ಬೆಂಗಳೂರು
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಕೊರೋನಾ ವೈರಾಣು ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲೇ ನಿರ್ಧರಿಸಿರುವಂತೆ ಭಾನುವಾರ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರುತ್ತದೆ. ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗಲಿದ್ದು, ತೀರಾ ಅಗತ್ಯವಿಲ್ಲದೆ ರಸ್ತೆಗಳಲ್ಲಿ ಸಾರ್ವಜನಿಕರು ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸರ್ಕಾರಿ ವಾಹನಗಳು ಸೇರಿದಂತೆ ಬಸ್, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ, ಲಾಕ್‍ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ಕೊರೋನಾ ಸೋಂಕು ತಡೆಗಟ್ಟುವಲ್ಲಿ ಸಾರ್ವಜನಿಕರು ಸರ್ಕಾರದೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.
ಸಂಪೂರ್ಣ ಲಾಕ್‍ಡೌನ್ ಅವಧಿ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗುತ್ತಿದೆಯಾದರೂ ನಿನ್ನೆ ಸಂಜೆ 7 ಗಂಟೆಯಿಂದಲೇ ನಿರ್ಬಂಧ ಅವಧಿ ಆರಂಭವಾಗಲಿದ್ದು, ಎಲ್ಲಾ ವಾಣಿಜ್ಯ ಮಳಿಗೆಗಳು ಹಾಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಸೂಚಿಸಿದೆ.
ಈ ಮಧ್ಯೆ, ಬೆಂಗಳೂರು ನಗರದಲ್ಲಿ ಸಕಾರಣವಿಲ್ಲದೆ ರಸ್ತೆಯಲ್ಲಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿನ್ನೆ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೆ ಮನೆಯಿಂದ ಯಾರೂ ಹೊರಗೆ ಬರಬಾರದು ಎಂದು ಪೆÇಲೀಸ್ ಆಯುಕ್ತ ಭಾಸ್ಕರ್‍ರಾವ್ ಹೇಳಿಕೆ ನೀಡಿದ್ದಾರೆ.ಸೋಮವಾರ ರಂಜಾನ್ ಆಚರಣೆ ಇದ್ದು, ಮುಸ್ಲಿಂ ಬಾಂಧವರು ಅಗತ್ಯ ಸಾಮಗ್ರಿಗಳನ್ನು ನಿನ್ನೆಯೆ ಖರೀದಿಸಬೇಕೆಂದು ಸೂಚಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ