ಎಪಿಎಂಸಿ ವರ್ತಕರ ವರ್ತನೆಗೆ ಬೇಸತ್ತ ತಾಲ್ಲೂಕಿನ ರೈತರು..!

 ಪಾವಗಡ

ವಿಶೇಷ ವರದಿ:ಎಚ್.ರಾಮಾಂಜಿನಪ್ಪ

    ತಾಲ್ಲೂಕು ಬರಪೀಡಿತ ಪ್ರದೇಶ ಎಂಬುದು ರಾಜ್ಯಕ್ಕೆ ಗೊತ್ತಿರುವ ವಿಚಾರ. ಸುಮಾರು 20 ವರ್ಷಗಳಿಂದ ಮಳೆ ಬೆಳೆ ಇಲ್ಲದೆ ಇಲ್ಲಿನ ಅನ್ನದಾತರು ಕಂಗಾಲಾಗಿದ್ದಾರೆ. ರೈತರು ವರ್ಷದಲ್ಲಿ ಅಲ್ಪ ಸ್ವಲ್ಪ ಬೆಳೆಯನ್ನು ಕೃಷಿ ಉತ್ಪನ್ನ ಮಾರು ಕಟ್ಟೆಗೆ ತಂದರೆ, ವರ್ತಕರ ವರ್ತನೆಯಿಂದ ರೈತರು ಮಾರುಕಟ್ಟೆಗೆ ಬರಲು ಹಿಂದೆ ಮುಂದೆ ನೋಡುವಂತಾಗಿದೆ.

    ಮಾರುಕಟ್ಟೆಗೆ ರೈತರು ತಂದ ಬೆಳೆಗೆ ಬಹಿರಂಗ ಹರಾಜು ಇಲ್ಲದ ಕಾರಣ ವರ್ತಕರು ಹೇಳಿದ ಬೆಲೆಯೆ ಅಂತಿಮ ಎಂಬಂತೆ ವರ್ತನೆ ಮಾಡುತ್ತಿದ್ದಾರೆ. ಅದೇ ಬೆಲೆಗೆ ಕೊಟ್ಟರೂ ಸಹ ವಿವಿಧ ಹಂತದಲ್ಲಿ ಮೋಸ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಕಣ್ಣಿದ್ದು ಕುರುಡರಂತೆ ವರ್ತನೆ ಮಾಡುತ್ತಿದ್ದಾರೆ.

      ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ 13 ಸದಸ್ಯರು ಇದ್ದಾರೆ. ಕಚೆರಿ ಯಲ್ಲಿ 13 ಸಿಬ್ಬಂದಿ ಇರಬೇಕಾಗಿತ್ತು. ಕಾರ್ಯದರ್ಶಿಗಳ ಹುದ್ದೆ ಸೇರಿ, 12 ಹುದ್ದೆಗಳು ಖಾಲಿ ಇವೆ. ಕಚೆರಿಯ ಎಲ್ಲ ಕೆಲಸಗಳನ್ನು ಲೆಕ್ಕಿಗರು ಮಾತ್ರ ನಿರ್ವಹಿಸ ಬೇಕಾಗಿದೆ. ಸಮಿತಿಯ ಅಧ್ಯಕ್ಷರು ಮತ್ತು ಸಮಿತಿಯವರು ನೌಕಕರ ಬಗ್ಗೆ ಗಮನ ಹರಿಸದ ಕಾರಣ ಸಮಿತಿಗೆ ಮತ್ತು ರೈತರಿಗೆ ನಷ್ಟವುಂಟು ಮಾಡುತ್ತಿದ್ದಾರೆ ಎಂದು ರೈತ ಸಂಘದ ಪದಾಧಿಕಾರಿಗಳು ಆರೋಪಿಸಿದ್ದಾರೆ.

      ಪಾವಗಡ ಕೃಷಿ ಉತ್ಪನ್ನ ಮಾರುಕಟೆ ಸಮಿತಿಯಲ್ಲಿ 66 ಗೋಡೌನ್‍ಗಳು ಇದ್ದು, ಇದರಲ್ಲಿ 29 ಗೋಡೌನ್‍ಗಳು ಖಾಲಿ ಇವೆ ಎಂಬ ಮಾಹಿತಿ ಇದೆ. 37 ಗೋಡೌನ್ ಅಂಗಡಿಗಳು ಮಾತ್ರ ಬಾಡಿಗೆ ನೀಡಿದ್ದೇವೆ. ಪ್ರತಿ ತಿಂಗಳು 30 ಸಾವಿರ ರೂ. ಬಾಡಿಗೆ ಬರುತ್ತಿದೆ ಎಂದು ತಿಳಿದು ಬಂದಿದೆ. ಖಾಲಿ ಇರುವ ಕೆಲವು ರೂಂಗಳು ರಾಜಕೀಯ ಮುಖಂಡರ ಒತ್ತಾಯದ ಮೇರೆಗೆ ಉಚಿತವಾಗಿ ಕೆಲವರಿಗೆ ರೂಂಗಳು ನೀಡಿರುವ ಮಾಹಿತಿ ಇದೆ.

      ಇದರ ಜೊತೆಗೆ ಅಧಿಕಾರಿಗಳು ಶಾಮೀಲಾಗಿ ಸಮಿತಿಗೂ ತಿಳಿಯದೆ ಕೆಲವು ಗೋಡೌನ್‍ಗಳನ್ನು ಬಾಡಿಗೆಗೆ ನೀಡಿ, ತಿಂದು ತೇಗುತ್ತಿದ್ದಾರೆ. ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ಸಮಿತಿ ಏನು ಮಾಡುತ್ತಿದೆ ಎಂದು ರೈತ ಮುಖಂಡರು ಪ್ರಶ್ನಿಸುತ್ತಿದ್ದಾರೆ.
ರೈತರು ಮಾರು ಕಟ್ಟೆಗೆ ಉತ್ಪನ್ನಗಳನ್ನು ತಂದರೆ ತೂಕ ಮಾಡಿದ ನಂತರ ಬಿಳಿ ಚೀಟಿಯಲ್ಲಿ ಬಿಲ್ ಹಾಕಿದ್ದರೂ, ರೈತರಿಂದ ಆರ್.ಎಂ.ಸಿ ಎಂದು 100 ಗೆ 1 ರಂತೆ, ಚೀಲಕ್ಕೆ 2.5 ಕೆ.ಜಿ ಕಡಿತ ಗೊಳಿಸಿ, ರೈತರನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ವರ್ತಕರಿಂದ ರೈತ ಕೊಂಡರೆ ಇವರಿಗೆ ಆರ್.ಎಂ.ಸಿ ನೀಡದೆ ಚೀಲದ 2.5 ಕೆಜಿ ಕಡಿತ ಗೊಳಿಸುವುದಿಲ್ಲ.

    ಇದು ಯಾವ ನ್ಯಾಯ ಎಂದು ರೈತರು ಪ್ರಶ್ನಿಸಿದ್ದಾರೆ. ಪಾವಗಡ ಪಟ್ಟಣದಲ್ಲಿ ಪ್ರತಿ ಸೋಮವಾರ ಮಾರುಕಟ್ಟೆಯಲ್ಲಿ ಕುರಿ ಸಂತೆ, ತರಕಾರಿ, ರೈತರ ಮಾರುಕಟ್ಟೆ ನಡೆಯುತ್ತಿದೆ. ತಾಲ್ಲೂಕು ಆಂಧ್ರದ ಗಡಿ ಭಾಗದಲ್ಲಿ ಇರುವುದರಿಂದ ಸೋಮವಾರದ ಕುರಿಸಂತೆಗೆ ಆಂಧ್ರ ಪ್ರದೇಶದಿಂದ ಧರ್ಮಾವರಂ, ಅನಂತಪುರಂ, ಕಂಬದೂರು, ಕಲ್ಯಾಣದುರ್ಗ, ರೊದ್ದಂ, ಪೆನುಕೊಂಡ, ಕೊತ್ತಚೆರುವು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಕುರಿ, ಮೇಕೆ, ನಾಟಿ ಕೋಳಿ ವಾಹನಗಳ ಸುಂಕ ವಸೂಲಾತಿಯಲ್ಲಿ ಪ್ರತಿ ಸೋಮವಾರ 10 ಸಾವಿರಕ್ಕೂ ಹೆಚ್ಚಿಗೆ ವಸೂಲಿ ಆಗುತ್ತಿದೆ.

   ವಸೂಲಿದಾರರು ಮಾರುಕಟ್ಟೆ ಸಮಿತಿಗೆ 2500 ರಿಂದ 3000 ಸಾವಿರ ರೂ.ಗಳನ್ನು ಮಾತ್ರ ತೋರಿಸಿ, ಇನ್ನು ಉಳಿದ ಹಣವನ್ನು ಗುಳುಂ ಮಾಡುತ್ತಿದ್ದಾರೆ. ಆದರೂ ಮಾರಾಟಗಾರರಿಗೆ ರಸೀದಿ ಸಹ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಮಾರುಕಟ್ಟೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇಲ್ಲಿನ

ಅವ್ಯವಹಾರವನ್ನು ತನಿಖೆಗೆ ಒಳಪಡಿಸಿದರೆ ಎಲ್ಲವೂ ಬಟಾ ಬಯಲಾಗುವುದಂತೂ ಖಚಿತ!

    ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 2013-14 ನೇ ಸಾಲಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 500 ಎಂ.ಟಿ ಸಾಮಥ್ರ್ಯದ ಗೋದಾಮು ನಿರ್ಮಾಣ, ಇದೇ ಸಾಲಿನಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ 100 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ನಿರ್ಮಾಣ ಮಾಡಲಾಗಿದೆ. ಆದರೂ ಯಾವುದೇ ತರಹದಲ್ಲಿ ರೈತರಿಗೆ ಅನುಕೂಲವಾಗಿಲ್ಲ. ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೆ ಆಡಳಿತಾಧಿಕಾರಿಗಳು ರೈತರಿಗೆ ಏನೇನೂ ಅನುಕೂಲ ಮಾಡುತ್ತಿಲ್ಲ. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಏನು ಮಾಡುತ್ತಿದ್ದಾರೆ ಎಂದು ರೈತರು ಆಗ್ರಹಿಸಿದ್ದಾರೆ.

    ಪಾವಗಡ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಬೆಲೆ ಕುಸಿದಾಗ ಬೆಳೆಯನ್ನು ಶೇಖರಣೆ ಮಾಡಲು ಸ್ಟೋರೇಜ್ ಸಂಕೀರ್ಣವನ್ನು ಕಟ್ಟಿಸಿ ರೈತರಿಗೆ ಅನುಕೂಲ ಮಾಡಬೇಕಾಗಿದೆ ಎಂದು ಹಲವು ವರ್ಷಗಳಿಂದ ಬೇಡಿಕೆ ಇದ್ದರೂ ಸಹ ಸಮಿತಿಯ ಪದಾಧಿಕಾರಿಗಳು ಮಾತ್ರ ಮೌನವಹಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

     ಇದೀಗ ರೈತರ ಬೆಳೆ ಕಟಾವು ಸಮಯವಾಗಿದ್ದು, ಬೆಳೆದ ಬೆಳೆಗೆ ನಿಗದಿತ ಬೆಲೆ ಬರುವಂತೆ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಗಮನಿಸಬೇಕು. ವರ್ತಕರು ರೈತರಿಗೆ ಮೋಸ ಮಾಡುವುದನ್ನು ನಿಲ್ಲ್ಲಿಸಬೇಕು. ರೈತರಿಗೆ ವರ್ತಕರು ಬಿಳಿ ಚೀಟಿಯಲ್ಲಿ ಪಟ್ಟಿ ಮಾಡುವುದು ನಿಲ್ಲಿಸಬೇಕು. ತೂಕದಲ್ಲಿ ಮೋಸ ಹಾಗೂ ಚೀಲಕ್ಕೆ 2.5 ಕೆ.ಜಿ. ಲಾಸ್ ಮಾಡುವುದನ್ನು ನಿಲ್ಲಿಸಬೇಕು. ಇವೆಲ್ಲಾ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದಂಧೆÉಗಳಾಗಿವೆ. ಎ.ಪಿ.ಎಂ.ಸಿ ಅಧಿಕಾರಿಗಳು ಮತ್ತು ಅಧ್ಯಕ್ಷ ಹಾಗೂ ಸದಸ್ಯರು ಜವಾಬ್ದಾರಿ ವಹಿಸಬೇಕು. ರೈತ ಮತ ಹಾಕಿ ಸಮಿತಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಿರುವ ಋಣವಾದರೂ ತೀರಿಸಬೇಕಾಗಿದೆ ಎಂದು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap