ದಾವಣಗೆರೆ :
ಪ್ರಸ್ತುತ ಚಾಲ್ತಿಯಲ್ಲಿರುವ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ವಿದ್ವಾಂಸರ ಅಭಿಪ್ರಾಯ ಪಡೆಯುವ ಅವಶ್ಯಕತೆ ಇದೆ ಎಂದು ಜಾನಪದ ತಜ್ಞ ಧಾರವಾಡದ ಡಾ.ಸೋಮಶೇಖರ್ ಇಮ್ರಾಪುರ ಅಭಿಪ್ರಾಯಪಟ್ಟರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ, ಸಾಹಿತಿ ಡಾ.ಕೆ.ಜಿ.ಗುರುಮೂರ್ತಿಯವರ ‘ಕಾಡುತಿದೆ ನೆನಪು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಹಲವು ವಿದ್ವಾಂಸರು ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಸಂಶೋಧನೆ ನಡೆಸಿದ್ದಾರೆ.
ಕೆ.ಜಿ.ಗುರುಮೂರ್ತಿಯವರು ಸಹ ಲಿಂಗಾಯತ ಧರ್ಮದ ಬಗ್ಗೆ ವೈಚಾರಿಕ ಅಧ್ಯಯನ ನಡೆಸಿದವರಾಗಿದ್ದು, ಪ್ರತ್ಯೇಕ ಧರ್ಮ ಹೋರಾಟ ಸಂದರ್ಭದಲ್ಲಿ ಇಂತಹ ವಿದ್ವಾಂಸರ ಸಲಹೆ ಪಡೆಯಬೇಕಾಗಿತ್ತು ಎಂದರು.ಅನಿಷ್ಟ ಪದ್ಧತಿಯಾಗಿರುವ ದೇವದಾಸಿ ಪದ್ಧತಿಗೆ ಒಳಗಾಗಿರುವ ದೇವದಾಸಿಯರ ಬಗ್ಗೆ ಗುರುಮೂರ್ತಿಯವರು ಸಾಕಷ್ಟು ಸಂಶೋಧನೆ, ಅಧ್ಯಯನ ಮಾಡಿದ್ದಾರೆ. ಗುರುಮೂರ್ತಿಯವರ ನೆನಪುಗಳ ಸಾಮ್ರಾಜ್ಯ ದೊಡ್ಡದು ಎಂಬುದು ಅವರ ಕೃತಿಯಿಂದಲೇ ಗೊತ್ತಾಗುತ್ತದೆ ಎಂದರು.
ಕೆಲವು ನೆನಪು ಮರೆಯಲಾಗಿದ್ದರೂ, ಇನ್ನೂ ಕೆಲವು ಪುಸ್ತಕದಲ್ಲಿ ದಾಖಲಾಗಿವೆ. ಎಲ್ಲಾ ಕ್ಷೇತ್ರದಲ್ಲೂ ಕೈಯಾಡಿಸಿರುವ ಗುರುಮೂರ್ತಿಯವರು ಅಧ್ಯಯನಕ್ಕೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಎಂಬುದಕ್ಕೆ ಕೈಗನ್ನಡಿಯಾಗಿ ನಿಲ್ಲಲಿದ್ದಾರೆಂದು ಹೇಳಿದರು.
ಅಭಿನಂದನಾ ನುಡಿಗಳನ್ನಾಡಿದ ಡಾ.ಶಾಂತಾ ಇಮ್ರಾಪುರ, ಇಂದು ಮಾನವೀಯ ಮೌಲ್ಯಗಳು ಕಳಚುತ್ತಿವೆ. ಇಂತಹ ದಿನಮಾನಗಳಲ್ಲೂ ಗುರುಮೂರ್ತಿ ಮತ್ತವರ ಮನೆಯವರು ಎಲ್ಲರನ್ನೂ ಪ್ರೀತಿ, ವಿಶ್ವಾಸ, ಸೌಜನ್ಯದಿಂದ ಕಾಣುತ್ತಾ ಬಂದಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುರುಮೂರ್ತಿಯವರು ಆಧುನಿಕ ಸಾಹಿತ್ಯ, ಸಂಸ್ಕೃತಿ, ಮನಃಶಾಸ್ತ್ರ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಕೆಲಸ ಮಾಡಿದ್ದಾರೆ. ಹೊಸ ವೈಜ್ಞಾನಿಕ ಚಿಂತನೆಯಡಿ ಜಾನಪದ ಕ್ಷೇತ್ರವನ್ನು ಅಧ್ಯಯನ ಮಾಡಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಲೇಖಕ ಡಾ.ಗುರುಮೂರ್ತಿ, ಡಾ.ಸಿ.ಎ.ಸೋಮಶೇಖರಪ್ಪ, ವಿದ್ಯುಲ್ಲತಾ ಬೆಟ್ಕರೂರು, ಕೆ.ಜಿ.ರಾಜಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ