ವಾಲ್ಮೀಕಿ ರಾಮನ ಆದರ್ಶ ಪಾಲನೆಯಿಂದ ರಾಮರಾಜ್ಯ : ಎ.ಎನ್.ಗಜೇಂದ್ರಕುಮಾರ್

ತುಮಕೂರು:

       ಬೇಟೆಯಾಡಿ ಜೀವನ ನಡೆಸುತ್ತಿದ್ದ ವಾಲ್ಮೀಕಿ ಅವರು, ನಾರದ ಮುನಿಗಳ ಉಪದೇಶದ ನಂತರ ತಪಸ್ಸು ಮಾಡಿ ಮಹರ್ಷಿಯಾಗಿ ರಾಮಾಯಣದಂತಹ ಶ್ರೇಷ್ಠ ಗ್ರಂಥವನ್ನು ರಚಿಸಿದರು ಎಂದು ಕೆ.ಎಸ್.ಆರ್.ಟಿ.ಸಿ.ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎನ್.ಗಜೇಂದ್ರಕುಮಾರ್ ತಿಳಿಸಿದರು.

      ನಗರದ ಹೊರವಲಯದಲ್ಲಿರುವ ಕೆಎಸ್‍ಆರ್‍ಟಿಸಿ ತುಮಕೂರು ಘಟಕ-2ರಲ್ಲಿ ನಡೆದ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಮೊದಲ ಕವಿಯಾಗಿರುವ ವಾಲ್ಮೀಕಿ ಅವರ ರಾಮಾಯಣದ ರಾಮನ ಪತ್ರ ಶ್ರೇಷ್ಠವಾಗಿದ್ದು, ರಾಮನ ಆದರ್ಶಗಳನ್ನು ನಾವು ಅನುಸರಿಸಿದರೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು ನಿಗಮವು 18.26 ಕೋಟಿ ಸಾರಿಗೆ ಆದಾಯವನ್ನು ಗಳಿಸಿ ಹಿಂದಿನ ಎಲ್ಲಾ ಸಾರಿಗೆ ಆದಾಯದ ದಾಖಲೆಯನ್ನು ಮೀರಿದ್ದು, ಇದಕ್ಕೆಲ್ಲಾ ನಮ್ಮ ನೌಕರರ ಶ್ರಮವೇ ಕಾರಣವಾಗಿದ್ದು, ನಿಗಮದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲ ನೌಕರರಿಗೂ ಅಭಿನಂದನೆ ಸಲ್ಲಿಸಿದರು.

     ವಿಭಾಗೀಯ ಸಂಚಲನಾಧಿಕಾರಿ ಫಕೃದ್ದೀನ್ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಎಲ್ಲಾ ಧರ್ಮದವರು ಒಪ್ಪಿಕೊಳ್ಳಬಹುದಾದ ರಾಮಾಯಣ ಗ್ರಂಥವನ್ನು ಈ ಜಗತ್ತಿಗೆ ನೀಡಿದ್ದಾರೆ. ಜಗತ್ತಿನ ಎಲ್ಲಾ ಭಾಗದ ಜನರು ರಾಮಾಯಣದಲ್ಲಿ ಬರುವ ರಾಮನ ಪಾತ್ರವನ್ನು ಕೊಂಡಾಡುತ್ತಿದ್ದಾರೆ. ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರೆಲ್ಲರೂ ರಾಮನ ಬಗ್ಗೆ ತುಂಬಾ ಭಕ್ತಿಭಾವ ತೋರುತ್ತಾರೆ, ಮಲೇಷಿಯಾದ ಅಧ್ಯಕ್ಷರು ರಾಮನ ಹೆಸರಿನಲ್ಲಿ ಅಧಿಕಾರ ಸ್ವೀಕರಿಸುತ್ತಾರೆ, ಥೈಲ್ಯಾಂಡ್‍ನ ಜನ ರಾಮನನ್ನು ಪೂಜಿಸುತ್ತಾರೆ. ಇಂತಹ ಮೇರು ಗ್ರಂಥವನ್ನು ಕೊಟ್ಟ ವಾಲ್ಮೀಕಿ ಋಷಿಗಳು ಬಹಳ ಜ್ಞಾನಿಗಳು ಎಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಹಾಗೂ ಸಾಹಿತಿ ವಿ.ಡಿ.ಹನುಮಂತರಾಯಪ್ಪ ಮಾತನಾಡಿ ಪ್ರಕೃತಿಯಿಂದ ಪಾಠ ಕಲಿತು ಜಗತ್ತಿಗೆ ನೀತಿ ಪಾಠ ಹೇಳಿದ ಕವಿ ಎಂದರೆ ಅದು ಮಹರ್ಷಿ ವಾಲ್ಮೀಕಿಯವರು ಮನುಷ್ಯ ಹುಟ್ಟುವಾಗ ಸಾಮಾನ್ಯ ಮನುಷ್ಯ. ಇಂತಹ ಸಾಮಾನ್ಯ ಮನುಷ್ಯ ಸಾಧನೆ ಮಾಡಿದರೆ ಜಗತ್ತು ಮರೆಯದ ಶ್ರೇಷ್ಠ ವ್ಯಕ್ತಿಯಾಗುತ್ತಾನೆ ಇಂತಹವರ ಸಾಲಿನಲ್ಲಿ ಮೊದಲಿಗರು ವಾಲ್ಮೀಕಿ ಅವರು ನಿಲ್ಲುತ್ತಾರೆ ಎಂದರು.

      ಇತ್ತಿಚೆಗೆ ಪ್ರಕೃತಿಯ ಮೇಲೆ ನಿರಂತರ ದಾಳಿಯಾಗುತ್ತಿದ್ದು ಪ್ರಕೃತಿಯ ಅವನತಿಯ ಅಂಚಿಗೆ ಬಂದು ನಿಂತಿದೆ ಇದರ ಪರಿಣಾಮವಾಗಿ ಭೂಮಿಯ ಮೇಲೆ ಮನುಷ್ಯ ಜೀವನ ಸಂಪೂರ್ಣ ನಾಶವಾಗುವ ಭಯವಾಗುತ್ತಿದೆ. ನಾವು ಪ್ರಕೃತಿಯನ್ನು ಪ್ರೀತಿಸಿದಾಗ ಮಾತ್ರ ನಾವು ಉಳಿಯಲು ಸಾಧ್ಯವಾಗುತ್ತದೆ. ಮಹರ್ಷಿ ವಾಲ್ಮೀಕಿಯವರು ಗಿಡ-ಮರ, ಪ್ರಾಣಿ-ಪಕ್ಷಿ, ನದಿಗಳ ಜೊತೆ ಬಾಂಧವ್ಯ ಇಟ್ಟುಕೊಂಡು ಅವುಗಳ ಒಡನಾಡಿಯಾಗಿ ಎಲ್ಲವೂಗಳ ಜೊತೆ ಸಂಭಾಷಿಸುತ್ತಲೇ ರಾಮಾಯಣವನ್ನು ರಚಿಸಿದರು. ಮಹರ್ಷಿ ವಾಲ್ಮೀಕಿಯವರು ನಮ್ಮ ಕನ್ನಡ ನಾಡಿನ ಕೋಲಾರ ಜಿಲ್ಲೆಯ ಅವನಿ ಗ್ರಾಮದಲ್ಲಿ ನೆಲೆಸಿ ಸೀತಾದೇವಿಗೆ ಆಶ್ರಯ ನೀಡಿ, ಲವಕುಶರಿಗೆ ವಿದ್ಯಾಭ್ಯಾಸ ಮಾಡಿಸಿದರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ವಿಷಯ ಎಂದು ತಿಳಿಸಿದರು.

       ಕಾರ್ಯಕ್ರಮದಲ್ಲಿ ನಿಗಮದ ಅಧಿಕಾರಿಗಳಾದ ಬಸವರಾಜ್, ಹೆಚ್.ಪಿ.ನಾಗರಾಜ, ಘಟಕದ ವ್ಯವಸ್ಥಾಪಕರಾದ ಬಿ.ಮಂಜುನಾಥ್, ಶಶಿರೇಖಾ.ಎಂ.ಎಲ್, ರಾಜಶೇಖರ್, ಹನುಮಂತಪ್ಪ, ಜಿ.ಬಿ.ಕುಮಾರ್, ಪಿ.ಮಂಜುನಾಥ್, ರಾಘವೇಂದ್ರ ಮತ್ತು ಸಿದ್ದಪ್ಪ ಹವಲ್ದಾರ್ ಹಾಗೂ ನೌಕರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link