ತುಮಕೂರು
ಜಿಲ್ಲಾಡಳಿತದ ವತಿಯಿಂದ ನಗರದಲ್ಲಿ ಆಯೋಜಿಸಿದ್ದ 71 ನೇ ಗಣರಾಜ್ಯೋತ್ಸವ ಸಮಾರಂಭಕ್ಕೆ ಮಾಜಿ ಸೈನಿಕರನ್ನು ಆಹ್ವಾನಿಸದಿರುವುದಕ್ಕೆ ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯು ಅಸಮಧಾನವನ್ನು ವ್ಯಕ್ತಪಡಿಸಿದ್ದರು, ಈ ಕುರಿತು ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾಧಿಕಾರಿಗಳು ಮಾಜಿ ಸೈನಿಕರ ಕ್ಷಮೆಯಾಚಿಸಿದ್ದರು ಇದು ಜಿಲ್ಲಾಧಿಕಾರಿಗಳ ದೊಡ್ಡತನವಾಗಿದೆ.
ಆದರೆ ಜಿಲ್ಲಾಧಿಕಾರಿಗಳು ಸೇರಿದಂತೆ ಯಾರಿಂದಲೂ ಕ್ಷಮೆ ಕೋರಬೇಕೆಂಬ ಆಪೇಕ್ಷೆ ಸಮಿತಿಯದ್ದಾಗಿರಲಿಲ್ಲ.
ಜಿಲ್ಲೆಯಲ್ಲಿ ಪ್ರತಿ ವರ್ಷವು ಮಾಜಿ ಸೈನಿಕರನ್ನು ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಗಳಗೆ ಆಹ್ವಾನಿಸಲಾಗುತ್ತಿತ್ತು. ಅದರಲ್ಲಿ ಮಾಜಿ ಸೈನಿಕರಿಂದ ಪಥ ಸಂಚಲನವೂ ನಡೆಯುತ್ತಿತ್ತು. ಆದರೆ ಈ ಪ್ರಸಕ್ತ ವರ್ಷದ 71ನೇ ಗಣರಾಜ್ಯೋತ್ಸವಕ್ಕೆ ಜಿಲ್ಲಾಧಿಕಾರಿ, ಜಿಲ್ಲಾಡಳಿತ ಸೇರಿದಂತೆ ಸಚಿವರೂ ಮಾಜಿ ಸೈನಿಕರನ್ನು ಆಹ್ವಾನಿಸದಿರುವುದು ಸಮಿತಿಯವರಲ್ಲಿ ಬೇಸರಕ್ಕೆ ಕಾರಣವಾಗಿದೆ.
ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯು ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿನ ಮಾಜಿ ಸೈನಿಕರ ಕುಂದು ಕೊರತೆಗಳು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವುದರ ಜೊತೆಗೆ ಜಿಲ್ಲೆಯಲ್ಲಿನ ಹಲವಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸೈನ್ಯದ ಬಗ್ಗೆ, ದೇಶ ಸೇವೆ, ದೇಶ ರಕ್ಷಣೆಯ ಬಗ್ಗೆ ಅರಿವು ಮೂಡಿಸುತ್ತಾ ಪ್ರೇರೇಪಿಸುವ ಕೆಲಸವನ್ನೂ ಸಹ ಮಾಡಿಕೊಂಡು ಬರುತ್ತಿದೆ. ಆದರೂ ಕೂಡ ಮಾಜಿ ಸೈನಿಕರನ್ನು ಗುರುತಿಸುವ ಕೆಲಸ ಯಾರಿಂದಲೂ ಆಗದೆ ಕೇವಲ ಮಾತಿನಲ್ಲಿ, ಭಾಷಣಗಳಿಗೆ ಸೀಮಿತಗೊಳಿಸಿರುವುದು ವಿಪರ್ಯಾಸ.
ಪ್ರಮುಖವಾಗಿ ರಾಷ್ಟ್ರೀಯ ಹಬ್ಬಗಳಿಗೆ ಮಾಜಿ ಸೈನಿಕರಿಗೆ ಆಹ್ವಾನ ನೀಡಿ ಅವರ ಅನುಭವ, ಶ್ರಮ, ಉತ್ಸಾಹವನ್ನು ಪ್ರಶಂಶಿಸಿ ಮುಂದಿನ ಮಕ್ಕಳಿಗೆ ದೇಶ ಪ್ರೇಮದ ಉತ್ತೇಜನ ನೀಡುವಂತೆ ಆಚರಣೆಗಳಾಗಬೇಕೆನ್ನುವುದು ಸಮಿತಿಯ ಒಕ್ಕೊರಲಿನ ಅಭಿಮತವಾಗಿದೆ.ಹಾಗೂ ಮುಂದಿನ ದಿನಗಳಲ್ಲಿ ಈ ರೀತಿ ಕಡಗಣನೆಯ ಪುನರಾವರ್ತನೆ ಆಗದಂತೆ ಜಿಲ್ಲಾಡಳಿತ ಹಾಗೂ ಜಿಲ್ಲಾಧಿಕಾರಿಗಳು ಗಮನ ಹರಿಸಬೇಕು ಎಂದು ತುಮಕೂರು ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ನಾಗರಾಜ, ಕಾರ್ಯದರ್ಶಿ ಸಿ. ಪಾಂಡುರಂಗ ಹಾಗೂ ಜಿಲ್ಲೆಯ ಸಮಸ್ತ ಮಾಜಿ ಸೈನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ