ಬೆಂಗಳೂರು:
ಲೋಕಸಭಾ ಚುನಾವಣೆಯ ಬಿಸಿ ಹೆಚ್ಚಾಗುತ್ತಿದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ನಾಯಕರ ವಿರುದ್ಧ ಅಪಪ್ರಚಾರ, ಅವಹೇಳನಕಾರಿ ಸಂದೇಶಗಳ ಹಾವಳಿನೂ ಹೆಚ್ಚಾಗಿದೆ.ರಾಜ್ಯ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನಾಯಕರ ಪರ ಪ್ರಚಾರ ಕಾರ್ಯವನ್ನು ಬಿರುಸಿನಿಂದ ಮಾಡು ತ್ತಿವೆ.ಇದಕ್ಕಾಗಿನೇ ಪಕ್ಷಗಳು ಪ್ರತ್ಯೇಕ ಐಟಿ ಸೆಲ್‍ಗಳನ್ನು ಪ್ರಾರಂಭಿಸಿದ್ದು, ಇಪ್ಪತ್ತ ನಾಲ್ಕು ತಾಸು ಕಾರ್ಯನಿರ್ವಹಿಸುತ್ತಿದೆ. ತಮ್ಮ ನಾಯಕರ ಪರ ಪ್ರಚಾರ ಮಾಡುವುದರ ಜತೆಗೆ ತಮ್ಮ ನಾಯಕರುಗಳ ವಿರುದ್ಧ ಪೋಸ್ಟ್ ಮಾಡಲಾಗುತ್ತಿರುವ ಅವಹೇಳನಕಾರಿ ಸಂದೇಶಗಳನ್ನು ನಿಭಾಯಿಸುವುದೇ ಐಟಿ ತಂಡಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ, ನಾಯಕರುಗಳ ಖಾತೆಗಳಲ್ಲಿ ಅವಹೇಳನಕಾರಿ ಪ್ರತಿಕ್ರಿಯೆ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಹೀಗೆ ನಿಂದಿಸುವ, ಅವಹೇಳನಕಾರಿ ಸಂದೇಶಗಳು ನಕಲಿ ಖಾತೆಗಳ ಮೂಲಕ ಪೋಸ್ಟ್ ಮಾಡಲಾಗುತ್ತಿದೆ.
ಅವಹೇಳನಕಾರಿ ಸಂದೇಶ, ನಕಲಿ ಟ್ವಿಟರ್ ಹಾಗೂ ಫೇಸ್‍ಬುಕ್ ಖಾತೆಗಳನ್ನು ನಿಯಂತ್ರಿಸಲು ಪಕ್ಷದ ಐಟಿ ಸೆಲ್ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದಾರೆ.
ಪ್ರಧಾನಿ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರುಗಳು ಈ ಅವಹೇಳನ ಪೋಸ್ಟ್‍ಗಳಿಗೆ ಗುರಿಯಾಗುತ್ತಿದ್ದಾರೆ. ಇಂಥ ಅಪಪ್ರಾಚರ, ಅವಹೇಳನಾತ್ಮಕ ಪೋಸ್ಟ್‍ಗಳ ವಿರುದ್ಧ ಪಕ್ಷಗಳ ಐಟಿ ಸೆಲ್ ನಿಗಾ ವಹಿಸಿದ್ದು, ಸೈಬರ್ ಕ್ರೈಂ ಪೊಲೀಸರಿಗೆ ದೂರುಗಳನ್ನು ನೀಡುತ್ತಿದ್ದಾರೆ.
ಕೆಪಿಸಿಸಿ ಐಟಿ ಸೆಲ್ ಕಳೆದ ಮೂರು ತಿಂಗಳಿಂದ ನೂರಕ್ಕೂ ಹೆಚ್ಚು ಅವಹೇಳನ ಪೋಸ್ಟ್‍ಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಈ ರೀತಿ ನಿರಂತರ ದೂರು ನೀಡಿದ ಪರಿಣಾಮವಾಗಿ ಸುಮಾರು 40 ಕ್ಕೂ ಹೆಚ್ಚು ಟ್ವಿಟರ್ ಜಾಗೂ ಫೇಸ್‍ಬುಕ್ ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕೆಪಿಸಿಸಿ ಐಟಿ ಸೆಲ್ ಮುಖ್ಯಸ್ಥ ನಟರಾಜ ಗೌಡ ತಿಳಿಸಿದ್ದಾರೆ.
ಪ್ರತಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾನೂನು ಸಲಹೆಗಾರರನ್ನು ನೇಮಿಸಿದ್ದು, ಆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದ ಅಗ್ರ ನಾಯಕರನ್ನು ನಿಂದಿಸುವ ಪ್ರಕರಣಗಳನ್ನು ನಿಯಂತ್ರಿಸಲು ಯತ್ನಿಸುತ್ತಿದೆ.ಇತ್ತ ಬಿಜೆಪಿ ಕೂಡ ನಕಲಿ ಸಾಮಾಜಿಕ ಜಾಲತಾಣಗಳ ವಿರುದ್ಧ ಸಮರ ಸಾರಿದೆ.
ತಮ್ಮ ನಾಯಕರ ವಿರುದ್ಧ ಬರುವ ಅವಹೇಳನಕಾರಿ ಪೋಸ್ಟ್‍ಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಬಿಜೆಪಿ ಐಟಿ ಸೆಲ್ ಕಾರ್ಯಕರ್ತರು, ಅಂಥ ಪ್ರಕರಣಗಳ ಸಂಬಂಧ ದೂರು ನೀಡುತ್ತಿ ದ್ದಾರೆ.ಈವರೆಗೆ ಬಿಜೆಪಿ ಐಟಿ ಸೆಲ್ ಸುಮಾರು 20 ಕ್ಕೂ ಹೆಚ್ಚು ಖಾತೆಗಳನ್ನು ಬ್ಲಾಕ್ ಮಾಡಲಾಗಿದೆ. ಆದರೆ, ನಾವು ಕೊಡುವ ದೂರನ್ನು ಸೈಬರ್ ಕ್ರೈಮ್ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಬಿಜೆಪಿ ಐಟಿ ಸೆಲ್ ಸಿಬ್ಬಂದಿ ಆರೋಪ.