ತುಮಕೂರು
ದೇಶದ ಕೃಷಿ ಬಿಕ್ಕಟ್ಟನ್ನು ಸಮಗ್ರವಾಗಿ ನಿವಾರಿಸಲು ದೇಶದ ಸುಮಾರು 200ಕ್ಕೂ ಹೆಚ್ಚು ರೈತ ಸಂಘಟನೆಗಳು ಒಳಗೊಂಡ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವ ಸಮಿತಿ ಸಿದ್ದಪಡಿಸಿರುವ ರೈತರ ಪ್ರನಾಳಿಕೆಯ ಅಂಶಗಳು ಪ್ರತಿ ರೈತರ ಮನೆಯಲ್ಲೂ ಚರ್ಚೆ ಆಗಬೇಕು, ಪ್ರನಾಳಿಕೆಯ ಬೇಡಿಕೆಗಳು ಈ ಬಾರಿಯ ಲೋಕಸಭಾ ಚುನಾವಣೆಯ ವಿಷಯವಾಗಬೇಕು, ಪ್ರನಾಳಿಕೆಯ ಬೇಡಿಕೆ ಬೆಂಬಲಿಸುವವರನ್ನು ಬೆಂಬಲಿಸಿ, ವಿರೋಧಿಸುವವರನ್ನು ಮನೆಗೆ ಕಳುಹಿಸಲು ರೈತರು ಜಾಗೃತರಾಗಬೇಕು ಎಂದು ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಜಿ ಸಿ ಬೈಯ್ಯಾರೆಡ್ಡಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸಮಿತಿಯ ಜಿಲ್ಲಾ ಘಟಕ ಏರ್ಪಡಿಸಿದ್ದ ಭಾರತೀಯ ರೈತರ ಪ್ರನಾಳಿಕೆ ಬಿಡುಗಡೆ ಮಾಡಿ, ಪ್ರನಾಳಿಕೆ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿದ ಅವರು, ದೇಶದಲ್ಲಿ ಬದಲಾವಣೆ ಆಗಬೇಕಾಗಿರುವುದು ಸರ್ಕಾರ ನಡೆಸುವ ನಾಯಕರಲ್ಲ, ಸರ್ಕಾರದ ನೀತಿ, ಧೋರಣೆಗಳು ಬದಲಾಗಬೇಕು, ದುಡಿಯುವ ಜನರ ಪರವಾದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕು ಎಂದರು.
ಬರುವ ಲೋಕಸಭಾ ಚುನಾವಣೆಯಲ್ಲಿ ರೈತರು, ಕೃಷಿ ಕಾರ್ಮಿಕರ ಬೇಡಿಕೆಗಳು ಚರ್ಚೆ ಆಗಬೇಕು, ರೈತರ ಪ್ರನಾಳಿಕೆಯ ಅಂಶಗಳು ಜಾರಿಯಾಗಬೇಕು. ಹೀಗಾಗಿ ಪ್ರತಿ ರೈತರಲ್ಲಿ ಪ್ರನಾಳಿಕೆ ವಷಯಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕು ಇದಕ್ಕಾಗಿ ಎಲ್ಲಾ ಹೋಬಳಿ, ಗ್ರಾಮಗಳಲ್ಲಿ ಸಭೆ ನಡೆಸಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಗತ್ತಿ ಅತಿ ಶ್ರೀಮಂತರಲ್ಲಿ ಈ ದೇಶದ ಮುಕೇಶ್ ಅಂಬಾನಿ ಮೊದಗಲಿರು, ಒಂದೇ ವರ್ಷದಲ್ಲಿ ಅವರ ಆದಾಯ ಒಂದು ಲಕ್ಷ, ಮೂರು ಸಾವಿರ ಕೋಟಿ ರೂ ಹೆಚ್ಚಾಗಿದೆ. ದೇಶದ ಶೇಕಡ 60ರಷ್ಟು ಜನರ ಆಸ್ತಿ ಶೇಕಡ 1ರಷ್ಟು ಜನರ ಕೈಯಲ್ಲಿದೆ. ಬಹುಸಂಖ್ಯಾತ ದುಡಿಯವ ಜನರ ಶ್ರಮವನ್ನು, ಶ್ರಮದ ವಾಸನೆಯೇ ಗೊತ್ತಿಲ್ಲದವರು ಲೂಟಿ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಹಿಗಾಗಿ ನಮ್ಮ ಒಂದು ದೇಶ ಎರಡು ದೇಶವಾಗಿದೆ, ಒಂದು ಎಪಿಎಲ್ ದೇಶ, ಇನ್ನೊಂದು ಬಿಪಿಎಲ್ ದೇಶ. ದುಡಿಯುವವರು ದಿವಾಳಿಯಾಗುತ್ತಲೇ ಇದ್ದಾರೆ ಎಂದು ಜಿ ಸಿ ಬೈಯ್ಯಾರೆಡ್ಡಿ ಹೇಳಿದರು.
ನಮ್ಮದು ಹಳ್ಳಿಗಳ ದೇಶ, ಹಳ್ಳಿಗಳು ಉದ್ದಾರವಾಗದೆ ದೇಶ ಉದ್ದಾರವಾಗಲು ಸಾಧ್ಯವಿಲ್ಲ. ಜಾಗತಿಕ, ಆರ್ಥಿಕ, ಉದಾರೀಕರಣ ನೀತಿಗಳು ನಮ್ಮ ಕೃಷಿಯನ್ನು ನಾಶ ಮಾಡುತ್ತಿವೆ. ಕೃಷಿ ನಾಶವಾಗಿ, ರೈತರು ಆತ್ಮಹತ್ಯೆಗೆ ಕಾರಣವಾಗಿರುವ ಆರ್ಥಿಕ ನೀತಿಗಳನ್ನು ಕೇಂದ್ರ ಸರ್ಕಾರ ಮುಂದುವರೆಸುತ್ತಿದೆ. ಎನ್‍ಡಿಎ ಸರ್ಕಾರದ ಮಂತ್ರಿ ಪಿಯೂಷ್ ಗೋಯಲ್ ಅವರು, ಮುಕ್ತ ಆರ್ಥಿಕ ನೀತಿ ಪರವಾಗಿ ಕೆಲಸ ಮಾಡುವ ಬದ್ದತೆ ಬಗ್ಗೆ ಮೊನ್ನೆ ಬಜೆಟ್ ಮಂಡನೆ ವೇಳೆ ವ್ಯಕ್ತಪಡಿಸಿದ ಅಭಿಪ್ರಾಯ ಬೇವಿನ ಬೀಜ ಹಾಕಿದರೆ ಮಾವು ಬೆಳೆಯುವುದಿಲ್ಲ ಎಂಬುದನ್ನು ಸಾಬೀತುಪಡಿಸಿದಂತಾಗಿದೆ ಎಂದು ಟೀಕಿಸಿದರು.
ಜಾಗತೀಕ, ಆರ್ಥಿಕ ಉದಾರೀಕರಣ ನೀತಿಗಳಿಂದ ಹೊರ ಬಂದರೆ ಮಾತ್ರ ಪರ್ಯಾಯವಾಗಿ ರೈತರ ಪರವಾದ ಸಮಗ್ರ ಯೋಜನೆ ಜಾರಿಯಾಗಲು ಸಾಧ್ಯ, ಆ ಮೂಲಕ ರೈತರು, ರೈತ ಕಾರ್ಮಿಕರು, ಹಳ್ಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೈಯ್ಯಾರೆಡ್ಡಿ ಹೇಳಿದರು.
ಸಣ್ಣ ರೈತರಿಗೆ ವರ್ಷಕ್ಕೆ ಆರು ಸಾವಿರ ರೂ ನೀಡುವುದಾಗಿ ಬಿಜೆಪಿ ಸರ್ಕಾರ ಬಜೆಟ್‍ನಲ್ಲಿ ಹೇಳಿದೆ, ಒಬ್ಬ ರೈತನಿಗೆ ದಿನಕ್ಕೆ 17 ರೂ ನೀಡಿಬಿಟ್ಟರೆ ಅವರ ಉದ್ದಾರ ಆಗಿಬಿಡುತ್ತದೆಯೇ, ಹಣ ಬಿಸಾಕಿದರೆ ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂಬಂತೆ ಬಿಜೆಪಿಯವರು ರೈತರನ್ನು ಅಪಹಾಸ್ಯ ಮಾಡಿದ್ದಾರೆ. ಆದರೆ ರೈತರ, ಕೃಷಿಯ ಸಮಗ್ರ ಅಭಿವೃದ್ದ ಬಗ್ಗೆ ಈ ಸರ್ಕಾರಕ್ಕೆ ಚಿಂತನೆಯಿಲ್ಲ ಎಂದರು.
ಸಮಿತಿಯ ಜಿಲ್ಲಾ ಸಂಚಾಲಕ ಸಿ ಯತಿರಾಜು ಪ್ರಾಸ್ತಾವಿ ನುಡಿಯಲ್ಲಿ, ಸ್ವಾಮಿನಾಥನ್ ವರದಿ ಜಾರಿಗೆ ತಂದು ಹಾಗೂ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಎನ್‍ಡಿಎ ಸರ್ಕಾರ, ಭರವಸೆ ಮರತೇಬಿಟ್ಟಿತು, ಕೃಷಿ ವೆಚ್ಚದ ಶೆಕಡ 50ರಷ್ಟು ಬೆಂಬಲ ಬೆಲೆ ನಿಗಧಿ ಮಾಡಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿ ರೈತರಿಗೆ ಸರ್ಕಾರ ಮಹಾ ದ್ರೋಹ ಮಾಡಿತು ಎಂದರು.
ದೇಶದ ರೈತರ ಸಂಕಷ್ಟ ಹಾಗೂ ಅದರ ಸಮಗ್ರ ಪರಿಹಾರಕ್ಕಾಗಿ 200ಕ್ಕೂ ಹೆಚ್ಚು ರೈತಪರ ಸಂಘಟನೆಗಳು ಒಳಗೊಂಡ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ವಿವಿಧ ಹಂತದ ಹೋರಾಟ ನಡೆಸಿ, ದೆಹಲಿಯಲ್ಲಿ ರೈತರ ಸಂಸತ್ ನಡೆಸಿತು. ಆ ವೇಳೆ ಲೋಕಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿತ್ತು, ಅಲ್ಲಿ ಅವಿಶ್ವಾಸ ಬಿದ್ದು ಹೋಯಿತು, ಆದರೆ ರೈತರ ಸಂಸತ್ತು ಸರ್ಕಾರದ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿತು. ಆವೇಳೆ ರೈತ ಸಂಘಟನೆಗಳು ರೈತರ ಬೇಡಿಕೆಗಳ ಪ್ರನಾಳಿಕೆ ಸಿದ್ಧಪಡಿಸಿ, ಜಾರಿಗೆ ಒತ್ತಾಯಿಸಿದವು ಎಂದರು.
ಇವತ್ತಿನ ಕೃಷಿ ಬಿಕ್ಕಟ್ಟು, ರೈತರ ಸಮಸ್ಯೆಗಳು ಹಾಗೂ ಪರಿಹಾರ ಕಾರ್ಯಕ್ರಮ ರೂಪಿಸುವ ಈ ಪ್ರನಾಳಿಕೆ ರಾಜಕೀಯಕರಣವಾಗಬೇಕು, ಬರುವ ಲೋಕಸಭಾ ಚುನಾವಣೆಯ ಪ್ರಮುಖ ವಿಷಯವಾಗಬೇಕು, ಈ ಪ್ರನಾಳಿಕೆ ಆಂಶಗಳನ್ನ ಎಲ್ಲಾ ರೈತರಿಗೆ ತಿಳಿಸಿ, ಬೇಡಿಕೆ ಈಡೇರಿಸುವವರನ್ನು ಚುನಾವಣೆಯಲ್ಲಿ ಬೆಂಬಲಿಸುವ ಜಾಗೃತಿ ಮೂಡಿಸಬೇಕು. ರೈತರಿಗೆ ದ್ರೋಹ ಮಾಡಿದವರನ್ನು ತಿರಸ್ಕರಿಸುತ್ತೇವೆ ಎಂಬ ಸ್ಪಷ್ಟ ಸಂದೇಶ ಕೊಡಬೇಕು ಎಂದು ಸಿ ಯತಿರಾಜು ರೈತ ಮುಖಂಡರಿಗೆ ತಿಳಿಸಿದರು.
ಹಳ್ಳಿಹಳ್ಳಿಯಲ್ಲಿ ರೈತರ ಸಭೆ, ಸಮಾವೇಶ ಮಾಡಬೇಕು, ಪ್ರನಾಳಿಕೆಯ ಅಂಶಗಳನ್ನು ರೈತರಿಗೆ ಮನದಟ್ಟು ಮಾಡಿ, ಸುಳ್ಳು ಭರವಸೆ ನೀಡುವವರಿಗೆ ಎಚ್ಚರಿಕೆ ಕೊಡಬೇಕು ಎಂದು ಕರೆ ನೀಡಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ ಗೋವಿಂದರಾಜು, ಮುಖಂಡರಾದ ಬಿ ಉಮೇಶ್, ದೇವರಾಜು, ನಾಗರತ್ನಮ್ಮ, ಅಜ್ಜಪ್ಪ ಮೊದಲಾದವರು ಭಾಗವಹಿಸಿದ್ದರು.