ಬೆಂಗಳೂರು
ರಾಜ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳು ಆರಂಭವಾಗಿದ್ದು, ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ವ್ಯಕ್ತವಾಗಿದೆ.ಹೊರ ರಾಜ್ಯಗಳ ಕಾರ್ಮಿಕರು ವಲಸೆ ಹೋಗಿದ್ದಾರೆ. ನುರಿತ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದು, ಪರಿಣಾಮ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲದ ತೀವ್ರ ಸಮಸ್ಯೆ ಎದುರಾಗಿದೆ.
ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಪರ್ಯಾಯವಿಲ್ಲ. ಬೃಹತ್ ಕೈಗಾರಿಕೆಗಳಲ್ಲಿ ರೊಬೋಟಿಕ್, ಆಟೋಮೇಷನ್ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೈಗಾರಿಕೆಗಳನ್ನು ಮುನ್ನಡೆಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಸೌಲಭ್ಯ ಸಣ್ಣ ಮಟ್ಟದ ಉದ್ಯಮಗಳಲ್ಲಿಲ್ಲ.
ದೇಶಾದ್ಯಂತ ಸುಮಾರು ನಾಲ್ಕು ಸಾವಿರ ಶ್ರಮಿಕ್ ರೈಲುಗಳ ಮೂಲಕ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸಿದ್ದು, ಬಹುತೇಕ ಮಂದಿ ತಮ್ಮ ಊರುಗಳನ್ನು ಸೇರಿಕೊಂಡಿದ್ದಾರೆ. ರಾಜ್ಯದಿಂದಲೂ ಅಂದಾಜು ನಾಲ್ಕರಿಂದ ಐದು ಲಕ್ಷ ಕಾರ್ಮಿಕರು ವಾಪಸ್ ಹೋಗಿದ್ದಾರೆ. ಈ ಕಾರ್ಯಾಚರಣೆ ಇನ್ನಷ್ಟು ಮುಂದುವರೆಯಲಿದ್ದು, ಮತ್ತಷ್ಟು ಕಾರ್ಮಿಕರು ತಮ್ಮ ಊರುಗಳಿಗೆ ತೆರಳುವ ತವಕದಲ್ಲಿದ್ದಾರೆ.
ಸಣ್ಣಫುಟ್ಟ ಕೆಲಸ ಮಾಡುವ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತಿತರ ರಾಜ್ಯಗಳ ಕಾರ್ಮಿಕರು ತಮ್ಮ ಊರುಗಳಿಗೆ ಸೇರಿದ್ದಾರೆ. ರಾಜ್ಯದಿಂದಲೂ ಶೇ 60 ರಷ್ಟು ಕಾರ್ಮಿಕರು ತೆರಳಿದ್ದಾರೆ. ಕಾರ್ಮಿಕರನ್ನು ಮತ್ತೆ ಕರೆಸಿಕೊಳ್ಳಲು ಅನುಮತಿ ಪಡೆಯಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಬರುವ ದಿನಗಳಲ್ಲಿ ಇಲ್ಲಿನ ಕಾರ್ಮಿಕರನ್ನು ಕರೆಸಿಕೊಳ್ಳುವುದು ತೀವ್ರ ತ್ರಾಸದಾಯಕವಾಗುವ ಸಾಧ್ಯತೆಗಳು ಸಹ ಇವೆ.
ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಕಾರ್ಮಿಕರಿಗೆ ಸೂಕ್ತ ರೀತಿಯಲ್ಲಿ ವೇತನ, ಆಹಾರ ಧಾನ್ಯ, ವಸತಿ ಸೌಲಭ್ಯ ಕಲ್ಪಿಸಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರ ಕೈ ಕೆಳಗೆ ಕೆಲಸ ಮಾಡುವ ಕಾರ್ಮಿಕರು ಮಾತ್ರ ಉಳಿದುಕೊಂಡಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಬಹುತೇಕ ಮಾಲೀಕರು ಪೂರ್ಣ ಪ್ರಮಾಣದಲ್ಲಿ ಸಂಬಳ ಕೊಡಲು ಸಾಧ್ಯವಾಗಿಲ್ಲ. ಬಹುತೇಕ ಮಂದಿ ಅರ್ದ ವೇತನ ಕೊಟ್ಟು ಕಾರ್ಮಿಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನಮಾಡಿದ್ದು, ಇಂತಹ ಪ್ರಯತ್ನಗಳು ಸಹ ಸಾಕಷ್ಟು ಮಟ್ಟಿಗೆ ಸಫಲವಾಗಿಲ್ಲ.
ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಮಿಕ ಚಿನ್ನಾ ರೆಡ್ಡಿ ಮಾತನಾಡಿ, ನಾವು ಮೆಟೆಲ್ ಶೀಟ್ ತಯಾರು ಮಾಡುವ ಕೈಗಾರಿಕೆಯಲ್ಲಿ ಕೆಲಸಮಾಡುತ್ತಿದ್ದು, ನಮ್ಮ ಮಾಲೀಕರು ನಮ್ಮ ಎಲ್ಲಾ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ. ಒಂದು ಹಂತದಲ್ಲಿ ನಮ್ಮ ಊರು ಹೈದರಾಬಾದ್ ಗೆ ತೆರಳಲು ಸಜ್ಜಾಗಿದ್ದೇವು. ಆದರೆ ಮಾಲೀಕರ ಮನವಿ ಮೇರೆಗೆ ಇಲ್ಲಿಯೇ ಉಳಿದಿದ್ದೇವೆ ಎಂದರು.
ಕಾರ್ಮಿಕರನ್ನು ಕುಟುಂಬದವರಂತೆ ನೋಡಿಕೊಂಡಿರುವ ಕಾರ್ಖಾನೆಗಳಲ್ಲಿ ಮಾತ್ರ ಕಾರ್ಮಿಕರು ಉಳಿದುಕೊಂಡಿದ್ದಾರೆ. ಉಳಿದ ಕಡೆ ತಮ್ಮ ಭವಿಷ್ಯ ಅರಸುತ್ತಲೋ ಅಥವಾ ಕೊರೋನಾ ವೈರಸ್ ಸೋಂಕಿಗೆ ಹೆದರಿಕೊಂಡೋ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಿದ್ದಾರೆ.
ರಾಜ್ಯ ಸಣ್ಣ ಕೈಗಾರಿಕೆಗಳ ಸಂಘ – ಕಾಸಿಯಾ ಅಧ್ಯಕ್ಷ ಆರ್. ರಾಜು ಮಾತನಾಡಿ, ಇದೀಗ ಕಾರ್ಯಚಟುವಟಿಕೆ ಆರಂಭಿಸಿರುವ ಕೈಗಾರಿಕೆಗಳು ಮುಂದಿನ ಐದಾರು ತಿಂಗಳಿಗೆ ಸ್ವಲ್ಪ ಮಟ್ಟಿಗೆ ಸುಸ್ಥಿತಿಗೆ ಬರಲಿವೆ. ಉತ್ಪಾದನೆ ಹೆಚ್ಚಿಸಿ ಆರ್ಥಿಕವಾಗಿ ಸಶಕ್ತವಾಗಲಿವೆ. ಸ್ಥಗಿತಗೊಂಡಿರುವ ಕೈಗಾರಿಕೆಗಳು ತಕ್ಷಣ ಕಾರ್ಯಾರಂಭ ಮಾಡದಿದ್ದರೆ ಬರುವ ದಿನಗಳಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತವೆ. ಸದ್ಯದ ಮಟ್ಟಿಗೆ ಇರುವ ಸಣ್ಣ ಪ್ರಮಾಣದ ಬಂಡವಾಳ, ಕಚ್ಚಾವಸ್ತುಗಳೊಂದಿಗೆ ಚಟುವಟಿಕೆ ಆರಂಭಿಸಬೇಕು. ಕಾಯುತ್ತಾ ಕುಳಿತರೆ ಭವಿಷ್ಯ ಮತ್ತಷ್ಟು ಆತಂಕಕ್ಕೆ ಸಿಲುಕಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದೆಡೆ ಕೇಂದ್ರ ಸರ್ಕಾರ ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಹೆಚ್ಚಿನ ಸಾಲ ಸೌಲಭ್ಯ ಕೊಡುತ್ತಿದೆ. ಆದರೆ ಕಾರ್ಖಾನೆಗಳಿಗೆ ಕಾರ್ಮಿಕರು ಮತ್ತು ಕಚ್ಚಾ ವಸ್ತುಗಳ ಕೊರತೆ ಇದೆ. ಈ ಸವಾಲುಗಳಿಗೆ ಸದ್ಯಕ್ಕೆ ಪರಿಹಾರ ದೊರೆಯುವ ಸಾಧ್ಯತೆಗಳು ಕ್ಷೀಣಿಸಿವೆ. ಈ ಎಲ್ಲಾ ನಕಾರಾತ್ಮಕ ಸಂಗತಿಗಳು ಕೈಗಾರಿಕೆ ಉತ್ಪನ್ನಗಳ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ