್ದು, ಅದು ಮಾತಿನ ಭರದಲ್ಲಿ ಬಂದ ಮಾತು ಹೊರತು, ಕುರುಬ ಸಮಾಜವನ್ನು ನಿಂದಿಸುವ ಉದ್ದೇಶದ್ದಲ್ಲ, ಆದರೂ ಯಾರಿಗಾದರೂ ನೋವಾಗಿದ್ದರೆ, ನಾವು ಕ್ಷಮೆ ಕೋರುತ್ತೇವೆ ಎಂದರು.
ಈ ವಿಚಾರವನ್ನು ದೊಡ್ಡದು ಮಾಡದೆ ಇಲ್ಲಿಗೇ ಮುಗಿಸಬೇಕು, ರಾಜಕೀಯಕರಣಗೊಳಿಸಬಾರದು ಎಂದು ಮನವಿ ಮಾಡಿದ ಅವರು, ಇಷ್ಟಾಗಿಯೂ ಮುಂದುವರೆಸುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದರು.ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಬಿ ಕೆ ಮಂಜುನಾಥ್, ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಸದಸ್ಯ ವೈ ಹೆಚ್ ಹುಚ್ಚಯ್ಯ, ಕುರುಬ ಸಮಾಜದ ಮುಖಂಡರಾದ ಓಂನಮೋ ನಾರಾಯಣ, ಶಿವಣ್ಣ, ಸಿದ್ದಗಂಗಪ್ಪ ಸುದ್ದಿಗೋಷ್ಠಿಯಲ್ಲಿದ್ದರು.