ಹರಿಹರ:
ತಾಲ್ಲೂಕಿನಲ್ಲಿ ಮಿತಿಮೀರಿರುವ ನಕಲಿ ಪತ್ರಕರ್ತರ ಹಾವಳಿ ತಡೆಯುವಂತೆ ಕೋರಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಶನಿವಾರ ಎಸ್ಪಿ ಆರ್.ಚೇತನ್ ಅವರಿಗೆ ಮನವಿ ಸಲ್ಲಿಸಲಾಯಿತು. ಪತ್ರಕರ್ತರೆಂದು ಹೇಳಿಕೊಂಡು ಕೆಲವರು ತಾಲ್ಲೂಕಿನ ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜು, ಉದ್ಯಮ ಸಂಸ್ಥೆಗಳು, ಸಾರ್ವಜನಿಕರ ಅಂಗಡಿ-ಮುಂಗಟ್ಟುಗಳಿಗೆ ತೆರಳಿ ಹೆದರಿಸಿ-ಬೆದರಿಸಿ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಂತೂ ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯ್ತಿಗಳು, ಸರ್ಕಾರಿ-ಖಾಸಗೀ ಶಾಲೆಗಳಿಗೆ ತೆರಳಿ ತಾವು ಟಿವಿ ಮಾಧ್ಯಮದವರು ಎಂದು ಹೇಳಿ ಮೊಬೈಲ್‍ನಲ್ಲಿ ಚಿತ್ರೀಕರಿಸುತ್ತಾ ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಬಗ್ಗೆ ಸಂಘಕ್ಕೆ ಸಾಕಷ್ಟು ದೂರುಗಳು ಬಂದಿವೆ.
ಯೂಟೂಬ್ ಚಾನಲ್, ವಾಟ್ಸ್‍ಆಪ್ ಚಾನಲ್ ಎಂದೆಲ್ಲಾ ಹೇಳಿಕೊಂಡು ನಿಯಮ ಬಾಹಿರವಾಗಿ ವಿವಿಧ ಲೋಗೋ ಹಿಡಿದುಕೊಂಡು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರಿಗೆಲ್ಲಾ ಕಿರುಕುಳ ಕೊಡುತ್ತಿರುವ ಘಟನೆಗಳು ನಡೆಯುತ್ತಿವೆ. ಇದಲ್ಲದೆ ಪತ್ರಕರ್ತರಲ್ಲದವರೂ ಸಹ ತಮ್ಮ ವಾಹನಗಳ ಮೇಲೆ ‘ಪ್ರೆಸ್’ ಎಂದು ಬರೆದುಕೊಂಡು ಸಂಚರಿಸುತ್ತಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಲ್ಲದೆ ಪ್ರಶ್ನಿಸುವ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಾರೆ.
ಆದ್ದರಿಂದ ತಾಲ್ಲೂಕಿನಲ್ಲಿ ಪತ್ರಕರ್ತರ ಹೆಸರಿನಲ್ಲಿ ದುರ್ವರ್ತನೆ ತೋರುವ ಮೂಲಕ ಸಂವಿಧಾನದ ನಾಲ್ಕನೆ ಅಂಗವೆಂದು ಕರೆಯಲ್ಪಡುವ ಪತ್ರಿಕೋದ್ಯಮಕ್ಕೆ ಚ್ಯುತಿ ತರುತ್ತಿರುವ ಅಲ್ಲದೆ ಸಮಾಜಕ್ಕೆ ಉಪದ್ರವಕಾರಿಯಾಗಿರುವ ಇಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ವಾಹನಗಳ ಮೇಲೆ ‘ಪ್ರೆಸ್’ ಎಂದು ನಮೂದಿಸಿಕೊಂಡಿರುವ ನಕಲಿ ಪತ್ರಕರ್ತರ ವಾಹನಗಳನ್ನು ತಡೆದು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಮನವಿ ಸ್ವೀಕರಿಸಿದ ಎಸ್ಪಿ ಸ್ಥಳದಲ್ಲಿದ್ದ ಸಿಪಿಐ ಗುರುನಾಥ್ ಅವರಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.
ಸಂಘದ ಗೌರವಾಧ್ಯಕ್ಷ ಟಿ.ಇನಾಯತ್ ಉಲ್ಲಾ, ಅಧ್ಯಕ್ಷ ಶೇಖರಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಕೆ.ಜೈಮುನಿ, ಸಹಕಾರ್ಯದರ್ಶಿ ಮಂಜನಾಯ್ಕ, ಖಜಾಂಚಿ ಸುಬ್ರಮಣ್ಯ ನಾಡಿಗೇರ್, ಸದಸ್ಯರಾದ ಬಿ.ಎಂ.ಸಿದ್ದಲಿಂಗಸ್ವಾಮಿ, ರವಿಶಂಕರ್ ಗದ್ಗಿಮಠ, ಪ್ರವೀಣ್ ಆರ್.ಬಿ. ಜಿ.ಕೆ.ಪಂಚಾಕ್ಷರಿ, ಮಂಜುನಾಥ್ ಆರ್., ಮಂಜುನಾಥ್ ರಾಜನಹಳ್ಳಿ, ಚಿದಾನಂದ ಕಂಚೀಕೇರಿ, ಕುಮಾರ್ ಗಂಗನರಸಿ, ವಿಶ್ವನಾಥ್, ಚಂದ್ರಶೇಖರ್ ಕುಂಬಾರ್, ಸುರೇಶ್ ಕುಣಿಬೆಳಕೇರಿ, ಬಿ.ಎಂ.ಚಂದ್ರಶೇಖರ್, ಇರ್ಪಾನ್ ಖಾನ್ ಮತ್ತಿತರರಿದ್ದರು. ಈ ಸಂದರ್ಭದಲ್ಲಿ ನಗರ ಠಾಣೆ ನೂತನ ಕಟ್ಟಡಕ್ಕೆ ಚಾಲನೆ ನೀಡಲು ಆಗಮಿಸಿದ್ದ ಶಾಸಕ ಎಸ್.ರಾಮಪ್ಪ, ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ಹೆಚ್ಚುವರಿ ಡಿವೈಸ್ಪಿ ಉದೇಶ್, ಗ್ರಾಮಂತರ ಡಿವೈಸ್ಪಿ ಶಿವಮೂರ್ತಿ ಸಹ ಸ್ಥಳದಲ್ಲಿದ್ದರು.