ಮೃತರೊಂದಿಗೆ ಕಣ್ಣು ಮಣ್ಣಲ್ಲಿ ಸೇರದೆ ಅಂಧರ ಬಾಳಿಗೆ ಬೆಳಕಾಗಲು ನೆರವಾಗಿ : ಡಾ.ಚಂದ್ರಿಕಾ

ಕುಣಿಗಲ್

       ಮೂಢನಂಬಿಕೆ ಕಂದಾಚಾರಗಳನ್ನ ಬದಿಗಿರಿಸಿ ಕಣ್ಣುಗಳನ್ನ ರಕ್ಷಿಸಿಕೊಳ್ಳುವುದರ ಜೊತೆಗೆ ಸರ್ವಶ್ರೇಷ್ಠವಾದ ನೇತ್ರದಾನ ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳುವ ಮೂಲಕ ಮಣ್ಣಲ್ಲಿ ಮಣ್ಣಾಗದಂತೆ ಕಣ್ಣನ್ನ ರಕ್ಷಿಸಿ ಅಂಧರ ಬಾಳಿಗೆ ಬೆಳಕಾಗಲು ನೆರವಾಗಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್.ಚಂದ್ರಿಕಾ ಅವರು ಕಿವಿಮಾತು ಹೇಳಿದರು.

        ಪಟ್ಟಣದ ಭವಿಷ್‍ಜೈನ್ ಸಭಾಂಗಣದಲ್ಲಿ ಆಸರೆ ಫೌಂಡೇಷನ್ ಹಾಗೂ ಎನ್.ಎಸ್.ಐ ಫೌಂಡೇಷನ್ ಆಯೋಜಿಸಿದ್ದ, ನೇತ್ರ ಸಂಗ್ರಹಣ ಕೇಂದ್ರದ ಉದ್ಘಾಟನೆಯನ್ನ ನೆರವೇರಿಸಿ ಮಾತನಾಡುತ್ತಾ, ಮನುಷ್ಯರಿಗೆ ಸಮಾಜದ ಸುಂದರ ಪ್ರಪಂಚವನ್ನ ನೋಡಲು ಕಣ್ಣುಗಳು ಅತ್ಯವಶ್ಯಕವಾಗಿದ್ದು, ಯಾವುದೇ ಸಂದರ್ಭದಲ್ಲಿ ಮನುಷ್ಯ ಸಾವನ್ನಪ್ಪಿದಾಗ ತಮ್ಮ ಕಣ್ಣುಗಳನ್ನ ದಾನ ಮಾಡುವ ಮನಸ್ಥಿತಿಯನ್ನ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು.

        ಆ ಮೂಲಕ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶಕರಾಗಿ ದೃಷ್ಠಿಹೀನ ಅಂಧರ ಬಾಳಿನಲ್ಲಿ ಬೆಳಕಾಗಬಹುದು. ಮಗುವಿನಿಂದ ವಯೋವೃದ್ಧರು ಕಣ್ಣುಗಳನ್ನ ದಾನ ಮಾಡಬಹುದಾಗಿದೆ. ಯಾವುದೆ ಅಪಘಾತ, ಹೃದಯ ಸಂಬಂಧಿ ಕಾಯಿಲೆ ಇಂತಹ ಸಂದರ್ಭದಲ್ಲಿ ನೇತ್ರ ದಾನವನ್ನ ಮಾಡುವ ಮೂಲಕ ಅಂಧರ ಬಾಳಿನಲ್ಲಿ ಬೆಳಕಾಗುವುದರೊಂದಿಗೆ, ಸಮಾಜದಲ್ಲಿ ನೇತ್ರದಾನ ಮಾಡುವಂತೆ ಜನಸಾಮಾನ್ಯರಲ್ಲಿ ಜಾಗೃತಿ ಉಂಟು ಮಾಡಬೇಕಾಗಿದೆ.

        ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿಯೇ ನೇತ್ರಚಿಕಿತ್ಸೆಗೆ ಉತ್ತಮ ಸೌಲಭ್ಯಗಳಿದ್ದು ಮೃತಪಟ್ಟ ವ್ಯಕ್ತಿಯಿಂದ 6 ಗಂಟೆಯೊಳಗೆ ಕಣ್ಣನ್ನು ಹೊರತೆಗೆದು ರಕ್ಷಿಸಿ ದೃಷ್ಟಿಹೀನರಿಗೆ ಅಳವಡಿಸುವ ವ್ಯವಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿದ್ದು, ಇಲ್ಲಿನ ವೈದ್ಯ ಡಾ.ಮಂಜುನಾಥ್ ಉತ್ತಮ ಸೇವೆ ಮಾಡುತ್ತಿದ್ದಾರೆ. ಇದರ ಉಪಯೋಗವನ್ನ ಜನರು ಪಡೆದುಕೊಳ್ಳಬೇಕೆಂದರು.

        ಎಂ.ಎಂ.ಹಾಸ್ಪಿಟಲ್ ಸಂಸ್ಥಾಪಕ ಡಾ.ಎಂ.ಆರ್.ರವಿಕುಮಾರ್ ಮಾತನಾಡಿ, ಇಂದಿನ ಕಾಲದಲ್ಲಿಯೂ ವಿದ್ಯಾವಂತರೆ ಅನಾಗರಿಕರಂತೆ ಹಳ್ಳಿಗಾಡಿನಲ್ಲಿ ಯಾರೋ ಗರಿಕೆಯ ಹುಲ್ಲಿನಲ್ಲಿ ಕಣ್ಣಿಗೆ ಬಿದ್ದಿರುವ ವಸ್ತು ತೆಗೆಯುತ್ತಾರೆ, ನಾಲಿಗೆಯಿಂದ ಹಾಗೂ ಎದೆಯ ಹಾಲು ಹಾಕುವುದು ಸಹ ಸರಿಯಾದ ಕ್ರಮವಲ್ಲ. ಆದ್ದರಿಂದ ಯಾವುದೇ ಮುನ್ನಚ್ಚರಿಕೆ ಇಲ್ಲದೆ ಕಂದಾಚಾರ ಮೂಢನಂಬಿಕೆಯಿಂದ ಕಣ್ಣುಗಳಿಗೆ ನಾಟಿ ಔಷಧಿಗಳನ್ನ ಹಾಕಿಕೊಳ್ಳುವ ಮೂಲಕ ಕಣ್ಣುಗಳು ಹಾಳಾಗುತ್ತವೆ.

       ಇವುಗಳಿಗೆ ಅವಕಾಶ ನೀಡದೆ ನೇತ್ರವೈದ್ಯರ ನೆರವನ್ನ ಪಡೆಯಬೇಕು. ಅಲ್ಲದೆ ಜನರಲ್ಲಿ ಕಣ್ಣನ್ನು ದಾನ ಮಾಡಿದರೆ ಮೃತದೇಹಕ್ಕೆ ಯಾವುದೆ ರೀತಿಯ ಹಾನಿಯಾಗಲಿ, ವಿಕಾರವಾಗಲಿ ಆಗುವುದಿಲ್ಲ. ನೀವು ಮಾಡುವ ಕಣ್ಣಿನ ದಾನ ಮಹಾದಾನವಾಗಿ ಉಳಿಯುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಿ ಎಂದರು.

          ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಎಸ್.ಗಣೇಶ್ ಬಾಬು ಮಾತನಾಡಿ ಉತ್ತಮ ಸಾಮಾಜಿಕ ಕೆಲಸವನ್ನ ಮಾಡುವಾಗ ಸ್ವಲ್ಪ ತಡವಾದರೂ ಉತ್ತಮ ರೀತಿಯಲ್ಲಿ ನಿಭಾಯಿಸಿದರೆ ಸಮಾಜಕ್ಕೆ ಒಂದು ಕೊಡುಗೆಯನ್ನ ನೀಡಬಹುದೆಂದರು. ಡಾ.ಸೌಮ್ಯ, ಡಾ.ಭವ್ಯ, ಡಾ.ಎನ್.ಎಸ್.ಶ್ರೀಧರ್, ಡಾ.ದಿನೇಶ್, ಡಾ.ಜಗದೀಶ್, ಹಾಗೂ ಆಸರೆ ಫೌಂಡೇಷನ್‍ನ ಜನಾರ್ಧನ್, ಕೆ.ಆರ್.ಕೇಶವಮೂರ್ತಿ, ಎಸ್.ಆರ್.ಚಿಕ್ಕಣ್ಣ, ಎ.ಸಂತೋಷ್, ಎಸ್.ಸಿ.ಸುರೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap