ಕೊರೋನಾ : ನ್ಯಾಯಬೆಲೆ ಅಂಗಡಿಗಳ ಪಾತ್ರ ಮಹತ್ವದ್ದು

ಕೊರಟಗೆರೆ
 
    ಹಿಂದೆ 1957 ರಲ್ಲಿ ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ನ್ಯಾಯಬೆಲೆ ಅಂಗಡಿಗಳನ್ನು ತೆರೆದರು. ಪ್ರಸ್ತುತ ಇವು ಬಡವರ ಪಾಲಿಗೆ ಪ್ರಮುಖವಾಗಿವೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

    ಅವರು ಪಟ್ಟಣದ ಮಾರುತಿ ಕಲ್ಯಾಣಮಂಟಪದಲ್ಲಿ ತಾಲ್ಲೂಕು ನ್ಯಾಯಬೆಲೆ ಅಂಗಡಿ ಮತ್ತು ಸೀಮೆಎಣ್ಣೆ ವಿತರಕರ ಸಂಘದಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ಕಾರ್ಡ್ ವಿತರಣೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ಬಂದ ಭೀಕರ ಬರಗಾಲದಲ್ಲಿ ಬಡವರಿಗೆ ಆಹಾರ ಒದಗಿಸಲು ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲಾಯಿತು. ಈಗ ದೇಶದಲ್ಲಿ ಕೊರೋನಾದಂತಹ ಭೀಕರ ರೋಗದ ಜಟಿಲ ಪರಿಸ್ಥಿತಿಯಲ್ಲಿ ಆರ್ಥಿಕ ಕುಸಿತದಿಂದ ಕಂಗೆಟ್ಟಿರುವ ಬಡಜನರಿಗೆ ಸರ್ಕಾರ ನೀಡುತ್ತಿರುವ ಆಹಾರವನ್ನು ನ್ಯಾಯಬೆಲೆ ಅಂಗಡಿಯವರು ಪರಿಸ್ಥಿತಿಗೆ ಹೆದರದೆ ಹಂಚುತ್ತಿರುವುದು ಉತ್ತಮವಾದ ಕೆಲಸವಾಗಿದೆ ಎಂದರು.
ರಾಜ್ಯದಲ್ಲಿ 22000 ಕ್ಕೂ ಹೆಚ್ಚು ಪಡಿತರ ನ್ಯಾಯಬೆಲೆ ಅಂಗಡಿಗಳಿದ್ದು, ಶೇ. 65 ರಷ್ಟು ಜನರು ಈ ವ್ಯವಸ್ಥೆಯಲ್ಲಿದ್ದಾರೆ. ಬಡವರ ಹಸಿವನ್ನು ನೀಗಿಸುವ ಸರ್ಕಾರಗಳ ಪ್ರಯತ್ನದಲ್ಲಿ ಪಡಿತರ ಅಂಗಡಿಯ ಪಾತ್ರವು ಮಹತ್ವದ್ದಾಗಿದೆ. ಅದೇ ರೀತಿಯಾಗಿ ಅವರಿಗೆ ನೀಡಬೇಕಾದ ಸೌಲಭ್ಯ ಸವಲತ್ತ್ತುಗಳನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.

    ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ 124 ನ್ಯಾಯಬೆಲೆ ಅಂಗಡಿಗಳಿದ್ದು,ಪ್ರತಿ ಅಂಗಡಿ ಸುಮಾರು 500 ಕ್ಕೂ ಹೆಚ್ಚು ಬಡಕುಟುಂಬಗಳ ಸಂಪರ್ಕದಲ್ಲಿದ್ದು, ಜನ ಸಂಪರ್ಕದ ಸೇತುವೆಯಾಗಿದೆ ಎಂದರು. ನ್ಯಾಯಬೆಲೆ ಅಂಗಡಿ ರಾಜಾದ್ಯಕ್ಷ ಕೃಷ್ಣಪ್ಪ ಮಾತನಾಡಿ, ನ್ಯಾಯಬೆಲೆ ಅಂಗಡಿ ಮಾಲೀಕರ ಜೀವನ ದುಸ್ಥಿರವಾಗಿದೆ. ಕೊರೋನಾ ಸಮಯದಲ್ಲೂ ಸಹ ಪ್ರತಿಯೊಬ್ಬರ ಹೆಬ್ಬೆರಳ ಗುರುತನ್ನು ಪಡೆದು ಕೊರೋನಾ ರೋಗವನ್ನು ಲೆಕ್ಕಿಸದೆ ಪಡಿತರವನ್ನು ವಿತರಿಸುತ್ತಿದ್ದಾರೆ.

     ರಾಜ್ಯದಲ್ಲಿ 26 ಮಂದಿ ಪಡಿತರ ಅಂಗಡಿ ಮಾಲೀಕರು ಈ ರೋಗಕ್ಕೆ ಬಲಿಯಾಗಿದ್ದು, ಮೃತಪಟ್ಟವರ ಕುಟುಂಬಕ್ಕೆ ಅಂಗಡಿಯನ್ನು ಮುಂದುವರೆಸುವ ಆದೇಶವನ್ನು ಸರ್ಕಾರ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರುಗಳಾದ ಶಿವರಾಮಯ್ಯ, ಪ್ರೇಮಾಮಹಾಲಿಂಗಪ್ಪ, ತಾ.ಪಂ ಅಧ್ಯಕ್ಷ ಟಿ.ಸಿರಾಮಯ್ಯ, ಉಪಾಧ್ಯಕ್ಷ ವೆಂಕಟಪ್ಪ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸಯ್ಯ, ತಾಲ್ಲೂಕು ಪಡಿತರ ಅಂಗಡಿ ಸಂಘದ ಅಧ್ಯಕ್ಷ ಚಿಕ್ಕರಂಗಯ್ಯ, ಮಲ್ಲಿಕಾರ್ಜುನ, ರಂಗಧಾಮಯ್ಯ, ಗೊಂದಿಹಳ್ಳಿ ರಂಗರಾಜು, ನಾಗೇಶ್, ರಮೇಶ್, ಕುಮಾರ್ ಇನ್ನು ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link