ವೈದ್ಯರ ಸಲಹೆ ಪಾಲಿಸಿ, ಅಂಧತ್ವ ನಿವಾರಿಸಿಕೊಳ್ಳಿ

ದಾವಣಗೆರೆ:

      ವೈದ್ಯರು ನೀಡುವ ಸಲಹೆ ಪಾಲಿಸಿ ಅಂಧತ್ವ ನಿವಾರಣೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್ ಕರೆ ನೀಡಿದರು.

        ನಗರದ ದೇವರಾಜ್ ಅರಸು ಬಡಾವಣೆಯ ಎ ಬ್ಲಾಕ್‍ನ ಲಯನ್ಸ್ ಭವನದಲ್ಲಿ ಭಾನುವಾರ ಶ್ರೀಮತಿ ಪಾರ್ವತಮ್ಮ ಡಾ.ಶಾಮನೂರು ಶಿವಶಂಕರಪ್ಪ ನಾಗರೀಕ ಸೇವಾ ಸಮಿತಿ, ಜಿಲ್ಲಾ ಅಂಧತ್ವ ನಿಯಂತ್ರಣ ಸಮಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ, ಕಣ್ಣಿನ ಪರೀಕ್ಷೆ ಮತ್ತು ದಾಖಲಾತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

      ಅಂಧತ್ವ ಎನ್ನುವುದು ಕೆಲವರಲ್ಲಿ ಹುಟ್ಟುನಿಂದ ಹಾಗೂ ಇನ್ನೂ ಕೆಲವರಲ್ಲಿ ಬದುಕಿನ ಕಾಲ ಕ್ರಮೇಣ ವಯಸ್ಸಾದಂತೆ ಬರಲಿದೆ. ಕೆಲವರು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲು ಕೆಲ ಕಾರಣಗಳಿಂದ ಸಾಧ್ಯವಾಗುವುದಿಲ್ಲ. ಇಂಥವರನ್ನು ಗುರುತಿಸಿ ತಪಾಸಣೆಯ ಜೊತೆಗೆ ಶಸ್ತ್ರ ಚಿಕಿತ್ಸೆಗೆ ಅನುಕೂಲ ಮಾಡಿಕೊಡುತ್ತಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ನಾಗರೀಕ ಸೇವಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

       ಇತ್ತೀಚಿನ ದಿನಗಳಲ್ಲಿ ಸಮಾಜ ಸೇವೆಗೆ ಒತ್ತು ನೀಡವುದು ವಿರಳವಾಗಿದೆ. ಸಂಘ-ಸಂಸ್ಥೆಗಳು, ಸಾರ್ವಜನಿಕರು ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ಜನರಿಗೆ ಸಾಕಷ್ಟು ಸೇವೆಗಳ ಅಗತ್ಯವಿದ್ದು, ಇಂಥವರ ಸೇವೆಗೆ ಸಂಘ-ಸಂಸ್ಥೆಗಳು ಮುಂದೆ ಬರಬೇಕು. ಆಗ ಅವರಿಗೆ ಅನುಕೂಲದ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ಎಲ್ಲಾ ಸೇವೆ ನೀಡಲು ಸರ್ಕಾರದಿಂದ ಸಾಧ್ಯವಿಲ್ಲ. ಆದ್ದರಿಂದ ಸೌಲಭ್ಯಗಳನ್ನು ಒದಗಿಸಲು ಸಂಘ-ಸಂಸ್ಥೆಗಳು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

       ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಭಿಕೆ ಮಾತನಾಡಿ, ದಾನಗಳಲ್ಲಿ ನೇತ್ರ ದಾನವೂ ಮುಖ್ಯವಾಗಿದೆ. ನಮ್ಮ ಮರಣದ ನಂತರ ನಮ್ಮ ಕಣ್ಣುಗಳು ಮಣ್ಣು ಪಾಲಾಗಲಿದೆ. ಆದ್ದರಿಂದ ಅದೇ ಕಣ್ಣು ದಾನ ಮಾಡಿದರೆ, ಬೇರೆಯವರನ್ನು ನೋಡಲು ಸಾಧ್ಯವಾಗಲಿದೆ. ರಕ್ತ ದಾನ, ದೇಹ ದಾನ ಮತ್ತು ಅಂಗಾಂಗಗಳ ದಾನವನ್ನು ಮಾಡಬೇಕು. ಇದರಿಂದ ಜನರಿಗೂ ಉಪಯುಕ್ತವಾಗಲಿದೆ ಎಂದರು.

      ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಇ.ಎಂ.ಮಂಜುನಾಥ್ ಮಾತನಾಡಿ, ನಮ್ಮ ಸಮಿತಿಯಿಂದ ಉದ್ಯಾನವ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಘಟಕ ಆರಂಭ ಸೇರಿದಂತೆ ಪ್ರಮುಖ ಸೇವಾ ಕಾರ್ಯ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲೂ ಕೂಡ ಇಂಥಹ ಸೇವಾ ಕಾರ್ಯ ಮಾಡಲು ಸಮಿತಿಯ ಗೌರವಾಧ್ಯಕ್ಷ ಮಲ್ಲೇಶಪ್ಪನವರ ಮಾರ್ಗದರ್ಶನದಲ್ಲಿ ರೂಪುರೇಷೆ ತಯಾರಿಸಲಾಗಿದೆ ಎಂದು ಹೇಳಿದರು.

       ಕಾರ್ಯಕ್ರಮದಲ್ಲಿ ಡೂಡಾ ಮಾಜಿ ಅಧ್ಯಕ್ಷ ಮಾಲತೇಶ್‍ರಾವ್ ಜಾಧವ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಬಿ.ಪ್ರತಾಪ್, ಜೆಜೆಎಂಸಿಯ ಪ್ರಾಂಶುಪಾಲ ಡಾ.ಎ.ವಿ.ಸೂರ್ಯಪ್ರಕಾಶ್, ನೇತ್ರ ತಜ್ಞ ಡಾ.ವಿ.ಎ.ಸೀತಾರಾಮ್, ಜಿಲ್ಲಾ ನೇತ್ರಾಧಿಕಾರಿ ಕೆ.ಎಸ್.ರಂಗನಾಥ್, ಸಮಿತಿಯ ಗೌರವಾಧ್ಯಕ್ಷ ಕೆ.ಎಸ್.ಮಲ್ಲೇಶಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಂ.ವೀರಯ್ಯಸ್ವಾಮಿ, ಕರ್ನಾಟಕ ರಾಜ್ಯ ಪವರ್ ಲಿಫ್ಟರ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಸಾಯಿನಾಥ್, ಸಮಿತಿಯ ಉಪಾಧ್ಯಕ್ಷ ಅಲ್ಲಾವಲಿ ಸಮೀವುಲ್ಲಾ ಖಾನ್, ಉಪಾಧ್ಯಕ್ಷೆ ಅನಿತಾ ಸಾಯಿನಾಥ್, ಸಹ ಕಾರ್ಯದರ್ಶಿ ನಟರಾಜ್ ಪಿ.ಎಸ್, ಸಂಘಟನಾ ಕಾರ್ಯದರ್ಶಿ ಮಹೇಶ್.ಹೆಚ್, ಖಜಾಂಚಿ ಮಂಜುನಾಥ್ ಎಸ್.ಜೆ, ನಿರ್ದೇಶಕರಾದ ಉಮೇಶ್ ಜಿ.ಎಸ್, ಶಂಕರ್‍ರಾವ್.ಕೆ, ರಮೇಶ್.ಡಿ, ವಿಜಯಾ ಸದಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

      ನಾಗರತ್ನಮ್ಮ ಮಲ್ಲೇಶಪ್ಪ ಸ್ವಾಗತಿಸಿದರು. ಜೆ.ಎಂ.ನಾಗರತ್ನ ನಿರೂಪಿಸಿದರು. ನ್ಯಾಯವಾದಿ ವಸುಂದರಾ ಜಿ.ಸಿ. ಚಿದಾನಂದಯ್ಯ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link