ಚಳ್ಳಕೆರೆ
ರಾಜ್ಯದ ಮಧ್ಯಮ ಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿದ್ದು, ಹಲವಾರು ರೀತಿಯ ಸೌಲಭ್ಯಗಳನ್ನು ಇಲ್ಲಿನ ಜನತೆ ನಿರೀಕ್ಷೆ ಮಾಡುತ್ತಿದ್ಧಾರೆ. ಬಹಳ ವರ್ಷಗಳ ನಂತರ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ.ಶ್ರಿರಾಮುಲು ಆರೋಗ್ಯ ಸಚಿವ ಖಾತೆಯನ್ನುನ ಪಡೆದಿದ್ದಲ್ಲದೆ, ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ಧಾರೆ. ಆದರೆ, ಬಹುತೇಕ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಹಾಗೂ ಇತರೆ ಸೌಲಭ್ಯಗಳಿಗಾಗಿ ಜನರ ಹೋರಾಟ ಮುಂದುವರೆದಿದ್ದರೂ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರ ಅಸಮದಾನಕ್ಕೆ ಕಾರಣವಾಗಿದೆ.
ತಾಲ್ಲೂಕಿನ ರಾಮಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಸುತ್ತಮುತ್ತಲ ಹತ್ತಾರು ಹಳ್ಳಿಯ ನೂರಾರು ರೋಗಿಗಳು ಪ್ರತಿನಿತ್ಯ ಈ ಆಸ್ಪತ್ರೆಗೆ ಬಂದು ಹೋಗುತ್ತಾರೆ. ಈ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವ ಸುತ್ತಮುತ್ತಲ ನೂರಾರು ಗ್ರಾಮಸ್ಥರಿಗೆ ರಾತ್ರಿಯಾಯಿತು ಎಂದರೆ ಯಾವುದೇ ಚಿಕಿತ್ಸೆ ಪಡೆಯಲು ಇವರಿ ಸಾಧ್ಯವಾಗುವುದಿಲ್ಲ.
ಸದರಿ ಆರೋಗ್ಯ ಕೇಂದ್ರ 24*7ರ ವ್ಯಾಪ್ತಿಯಲ್ಲಿದ್ದರೂ ಸಂಜೆ ಯಾಗುತ್ತಲೇ ಇಲ್ಲಿನ ವೈದ್ಯರು, ಸಿಬ್ಬಂದಿ ವರ್ಗ ಆಸ್ಪತ್ರೆಯಿಂದ ನಿರ್ಗಮಿಸುತ್ತಾರೆ. ವಿಶೇಷವೆಂದರೆ ಈ ಆಸ್ಪತ್ರೆಗೆ ಸುಸಜ್ಜಿತ 108ರ ಅಂಬ್ಯುಲೆನ್ಸ್ ವಾಹನ ನೀಡಿದ್ದು, ಚಾಲಕನಿಲ್ಲದ ಕಾರಣ ಈ ವಾಹನ ಎಲ್ಲೂ ಚಲಿಸದೆ ಅಲ್ಲೇ ನಿಂತಿದ್ದು, ಸುತ್ತಮುತ್ತಲ ಗ್ರಾಮಸ್ಥರಿಗೆ ಪ್ರಾಣಾಪಾಯ ಉಂಟಾದಲ್ಲಿ ಅಂಬ್ಯುನೆಲ್ಸ್ ಸೌಲಭ್ಯ ದೊರೆಯದೆ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಮದ ಮುಖಂಡ ಸಂತೋಷ್ ಹಾಗೂ ಇನ್ನಿತರರೊಡನೆ ಗ್ರಾಮದಲ್ಲಿ ನಡೆಯುವ ಹಬ್ಬವನ್ನು ಕೈಬಿಟ್ಟು ಆಸ್ಪತ್ರೆಯ ಮುಂದೆ ಧರಣಿ ನಡೆಸಿ ನಮಗೆ ನಿತ್ಯವೂ ಆಸ್ಪತ್ರೆಯಲ್ಲಿ ಲಭ್ಯವಿರುವಂತಹ ವೈದ್ಯರು ಹಾಗೂ ಸಿಬ್ಬಂದಿಯನ್ನು ನೇಮಿಸಬೇಕೆಂದು ಮನವಿ ಮಾಡಿರುತ್ತಾರೆ. ಕಳೆದ ತಿಂಗಳು ಗ್ರಾಮಕ್ಕೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವ ಗ್ರಾಮಸ್ಥರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುರಿತ ಆರೋಗ್ಯ ತಜ್ಞರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಅಂದು ಭರವಸೆ ನೀಡಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದೆ ಇದ್ದು, ಈ ಭಾಗದ ಸಮಸ್ಯೆಗೆ ಈಡೇರಿಲ್ಲ. ಇದರಿಂದ ನೊಂದ ಗ್ರಾಮಸ್ಥರು ಮಕರ ಸಂಕ್ರಾಂತಿ ಹಬ್ಬದ ದಿನದಂದೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ವೈದ್ಯರು, ಸಿಬ್ಬಂದಿ ವರ್ಗ ನೇಮಿಸಿಕೊಡುವಂತೆ ಆಗ್ರಹಿಸಿದ್ಧಾರೆ.
ರಾಮಜೋಗಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ಯಂತ ಉಪಯುಕ್ತ ಆರೋಗ್ಯ ಕೇಂದ್ರವಾಗಿದ್ದು, ಈ ಭಾಗದ ಸುಮಾರು 28ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಯಲ್ಲಿ ಈ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ತ್ವರಿತ ಗತಿಯಲ್ಲಿ ಸಿಬ್ಬಂದಿ ನೇಮಿಸಿದಲ್ಲಿ ಮಾತ್ರ ಗ್ರಾಮದ ಜನರಿಗೆ ಆಗುವ ಹಲವಾರು ತೊಂದರೆಗಳನ್ನು ನಿಯಂತ್ರಿಸಬಹುದಾಗಿದೆ. ವಿಶೇಷವಾಗಿ ಸುಸಜ್ಜಿತ ಅಂಬ್ಯುಲೆನ್ಸ್ ವಾಹನವಿದ್ದರೂ ಸಕಾಲದಲ್ಲಿ ಉಪಯೋಗಿಸದ ಕಾರಣ ಕೆಟ್ಟು ನಿಂತಿದೆ. ಈ ವಾಹನಕ್ಕೆ ಚಾಲಕನು ಇದ್ದರೂ ಸಹ ವಾಹನ ದುರಸ್ಥಿಯಾಗದ ಹೊರತು ಕಾರ್ಯನಿರ್ವಹಿಸಲಾಗುವುದಿಲ್ಲ. ಒಟ್ಟಿನಲ್ಲಿ ಹತ್ತಾರು ಸಾವಿರ ಜನಸಂಖ್ಯೆ ಹೊಂದಿರುವ ಇಲ್ಲಿನ ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ನೀಡಿದರೆ ಈ ಭಾಗದ ಬಹುತೇಕ ಜನರಿಗೆ ಸಹಯವಾಗುತ್ತೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಆಗ್ರಹ ಪಡಿಸಿದ್ದಾರೆ.
ಈಗಾಗಲೇ ಕ್ಷೇತ್ರದ ಶಾಸಕರೂ ಹಾಗೂ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗಕ್ಕೆ ಇಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಹಲವಾರು ಬಾರಿ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಸಹ ಈ ಆರೋಗ್ಯ ಕೇಂದ್ರಕ್ಕೆ ವೈದ್ಯರ ನೇಮಕವಾಗಿಲ್ಲ ಹಾಗೂ ಸಿಬ್ಬಂದಿಗೂ ಸಹ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದೆ ಇದ್ದಲ್ಲಿ ಗ್ರಾಮಸ್ಥರು ತಾಲ್ಲೂಕು ಕಚೇರಿ ಮುಂದೆ ಹೋರಾಟಕ್ಕೆ ಸಜ್ಜಾಗಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








