ಗ್ರಾಹಕ ಸಂರಕ್ಷಣಾ ಕಾಯ್ದೆ 2019 : ಪರಿಹಾರದ ಮಿತಿ ಹೆಚ್ಚಳ..!

ಬೆಂಗಳೂರು:

    ಗ್ರಾಹಕರ ಹಿತ ರಕ್ಷಣೆ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ರಾಹಕ ಸಂರಕ್ಷಣಾ ಕಾಯ್ದೆ 1986ಕ್ಕೆ ತಿದ್ದುಪಡಿ ಮಾಡಿ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಜಾರಿಗೆ ತಂದಿದ್ದು, ಕಾಯ್ದೆಯ ಅನುಷ್ಠಾನಕ್ಕಾಗಿ ಗ್ರಾಹಕ ಸಂರಕ್ಷಣಾ ನಿಯಮಗಳನ್ನು ಜಾರಿಗೆ ತಂದಿದೆ. ಇದನ್ನು ರಾಜ್ಯದಲ್ಲೂ ಸಹ ಅನುಷ್ಠಾನಗೊಳಿಸಲಾಗಿದೆ. 

    ಗ್ರಾಹಕ ಸಂರಕ್ಷಣಾ ನಿಯಮಗಳು ಇದೇ ತಿಂಗಳ ಮೂರನೇ ವಾರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾರಿಗೆ ಬಂದಿದ್ದು, ಗ್ರಾಹಕರ ಹಿತ ರಕ್ಷಣೆಗೆ ಹಲವು ಅನುಕೂಲಕರ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯನ್ನು “ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ” ಎಂದು ತಿದ್ದುಪಡಿ ಮಾಡಲಾಗಿದೆ. ಗ್ರಾಹಕರು ಇನ್ನು ಮುಂದೆ ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಕಲಂ 35ರಡಿ ದೂರು ಸಲ್ಲಿಸಬೇಕಾಗುತ್ತದೆ. ಗ್ರಾಹಕರು ಎಲ್ಲಿ ವಾಸವಿರುವರೋ ಅಥವಾ ಆಯಾ ಜಿಲ್ಲೆಯ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ಸಲ್ಲಿಸಲು  ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. 

    ಗ್ರಾಹಕರು ಕೋರುವ ನಷ್ಟ ಪರಿಹಾರದ ಮಿತಿ ಇಪ್ಪತ್ತು ಲಕ್ಷದಿಂದ ಒಂದು ಕೋಟಿ ರೂ.ಗೆ ಏರಿಕೆಯಾಗಿದ್ದು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಒಂದು ಕೋಟಿ ರೂ. ವರೆಗಿನ ಮೊತ್ತಕ್ಕೆ ಸಂಬಂಧಿಸಿದ ದೂರು ದಾಖಲಿಸಬಹುದಾಗಿದೆ. ದೂರು ಶುಲ್ಕವನ್ನು ಡಿ.ಡಿ. ರೂಪದಲ್ಲಿ ಅಧ್ಯಕ್ಷರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಡಿ.ಡಿ.ಯನ್ನು ಪಡೆದು ದೂರಿನೊಂದಿಗೆ ಲಗತ್ತಿಸಿ ಸಲ್ಲಿಸಬೇಕಾಗಿದೆ.

    ಸರಕು ಮತ್ತು ಸೇವೆಗೆ ಸಂಬಂಧಪಟ್ಟಂತೆ ಕೋರಿರುವ ಪರಿಹಾರದ ಮಿತಿ 5 ಲಕ್ಷ ರೂ ವರೆಗಿನ ಮೊತ್ತಕ್ಕೆ ದೂರು ಶುಲ್ಕ ಇರುವುದಿಲ್ಲ. 5 ಲಕ್ಷದಿಂದ 10 ಲಕ್ಷ ರೂ ವರೆಗೆ 200 ರೂ, 10 ಲಕ್ಷದಿಂದ 20 ಲಕ್ಷ ರೂವರೆಗೆ 400 ರೂ, 20 ಲಕ್ಷದಿಂದ 50 ಲಕ್ಷದವರೆಗೆ 1000 ದರ ಶುಲ್ಕ ಹಾಗೂ 50 ಲಕ್ಷದಿಂದ 1 ಕೋಟಿ ರೂ ವರೆಗೆ 2000 ದರ ಶುಲ್ಕ ನಿಗದಿಪಡಿಸಲಾಗಿದೆ. 1986ರ ಗ್ರಾಹಕ ಸಂರಕ್ಷಣಾ ಕಾಯ್ದೆಯಲ್ಲಿ ವೇದಿಕೆಯ ಅಂತಿಮ ಆದೇಶದ ವಿರುದ್ಧ ತೀರ್ಪು ಪುನರ್ ಪರಿಶೀಲನೆಗೆ ಅವಕಾಶವಿರಲಿಲ್ಲ. ಆದರೆ ಹೊಸ ಕಾಯ್ದೆಯಲ್ಲಿ ಜಿಲ್ಲೆಯ ಗ್ರಾಹಕ ಆಯೋಗದಲ್ಲಿ ರಿವ್ಯೂ ಪಿಟಿಷನ್ ಹಾಕಲು ಅವಕಾಶ ಕಲ್ಪಿಸಿ ಅನುಕೂಲ ಮಾಡಿಕೊಡಲಾಗಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ-2019 ತಿದ್ದುಪಡಿಯಾಗಿರುವುದನ್ನು ಸಾರ್ವಜನಿಕರು ಮತ್ತು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಕೋರಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap