ಬೆಂಗಳೂರು
ಜಾಮೀನಿಗೆ ಶ್ಯೂರಿಟಿ ನೀಡಲು ನಕಲಿ ದಾಖಲೆ ನೀಡಿ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ಬಸವೇಶ್ವರನಗರದ ಸುರೇಶ್ ಬಾಬು ಮತ್ತು ಗೋವಿಂದ ರಾಜು ಬಂಧಿತ ಆರೋಪಿಗಳು. ಬಸವೇಶ್ವರನಗರ ಪೊಲೀಸ್ ಠಾಣೆಯ ಶಿವಕುಮಾರ್ ಎಂಬ ಆರೋಪಿಗೆ ಜಾಮೀನು ಸಂಬಂಧ ಶ್ಯೂರಿಟಿ ನೀಡಲು ಸುರೇಶ್ ಬಾಬು ಮತ್ತು ಗೋವಿಂದ ರಾಜು ಶಿಕ್ಷಣ ಇಲಾಖೆಯ ನಕಲಿ ಗುರುತಿನ ಚೀಟಿ, ದಾಖಲೆಗಳನ್ನು ನೀಡಿ ವಂಚಿಸಲು ಯತ್ನಿಸಿದ್ದಾರೆ.
ಈ ವೇಳೆ ಬಸವೇಶ್ವರ ನಗರ ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದಾಸೆಗೆ ವಂಚನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ನಕಲಿ ಸೀಲುಗಳು, ದಾಖಲೆಗಳನ್ನು ವಶಕ್ಕೆ ಪಡೆದು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.
ನಿವೃತ್ತ ಸೈನಿಕನಿಗೆ ಹಲ್ಲೆ
ಕ್ಷುಲ್ಲಕ ಕಾರಣಕ್ಕೆ ಪುಢಾರಿಗಳು ಅಪಾರ್ಟ್‍ಮೆಂಟ್‍ಗೆ ನುಗ್ಗಿ ನಿವೃತ್ತ ಸೈನಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರುವ ಸೈನಿಕ ಶಿಂಧೆ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.ಬಾಗಲೂರಿನ ವಾರಿಯರ್ಸ್ ಅಪಾರ್ಟ್‍ಮೆಂಟ್‍ನಲ್ಲಿರುವ 40 ಮಂದಿ ಮಾಜಿ ಸೈನಿಕರ ಪೈಕಿ ಶಿಂಧೆ ಎನ್ನುವರ ಮೇಲೆ ಹಲ್ಲೆ ನಡೆಸಲಾಗಿದೆ. ರಸ್ತೆಯಲ್ಲಿ ಬರುತ್ತಿದ್ದಾಗ ಈ ಕಿಡಿಗೇಡಿಗಳ ಕಾರಿಗೆ ಜಾಗ ಬಿಟ್ಟಿಲ್ಲ ಎಂದು ಸೈನಿಕ ಶಿಂಧೆ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.
ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಧಾವಿಸಿರುವ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ