ಹುಳಿಯಾರು:
ಮದುವೆ ಮನೆಯಲ್ಲಿ ರೈತರನ್ನು ಆಹ್ವಾನಿಸಿ, ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ.ನಂಜುಂಡಸ್ವಾಮಿ ಅವರ ಪೋಟೊಗೆ ಪೂಜೆ ಸಲ್ಲಿಸಿ ವಧುವಿನಿಂದ ಸಸಿ ನೆಡಿಸಿ, ರೈತರ ಕಷ್ಟಕಾರ್ಪಣ್ಯಗಳನ್ನು ಚರ್ಚಿಸುವ ಮೂಲಕ ಹುಳಿಯಾರಿನಲ್ಲಿ ವಿಭಿನ್ನವಾಗಿ ಭಾನುವಾರ ರೈತರ ದಿನಾಚರಣೆ ಆಚರಿಸಲಾಯಿತು.
ಹುಳಿಯಾರಿನ ಅನ್ನದಾನರಂಗ ಬಸ್ ಮಾಲೀಕರಾದ ಎಚ್.ಎ.ರಂಗನಾಥ ಪ್ರಸಾದ್ ಮತ್ತು ಜ್ಯೋತಿ ಅವರ ಪುತ್ರಿ ಎಚ್.ಆರ್.ಕಾವ್ಯ ಅವರ ವಿವಾಹವನ್ನು ಹುಳಿಯಾರಿನವರೆ ಆದ ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಎಂ.ಎ.ಲೋಕೇಶ್ ಮತ್ತು ಎಸ್.ಗಿರಿಜಾ ಅವರ ಪುತ್ರ ಎಚ್.ಎಲ್.ಶ್ರೀವತ್ಸ ಅವರ ಜೊತೆ ಇಲ್ಲಿನ ಕೋಡಿಪಾಳ್ಯದ ಸೇವಾಲಾಲ್ ಸಾಂಸ್ಕತಿಕ ಸದನದಲ್ಲಿ ಡಿ.23 ಮತ್ತು ಡಿ.24 ರಂದು ಏರ್ಪಡಿಸಲಾಗಿತ್ತು.
ವಧು ಮತ್ತು ವರ ಇಬ್ಬರ ತಂದೆಯವರೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು. ಸಮಾಜಮುಖಿ ಚಿಂತನೆಯೊಂದಿಗೆ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರು. ಹಾಗಾಗಿ ಡಿ.23 ಅಂತರಾಷ್ಟ್ರೀಯ ರೈತರ ದಿನಾಚರಣೆ ಅದೇ ದಿನ ತಮ್ಮ ಮಗಳ ಆರತಕ್ಷತೆ. ಮದುವೆಗಾಗಿ ದೂರದೂರುಗಳಿಂದ ನೆಂಟರಿಷ್ಟರು ಬಮದಿರುತ್ತಾರೆ. ಆರತಕ್ಷತೆ ನಡೆಯುವುದು ಸಂಜೆ. ಅಲ್ಲಿಯವರೆವಿಗೂ ವ್ಯರ್ಥ ಕಾಲಾಹರಣ ಮಾಡುವ ಬದಲು ರೈತರನ್ನೆಲ್ಲಾ ಆಹ್ವಾನಿಸಿ, ಅವರಿಗೆ ಗೌರವ ಸಲಿಸಿ ರೈತರ ದಿನಾಚರಣೆ ಮಾಡಿಯೇ ಬಿಡೋಣ ಎಂದು ನಿರ್ಧರಿಸಿ ಅಪರೂಪದ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.
ಸರಿಸುಮಾರು ಇಪ್ಪತ್ತಕ್ಕೂ ಹೆಚ್ಚು ತಮ್ಮ ಆತ್ಮೀಯ ರೈತರನ್ನು ಬರಮಾಡಿಕೊಂಡು, ಮದುವೆಗೆ ಆಗಮಿಸಿದ್ದ ನೆಂಟರಿಷ್ಟರನ್ನು ಒಟ್ಟಿಗೆ ಸೇರಿಸಿ ಪ್ರೊ.ನಂಜುಂಡಸ್ವಾಮಿ ಅವರ ಬಾವ ಚಿತ್ರಕ್ಕೆ ಪೂಜೆ ಸಲ್ಲಿಸಿ, ವಧು ಕಾವ್ಯಶ್ರೀ ಅವರಿಂದ ಕಾರ್ಯಕ್ರಮದ ನೆನಪಾರ್ಥ ಕಲ್ಯಾಣ ಮಂಟಪದ ಆವರಣದಲ್ಲಿ ತೆಂಗಿನ ಸಸಿ ನೆಡಿಸಿ ರೈತರ ಕಷ್ಟಕಾರ್ಪಣ್ಯಗಳು, ಸರ್ಕಾರದ ನಿರ್ಲಕ್ಷ್ಯ ಧೋರಣೆ, ರೈತರ ಒಗ್ಗಟ್ಟು, ಹೋರಾಟ ಹೀಗೆ ರೈತರ ಕಲ್ಯಾಣಕ್ಕಾಗಿ ವಿವಿದ ಮಜಲುಗಳನ್ನು ಅಲ್ಲಿ ಚರ್ಚಿಸಲಾಯಿತು. ಅಲ್ಲದೆ ರೈತರೊಂದಿಗೆ ಎಲ್ಲರೂ ಒಟ್ಟಿಗೆ ಕುಳಿತು ಸಹ ಬೋಜನ ಸಹ ಮಾಡಿ ಮದುವೆ ಕಾರ್ಯದ ದಿನ ಚಿರಸ್ಥಾಯಿಯಾಗಿ ಉಳಿಯುವಂತೆ ಪರಿವರ್ತಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಅವರು ಮಾತನಾಡಿ ದೇಶಕ್ಕೆ ಅನ್ನ ಕೊಡುವ ರೈತರ ಸಮಸ್ಯೆಗಳನ್ನು ರಾಜಕಾರಣಿಗಳು ತಮ್ಮ ರಾಜಕೀಯ ದಾಳವಾಗಿ ಬಳಸುತ್ತಿದ್ದಾರೆ. ಸಾಲಮನ್ನ, ನೀರಾವರಿ ಸೌಲಭ್ಯ, ವೈಜ್ಞಾನಿಕ ಬೆಲೆ ಈ ಬಗ್ಗೆ ಎಂದೂ ಯಾವ ಸರ್ಕಾರಗಳಿದ್ದರೂ ಒಮ್ಮತದ ನಿರ್ಧಾರಕ್ಕೆ ಬಾರದೆ ಚುನಾವಣಾ ಭಾಷಣಕ್ಕೆ ತಮ್ಮ ಸಂಕಷ್ಟಗಳು ವಿಷಯವಾಗುತ್ತಿವೆ. ಇನ್ನಾದರೂ ಈ ನಾಟಕಗಳನ್ನು ಬಿಟ್ಟು ರೈತರ ಸಂಪೂರ್ಣ ಸಾಲ ಮನ್ನ ಮಾಡಿ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಲಿ ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಮಹಿಳಾ ರೈತ ಸಂಘದ ಅಧ್ಯಕ್ಷೆ ಶಿವರಂಜಿನಿ ಅವರು ಮಾತನಾಡಿ ಅಧಿಕಾರಕ್ಕೆ ಬರುವ ರಾಜಕಾರಣಿಗಳೆಲ್ಲರೂ ನಾವು ರೈತರ ಮಕ್ಕಳೆನ್ನುತ್ತಾರೆ. ಆದರೆ ಸಂವಿದಾನಾತ್ಮಕವಾಗಿ ರೈತನು ತಮ್ಮ ಪಾಲಿನ ಹಕ್ಕಿಗಾಗಿ ಹೋರಾಡಿದರೆ ಗುಂಡಿಕ್ಕಿ ಕೊಲ್ಲುತ್ತಾರೆ, ಲಾಠಿ ಚಾರ್ಚ್ ಮಾಡಿಸುತ್ತಾರೆ. ರೈತನ ಸಂಕಷ್ಟಗಳಿಗೆ ಸ್ಪಂಧಿಸದೆ ಆತ್ಮಹತ್ಯೆಗೆ ದಾರಿ ಮಾಡಿಕೊಡುತ್ತಾರೆ. ಇದನ್ನು ರೈತರು ಅರ್ಥ ಮಾಡಿಕೊಂಡು ರಾಜಕಾರಣಿಗಳ ಹಿಂದಿಂದೆ ಹೋಗೋದು ಬಿಟ್ಟು ರೈತ ಸಂಘದ ಅಡಿಯಲ್ಲಿ ಸಂಘಟಿತರಾಗಿ ಹೋರಾಟ ರೂಪಿಸಿದರೆ ಗೆಲುವು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಬ್ಯಾಂಕ್ ಸತೀಶ್, ಜಯಶ್ರೀ ಸತೀಶ್, ಡಿ.ಆರ್.ನರೇಂದ್ರಬಾಬು, ನಾಗಲಕ್ಷ್ಮೀ ನರೇಂದ್ರಬಾಬು, ಗ್ರಾಹಕರ ವೇದಿಕೆಯ ಕಾರ್ಗಿಲ್ ಸತೀಶ್, ಎಸ್‍ಎಲ್‍ಆರ್ ಬಸ್ ಮಾಲೀಕ ದೀಪು, ಸಮಾಜ ಸೇವಕ ಕೆ.ಎನ್.ಉಮೇಶ್, ಮಂಡ್ಯ ನಾಗೇಶ್, ರೈತ ಸಂಘದ ಕಾಡಿನರಾಜ ನಾಗಣ್ಣ, ಕಂಪನಹಳ್ಳಿ ಮರುಳಪ್ಪ, ಸೀಗೆಬಾಗಿ ಲೋಕಣ್ಣ, ಪ್ರಕಾಶ್, ಯೋಗಣ್ಣ, ದಾಸಪ್ಪ, ಜಯಣ್ಣ, ಹರ್ಷ, ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ