ದಾವಣಗೆರೆ:
ಬಳ್ಳಾರಿ ಜಿಲೆಗೆ ಮರು ಸೇರ್ಪಡೆಯಾಗಿರುವ ಹರಪನಹಳ್ಳಿ ತಾಲೂಕಿಗೆ ನಿಯೋಜನೆ, ಜಿಲ್ಲಾ ಘಟಕದ ಕೌನ್ಸಿಲಿಂಗ್ನಲ್ಲಿ ತಾಲೂಕು ಹಂತದ ಕೌನ್ಸಿಲಿಂಗ್ ಮಾಡಿರುವ ಅಧಿಕಾರಿಗಳ ಕ್ರಮ ವಿರೋಧಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘ, ಪ್ರಾಥಮಿಕ ಶಾಲೆಗಳ ಹಿಂದಿ, ಉರ್ದು ಶಿಕ್ಷಕರ ಸಂಘಗಳ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಕೆ.ಬಿ. ಬಡಾವಣೆಯ ಕಾವೇರಮ್ಮ ಸರ್ಕಾರಿ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ನೇತೃತ್ವದಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಹಮ್ಮಿಕೊಂಡಿದ್ದ ಜಿಲ್ಲೆಯ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಜಿಲ್ಲಾ ಹಂತದ ಪ್ರಕ್ರಿಯೆ ಜೊತೆಗೆ ತಾಲೂಕು ಹಂತದ ಕೌನ್ಸಿಲಿಂಗ್ ಸಹ ನಡೆಸಿರುವುದನ್ನು ಖಂಡಿಸಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ 2 ವರ್ಷಕ್ಕೊಮ್ಮೆ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಯುತ್ತದೆ. ಶಿಕ್ಷಕರ ಹೆಚ್ಚುವರಿ ಪಟ್ಟಿಯಲ್ಲಿ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದರೂ, ಹರಪನಹಳ್ಳಿ ತಾಲೂಕಿನ ಖಾಲಿ ಹುದ್ದೆಗಳಿಗೆ ಜಿಲ್ಲೆಯ ಇತರೆ ತಾಲೂಕಿನ ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮಾಡಲು, ಡಮ್ಮಿ ಕೌನ್ಸಿಲಿಂಗ್ ಮಾಡುತ್ತಿರುವ ಬಗ್ಗೆ ಸಂಘಟನೆಗಳು ಆಕ್ಷೇಪಿಸಿದವು.
ಸರ್ಕಾರದ ಆದೇಶವನ್ನು ನಾವು ಗೌರವಿಸುತ್ತೇವೆ. ಹರಪನಹಳ್ಳಿ ತಾಲೂಕನ್ನು ಹೊರತುಪಡಿಸಿ, ಜಿಲ್ಲೆಯ ಇತರೆ ಯಾವುದೇ ತಾಲೂಕಿಗೆ ನಿಯೋಜನೆ ಮಾಡಿದರೂ ನಾವು ಹೋಗಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ನಾವ್ಯಾರೂ ಹರಪನಹಳ್ಳಿಗೆ ಹೋಗುವುದಿಲ್ಲ. ಡಮ್ಮಿ ಕೌನ್ಸಿಲಿಂಗ್ ಮಾಡಿಕೊಂಡು, ಅಲ್ಲಿಗೆ ಶಿಕ್ಷಣಾಧಿಕಾರಿಗಳು ನಿಯೋಜನೆ ಮಾಡಿದರೆ ಅದನ್ನು ನೋಡಿಕೊಂಡು ಸಂಘಗಳೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾ ಘಟಕಕ್ಕೆ ಕೌನ್ಸಿಲಿಂಗ್ ಇದ್ದರೂ ತಾಲೂಕು ಹಂತದ ಕೌನ್ಸಿಲಿಂಗ್ ಮಾಡಲಾಗುತ್ತಿದೆ. ಕೌನ್ಸಿಲಿಂಗ್ ಪ್ರಕ್ರಿಯೆ ಇದಾಗಿದ್ದು, ಜಿಲ್ಲಾ ಹಂತದಲ್ಲೇ ನಡೆಯಬೇಕಾದ ಪ್ರಕ್ರಿಯೆಯಲ್ಲಿ ಕೇವಲ ಜಿಲ್ಲಾ ಹಂತದ ಪ್ರಕ್ರಿಯೆಯೇ ಆಗಬೇಕು. 6 ಬ್ಲಾಕ್ಗಳಿಗೆ ಮಾತ್ರವೇ ಕೌನ್ಸಿಲಿಂಗ್ ಆಗಬೇಕಾಗಿದ್ದರೂ, ಹರಪನಹಳ್ಳಿ ಸೇರಿಕೊಂಡು 7 ಬ್ಲಾಕ್ಗೆ ಕೌನ್ಸಿಲಿಂಗ್ ಮಾಡಲು ಮುಂದಾದ ಇಲಾಖೆ ಕ್ರಮಕ್ಕೆ ಸಂಘಗಳ ಮೂಲಕ ಶಿಕ್ಷಕರು ಪ್ರಶ್ನಿಸಿದರು.
ಸರ್ಕಾರದ ಆದೇಶದ ಮೇರೆಗೆ 2 ವರ್ಷಕ್ಕೊಮ್ಮೆ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ನಡೆಯುತ್ತದೆ. ಆ ಶಿಕ್ಷಕರ ಹೆಚ್ಚುವರಿ ಪಟ್ಟಿಯಲ್ಲಿ ಹರಪನಹಳ್ಳಿ ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ಹರಪನಹಳ್ಳಿ ಹುದ್ದೆಗಳಿಗೆ ಉಳಿದ ತಾಲೂಕಿನ ಶಿಕ್ಷಕರನ್ನು ನಿಯೋಜನೆ ಮಾಡುವುದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಹರಪನಹಳ್ಳಿ ಹೊರತುಪಡಿಸಿ, ಬೇರಾವುದೇ ತಾಲೂಕಿಗೆ ನಿಯೋಜಿಸಿದರೂ ಶಿಕ್ಷಕರು ಕೆಲಸ ಮಾಡಲು ಸಿದ್ಧರಿದ್ದಾರೆ. ಜಿಲ್ಲೆಯ 6 ಬ್ಲಾಕ್ಗೆ ಕೌನ್ಸಿಲಿಂಗ್ ನಡೆಯಬೇಕಿತ್ತು. ಆದರೆ, ಹರಪನಹಳ್ಳಿ 7 ಬ್ಲಾಕ್ನ್ನು ಸೇರಿಸಿ, ಕೌನ್ಸಿಲಿಂಗ್ ಮಾಡಿದ್ದು ಸರಿಯಲ್ಲ. ಸಾಶಿಇ ಉಪ ನಿರ್ದೇಶಕ ಪರಮೇಶ್ವರಪ್ಪ, ಸರ್ಕಾರದ ಆದೇಶದಂತೆ ಕೌನ್ಸಿಲಿಂಗ್ ಮಾಡುತ್ತೇವೆಂದು ಹೇಳಿ, 20 ಶಿಕ್ಷಕರ ಹುದ್ದೆಗೆ ಡಮ್ಮಿ ಕೌನ್ಸಿಲಿಂಗ್ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಘಟಕ-1 ಘಟಕಕ್ಕೆ ಮಾತ್ರ ಕೌನ್ಸಿಲಿಂಗ್ ಮಾಡಲು ಸರ್ಕಾರವೇ ಆದೇಶಿದ್ದರೂ ಅದನ್ನು ಯಾಕೆ ಪಾಲಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಘಟಕಗಳಲ್ಲೇ ನಿನ್ನೆ ಕೌನ್ಸಿಲಿಂಗ್ ಮಾಡಿ, ಉಳಿಗ ಶಿಕ್ಷಕರನ್ನು ಇಂದಿನ ಜಿಲ್ಲಾ ಹಂತದ ಕೌನ್ಸಿಲಿಂಗ್ಗೆ ತಂದಿದ್ದು ಸರಿಯಲ್ಲ. ಹೀಗೆ ಮಾಡುವುದು . 2016-17ರಲ್ಲಿ ಕೌನ್ಸಿಲಿಂಗ್ ವೇಳೆ ಇದೇ ರೀತಿ ಮಾಡಿದ್ದಾಗ ಸಂಘಗಳ ಹೋರಾಟದಿಂದ ಮರು ಕೌನ್ಸಿಲಿಂಗ್ ಮಾಡಲಾಗಿತ್ತು. ಇದೀಗ ಮತ್ತೆಮರು ಕೌನ್ಸಿಲಿಂಗ್ ಮಾಡಬೇಕು. ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಬಳ್ಳಾರಿ ಜಿಲ್ಲೆಯ ಭಾಗವಾದ ಹರಪನಹಳ್ಳಿ ತಾಲೂಕನ್ನು ಹೊರಗಿಟ್ಟು, ಕೌನ್ಸಿಲಿಂಗ್ ಮಾಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಹೊನ್ನಾಳಿ ಇಸ್ಮಾಯಿಲ್, ನೀಲಮ್ಮ, ಮಂಜುಳಾ, ರೇಣುಕಮ್ಮ, ಶಿವಮ್ಮ, ಪ್ರಕಾಶ ನಾಯ್ಕ, ಶೋಭಾ, ಸಂತೋಷ ನಾಯ್ಕ, ಗೋಪಿನಾಥ, ದಾವಣಗೆರೆ ಸಿದ್ದೇಶ, ಅಜ್ಜಣ್ಣ, ಪುರುಷೋತ್ತಮ, ಎಚ್.ಕೆ.ಚಂದ್ರಶೇಖರ, ಚಂದ್ರಪ್ಪ, ಕರಿಬಸಯ್ಯ, ಫೈರುನ್ನೀಸಾ, ಸುಧಾ, ಸಂಘದ ಪದಾಧಿಕಾರಿಗಳು ಸೇರಿದಂತೆ ಪ್ರತಿ ತಾಲೂಕಿನ 40 ಶಿಕ್ಷಕ-ಶಿಕ್ಷಕಿಯರಂತೆ ಹೆಚ್ಚುವರಿ ಶಿಕ್ಷಕರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ