ಅಧಿಕಾರಿಗಳ ವಿರುದ್ಧ ಸುಳ್ಳು ದೂರು: ಪ್ರತಿಭಟನೆ

ದಾವಣಗೆರೆ :

         ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಉಪಕಾರ್ಯದರ್ಶಿಗಳ ವಿರುದ್ಧ ಜಿ.ಪಂ ಅಧ್ಯಕ್ಷರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ತಕ್ಷಣವೇ ದೂರು ವಾಪಾಸು ಪಡೆಯಬೇಕೆಂದು ಒತ್ತಾಯಿಸಿ, ಗ್ರಾಮ ಪಂಚಾಯಿತಿಗಳ ಪಿಡಿಓಗಳು, ಹೊರಗುತ್ತಿಗೆ ನೌಕರರು, ತಾಂತ್ರಿಕ ಸಹಾಯಕರು ಶನಿವಾರ ಜಿಲ್ಲಾ ಪಂಚಾಯಿತಿ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

         ಈ ಪ್ರತಿಭಟನೆಗೆ ಜಿಲ್ಲಾ ಪಂಚಾಯತ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸಹ ಕಪ್ಪುಪಟ್ಟಿ ಧರಿಸುವ ಮೂಲಕ ಕಾರ್ಯನಿರ್ವಹಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

         ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾರವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಜಿಲ್ಲೆಯ 233 ಗ್ರಾ.ಪಂ.ಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ, ಕಾರ್ಯದರ್ಶಿಗಳ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

        ಅಧ್ಯಕ್ಷರು ದೂರು ಸಲ್ಲಿಸುವ ಮುನ್ನ ಯಾವ ಗ್ರಾಮಗಳಿಗೂ ಭೇಟಿ ನೀಡಿಲ್ಲ. ಯಾರೂ ಅವರಿಗೆ ದೂರು ನೀಡಿಲ್ಲ. ಆರ್‍ಟಿಐ ಮುಖಾಂತರ ಯಾರೋ ಪಡೆದ ಮಾಹಿತಿಯ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಹಗರಣಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ತಪ್ಪು ಮಾಡಿದ ಗ್ರಾ.ಪಂ. ಅಧಿಕಾರಿಗಳ ವಿರುದ್ಧ ಈಗಾಗಲೇ ವಿಚಾರಣೆ ನಡೆದಿದೆ. ಸಿಇಓ ಅಶ್ವತಿ ಅವರು ಯಾರಿಂದಲೂ ಲಂಚ ಪಡೆದಿಲ್ಲ ಹಾಗೂ ಯಾವ ಪ್ರಕರಣವನ್ನು ಮುಚ್ಚಿ ಹಾಕಿಲ್ಲ.

         ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯು ರಾಜ್ಯದಲ್ಲಿಯೇ ಉತ್ತಮ ರೀತಿಯಲ್ಲಿ ಪ್ರಗತಿಯತ್ತ ಸಾಗುತ್ತಿದೆ. ತೀವ್ರ ಬರ ಸಂಕಷ್ಟದ ನಡುವೆಯೂ ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತಹ ಮಾದರಿ ಕಾರ್ಯವನ್ನು ಸಿಇಓ ಮತ್ತು ಡಿಎಸ್ ಮಾಡಿದ್ದಾರೆ. ಅಂತಹವರ ವಿರುದ್ಧ ಅಧ್ಯಕ್ಷರು ದೂರು ದಾಖಲಿಸಿದ್ದು, ತಕ್ಷಣವೇ ವಾಪಾಸ್ ಪಡೆಯಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಿಡಿಓಗಳು, ಹೊರಗುತ್ತಿಗೆ ನೌಕರರು, ತಾಂತ್ರಿಕ ಸಹಾಯಕರು ಮತ್ತಿತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link