4ನೇ ದಿನಕ್ಕೆ ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ

ತುಮಕೂರು

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಕಳೆದ ಗುರುವಾರದಿಂದ ಆರಂಭಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಅಹೋರಾತ್ರಿ ಧರಣಿ ಸತ್ಯಾಗ್ರಹ ನಾಲ್ಕನೆ ದಿನದಲ್ಲಿ ಭಾನುವಾರವೂ ಮುಂದುವರೆಯಿತು.

     ಮಧುಗಿರಿ ತಾಲ್ಲೂಕಿನಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರಿಗೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಸಮಿತಿ ಹೋರಾಟಗಾರರು ಆರಂಭಿಸಿದ್ದ ಅಹೋರಾತ್ರಿ ಧರಣಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯ ವರು ಬೆಂಬಲಿಸಿ ಮೊದಲ ದಿನ ಪಾಲ್ಗೊಂಡಿದ್ದರು.

     ತಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಧರಣಿ ಹಿಂಪಡೆಯಿರಿ ಎಂದು ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ವಿನಂತಿ ಮಾಡಿಕೊಂಡಿದ್ದರೂ ಒಪ್ಪದ ಹೋರಾಟಗಾರರು ಧರಣಿ ಮುಂದುವರೆಸಿದ್ದಾರೆ. ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಥಳಕ್ಕೆ ಆಗಮಿಸಿ ಜಿಲ್ಲೆಯ ಭೂಮಿ ಮತ್ತು ವಸತಿ ರಹಿತರ ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖಿತವಾಗಿ ಭರವಸೆ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ.

    ಮಧುಗಿರಿ ತಾಲ್ಲೂಕು ಬ್ಯಾಲ್ಯ ಸೇರಿದಂತೆ ಜಿಲ್ಲೆಯ ಬಡ ಜನರಿಗೆ ಭೂಮಿ ಮತ್ತು ವಸತಿ ನೀಡುವ ಬಗ್ಗೆ ಸುಮಾರು 30-40 ವರ್ಷಗಳಿಂದ ಆಯಾ ತಾಲ್ಲೂಕು ಆಡಳಿತ, ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರೂ, ಆಡಳಿತವರ್ಗ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಹೋರಾಟಗಾರರು ಆರೋಪಿಸಿದರು.

    ಕಳೆದ ಫೆಬ್ರುವರಿ ತಿಂಗಳಲ್ಲಿ ಹೋರಾಟ ಸಮಿತಿ ಮಧುಗಿರಿ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದಾಗ ಮಧ್ಯ ಪ್ರವೇಶಿಸಿದ್ದ ಜಿಲ್ಲಾಧಿಕಾರಿಗಳು ಆರು ತಿಂಗಳೊಳಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದ್ದರು. ಈ ಮಧ್ಯೆ, ಹಿಂದಿನ ಸರ್ಕಾರ 8 ಐಎಎಸ್ ಅಧಿಕಾರಿಗಳುಳ್ಳ ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಈ ಸಮಿತಿ 3 ಸಭೆಗಳನ್ನು ನಡೆಸಿ, ತುರ್ತಾಗಿ ಭೂಮಿ ಮತ್ತು ವಸತಿ ಸಮಸ್ಯೆಗಳನ್ನು ಬಗೆಹರಿಸಲು ತುಮಕೂರು ಜಿಲ್ಲಾಧಿಕಾರಿಗಳೂ ಸೇರಿದಂತೆ ಎಲ್ಲಾ ಡಿಸಿಗಳಿಗೂ ನಿರ್ದೇಶಿಸಿದ್ದರು ಎಂದು ಹೇಳಿದರು.

    ಆದರೆ ತುಮಕೂರು ಜಿಲ್ಲೆಯಲ್ಲಿ ಈ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆದಿಲ್ಲ. ಬ್ಯಾಲ್ಯ ಗ್ರಾಮದ ಬಡ ಜನ ಅದೇ ಗ್ರಾಮದ ಸರ್ಕಾರಿ ಕರಾಬು ಜಮೀನಿನಲ್ಲಿ ಸುಮಾರು ನಾಲ್ಕು ತಿಂಗಳಿನಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಹಕ್ಕು ಪತ್ರ ನೀಡಿಲ್ಲ ಎಂದು ಆಪಾದಿಸಿದರು. ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದಶಿ ಸ್ಥಳಕ್ಕೆ ಆಗಮಿಸಿ ಜಿಲ್ಲೆಯ ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖಿತವಾಗಿ ಭರಸವಸೆ ನೀಡುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಹೋರಾಟ ಮುಂದುವರೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ