ಕೊಲೆ ವದಂತಿ ಹಬ್ಬಿಸಿದ ಯುವಕ ಜೀವಂತ ಪತ್ತೆ

ದಾವಣಗೆರೆ:

        ಮುಖಕ್ಕೆ ಕುಂಕುಮದ ನೀರು ಹಾಕಿಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿರುವಂತೆ ಸೆಲ್ಫಿ ತೆಗೆದುಕೊಂಡು, ಸಾಮಾಜಿಕ ಜಾಲತಾಣದಲ್ಲಿ ತನ್ನ ಕೊಲೆಯಾಗಿದೆ ಎಂಬ ಒಕ್ಕರಣೆಯೊಂದಿಗೆ ಪೋಟೊಗಳನ್ನು ಹರಿಬಿಟ್ಟು, ಪೊಲೀಸರ ನಿದ್ದೆಗೆಡಿಸಿದ್ದ ಯುವಕ ಈಗ ಜೀವಂತವಾಗಿ ಪತ್ತೆಯಾಗಿದ್ದಾನೆ.

      ಇಲ್ಲಿನ ಯಲ್ಲಮ್ಮ ನಗರ ನಿವಾಸಿ ಪರಶುರಾಮ್, ಶುಕ್ರವಾರ ಸಂಜೆ ಹೊತ್ತು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮುಖ, ತಲೆಯ ಮೇಲೆ ಕುಂಕುಮದ ನೀರು ಸುರಿದುಕೊಂಡು, ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ನಿರ್ಜನ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಂಡು, ತನ್ನ ಸ್ನೇಹಿತನ ಮೊಬೈಲ್‍ಗೆ ಫೋಟೋಗಳನ್ನು ಕಳುಹಿಸಿದ್ದ.

        ರಾಣೇಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದಲ್ಲಿದ್ದ ಪರಶುರಾಮನ ಸ್ನೇಹಿತ, ಈ ಫೋಟೊಗಳಿಗೆ ದಾವಣಗೆರೆಯಲ್ಲಿ ಮತ್ತೊಂದು ಕೊಲೆ ಎಂಬ ಒಕ್ಕರಣೆ ಬರೆದು, ಪರಶುರಾಮನ ಪೋಷಕರು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪರಶುರಾಮನ ಪೋಷಕರು ಶುಕ್ರವಾರ ರಾತ್ರಿ ಇಡೀ ಮಗನನ್ನು ಹುಡುಕಿದರೂ, ಸಿಗದ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ ಬಡಾವಣೆ ಠಾಣೆಗೆ ಬಂದು ತಮ್ಮ ಮಗ ಕೊಲೆಯಾಗಿರುವ ಸ್ಥಿತಿಯಲ್ಲಿರುವ ಫೋಟೋಗಳು ಮೊಬೈಲ್‍ಗಳಲ್ಲಿ ಹರದಾಡುತ್ತಿರುವುದನ್ನು ತೋರಿಸಿ, ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದು ಈಗಾಗಲೇ ಕಳೆದ ಹತ್ತು ದಿನಗಳಲ್ಲಿ ದಾವಣಗೆರೆ ತಾಲೂಕು ಒಂದರಲ್ಲಿಯೇ ನಡೆದಿರುವ ಮೂರು ಕೊಲೆಗಳಿಂದ ಚಿಂತೆಗೀಡಾಗಿದ್ದ ಪೊಲೀಸರ ನಿದ್ದೆ ಕೆಡಿಸಿತ್ತು.

      ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಅವರು, ಪರಶುರಾಮನ ಮೃತದೇಹ ಹುಡುಕುವಂತೆ ಬಡಾವಣೆ ಠಾಣೆ ಸಬ್ ಇನ್ಸಪೆಕ್ಟರ್ ವೀರಬಸಪ್ಪ ಹಾಗೂ ಸಿಬ್ಬಂದಿಗೆ ಆದೇಶಿಸಿದ್ದರು. ಎಲ್ಲಾ ಕಡೆ ಹುಡುಕಿದರೂ, ದಾವಣಗೆರೆ ಸೇರಿದಂತೆ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಯುವಕನ ಶವವಾಗಲೀ, ಅಪರಿಚಿತ ವ್ಯಕ್ತಿ ಶವದ ಬಗ್ಗೆಯಾಗಲೀ ಮಾಹಿತಿ ಸಿಗಲಿಲ್ಲ. ಅಲ್ಲದೇ, ಪರಶುರಾಮನ ಮೊಬೈಲ್ ಸಹ ಸ್ವಿಚ್ ಆಫ್ ಆಗಿತ್ತು. ಆದರೆ, ಶನಿವಾರ ಸಂಜೆಯ ನಂತರ ಮೊಬೈಲ್ ಆನ್ ಆದ ನಂತರದಲ್ಲಿ ಲೋಕೇಷನ್ ಜಾಡು ಹಿಡಿದು ಹೋರಟ ಬಡಾವಣೆ ಪೊಲೀಸರಿಗೆ ದಾವಣಗೆರೆ ರೈಲ್ವೆ ನಿಲ್ದಾಣದ ಬಳಿ ಸೋಷಿಯಲ್ ಮೀಡಿಯಾಗಳಲ್ಲಿ ಕೊಲೆಯಾಗಿದ್ದಾನೆಂದು ಹೇಳಲಾದ ಯುವಕ ಅದೇ ನೀಲಿ ಅಂಗಿ ತೊಟ್ಟವನು ಸಿಕ್ಕಿ ಬಿದ್ದಿದ್ದಾನೆ. ತಕ್ಷಣವೇ ಪೊಲೀಸರು ಆ ಯುವಕನನ್ನು ವಿಚಾರಿಸಿ, ವಾಟ್ಸಪ್‍ನಲ್ಲಿ ಹರಿದಾಡುತ್ತಿದ್ದ ಚಿತ್ರವನ್ನು ತೋರಿಸಿದಾಗ ಅದು ತನ್ನದೇ ಚಿತ್ರ ಎಂದು ಒಪ್ಪಿಕೊಂಡಿದ್ದರಿಂದ ಅಧಿಕಾರಿಗಳು ತಕ್ಷಣವೇ ಎಸ್ಪಿ ಚೇತನ್ ಗಮನಕ್ಕೆ ಈ ವಿಚಾರ ತಂದಿದ್ದಾರೆ.

       ಕೊಲೆಯಾಗಿದ್ದ ಎನ್ನಲಾದ ಯುವಕ ಪರಶುರಾಮನನ್ನು ಜೀವಂತವಾಗಿ ಪತ್ತೆ ಮಾಡಿದ ಪೊಲೀಸರು ಆತನನ್ನು ಬಡಾವಣೆ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ, ಕಳೆದ ಶುಕ್ರವಾರ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ, ತಮಾಷೆಗಾಗಿ ಹೀಗೆ ಕುಂಕುಮವನ್ನು ನೀರಿನಲ್ಲಿ ಕಲಸಿ, ಮುಖ, ಹಣೆ, ಬಾಯಿ ಮೇಲೆ ಹಾಕಿ ಕೊಂಡು ರಕ್ತ ಸುರಿಯುತ್ತಿರುವಂತೆ ಫೋಟೋ ತೆಗೆದು, ವಾಟ್ಸಪ್‍ಗೆ ಬಿಟ್ಟಿದ್ದಾಗಿ ಬಾಯಿ ಬಿಟ್ಟಿದ್ದಾನೆ.

       ತಮಾಷೆಗಾಗಿ ತಾನು ಹೀಗೆ ಮಾಡಿದ್ದು, ಇನ್ನು ಮುಂದೆ ಹೀಗೆಲ್ಲಾ ತಮಾಷೆ ಮಾಡುವುದಿಲ್ಲವೆಂಬುದಾಗಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪರಶುರಾಮ ತಪ್ಪೊಪ್ಪಿಕೊಂಡು, ಕ್ಷಮೆ ಕೇಳಿದ್ದಾನೆ. ಇನ್ನು ತಮ್ಮ ಸಹೋದರನ ಕೊಲೆಯಾಗಿದೆಯೆಂದು ದೂರು ನೀಡಿದ್ದ ಪರಶುರಾಮನ ಸಹೋದರಿ ಅನಿತಾ ಸಹ, ವಾಟ್ಸಪ್‍ನಲ್ಲಿ ತಮ್ಮ ಫೋಟೋ ನೋಡಿ ಕೊಲೆಯಾಗಿದ್ದಾನೇನೋ ಎಂಬ ಭಯದಲ್ಲಿ ಠಾಣೆಗೆ ದೂರು ನೀಡಿದ್ದೆವು. ಪರಶುರಾಮನ ತಮಾಷೆಯಿಂದ ಪಾಲಕರೂ ತೀವ್ರ ಆತಂಕಗೊಂಡಿದ್ದರು. ಯಾರೇ ಆಗಲಿ ಇಂತಹ ಕೆಲಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap