ಮಧುಗಿರಿ
ಏಕಶಿಲಾ ಬೆಟ್ಟದ ಸಮೀಪವಿರುವ 21 ನೆ ವಾರ್ಡಿನ ಸಿಹಿನೀರು ಬಾವಿ ಬಳಿ ಎರಡು ಚಿರತೆಗಳು ಪ್ರತ್ಯಕ್ಷವಾಗಿರುವುದನ್ನು ಕಂಡು ವಾರ್ಡಿನ ನಾಗರಿಕರು ಭಯ ಭೀತರಾಗಿ ತಾವೇ ಖುದ್ದಾಗಿ ಬೆಟ್ಟ ಹತ್ತಿ ರಾತ್ರಿ ವೇಳೆ ಸಿಡಿ ಮದ್ದುಗಳನ್ನು ಸಿಡಿಸಿ ಚಿರತೆಗಳನ್ನು ಓಡಿಸುವ ಪ್ರಯತ್ನ ಮಾಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಎರಡು ಚಿರತೆಗಳು ಬೆಟ್ಟದ ಮೇಲಿರುವ ಗುಂಡುಗಳ ಮೇಲೆ ಮಲಗುತ್ತಿರುವುದು ಪ್ರತಿನಿತ್ಯ ಕಂಡು ಬರುತ್ತಿವೆ. ಕಳೆದ ಒಂದು ವಾರದಿಂದ ವಾರ್ಡಿನಲ್ಲಿರುವ ಮೇಕೆ, ನಾಯಿ, ಹಂದಿಗಳ ಮೇಲೆ ಚಿರತೆಗಳು ದಾಳಿ ಮಾಡಿ ಪ್ರಾಣಿಗಳನ್ನು ಹೊತ್ತು ಹೋಗುತ್ತಿವೆ ಹಾಗೂ ಮಧ್ಯ ರಾತ್ರಿ ವೇಳೆಯಲ್ಲಿ ಬೆಟ್ಟದಿಂದ ಕೆಳಗಿಳಿದು ರಾಜರೋಷವಾಗಿ ವಾರ್ಡಿನಲ್ಲಿ ಸಂಚರಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಚಿರತೆಗಳ ಉಪಟಳ ಹೆಚ್ಚಾಗಿದ್ದು ಹಲವಾರು ಬಾರಿ ಅರಣ್ಯಧಿಕಾರಿಗಳಿಗೆ ತಿಳಿಸಿದರೂ ಸಹ ಅವರು ಕೇವಲ ಸಿಡಿಮದ್ದುಗಳನ್ನು ಸಿಡಿಸಿ ಹೋಗುತ್ತಿದ್ದಾರಷ್ಟೆ. ಆದರೆ ಇಲ್ಲಿಯವರೆವಿಗೂ ಬೋನ್ ಇಟ್ಟು ಚಿರತೆಗಳನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ. ವಾರ್ಡಿನಲ್ಲಿ ಪ್ರತಿನಿತ್ಯ ಕುಡಿಯಲು ಸಿಹಿ ನೀರು ತರಲು ಸಾವಿರಾರು ಜನರು ಬರುತ್ತಿದ್ದಾರೆ. ಈ ಘಟನೆಯಿಂದಾಗಿ ನೀರಿಗಾಗಿ ಬರುವವರ ಸಂಖ್ಯೆ ಕಡಿಮೆಯಾಗಿದ್ದು, ನಾಗರಿಕರು ಮನೆಗಳನ್ನು ಬಿಟ್ಟು ಹೊರ ಬರಲು ಭಯಪಡುವಂತಾಗಿದೆ.
ಕಳೆದ ಎರಡು ದಿನದ ಹಿಂದೆ ರಾತ್ರಿ ಸಮಯದಲ್ಲಿ ವಾರ್ಡಿನ ನಾಗರಿಕರಾದ ಮಂಜುನಾಥ್ ಎನ್ನುವವರ ಮನೆಯ ಮೇಲೆ ಚಿರತೆಯೊಂದು ಓಡಾಡಿದೆ. ರಕ್ತದ ರುಚಿ ಕಂಡಿರುವ ಈ ಚಿರತೆಗಳು ನಮ್ಮ ಮೇಲೆ ದಾಳಿ ಮಾಡಿದರೆ ಏನು ಗತಿ? ಆದಷ್ಟು ಬೇಗ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳ ಬೇಕೆಂದು ವಾರ್ಡಿನ ನಾಗರಿಕರಾದ ಮಾರುತಿ, ನಾಗರತ್ನಮ್ಮ, ಭಾಗ್ಯಮ್ಮ, ರಾಜಣ್ಣ, ನಾಗರಾಜು, ಮಲ್ಲೇಶ್, ಮಂಜುನಾಥ್, ನಾಗಪ್ಪ, ಮಲ್ಲೇಶ್, ನಾಗರಾಜು ನಾರಾಯಣಪ್ಪ, ಆದಿ,ಇಮ್ರಾನ್ ಮತ್ತಿತರರು ತಮ್ಮ ಅಲಳನ್ನು ತೋಡಿಕೊಂಡಿದ್ದಾರೆ.