ಹುಳಿಯಾರು:
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಸೋಮವಾರ ಮತ್ತು ಮಂಗಳವಾರ ಉತ್ತರೆ ಮಳೆ ಕೃಪೆ ತೋರಿದ್ದು ರೈತಾಪಿಗಳ ಸಂತಸ ಹೆಚ್ಚಿಸಿದೆ.
ಮಳೆ ಬರುವ ಯಾವುದೇ ಮುನ್ಸೂಚನೆ ಇಲ್ಲದೆ ಸೋಮವಾರ ರಾತ್ರಿಯಿಡಿ ಬಿರುಸಿನ ಮಳೆ ಸುರಿಯಿತು. ಮಂಗಳವಾರ ಬೆಳಗಿನ ಜಾವದವರೆಗೂ ಎಡೆಬಿಡದೆ ಸುರಿದ ಮಳೆಯಿಂದ ಧಗೆಯ ವಾತಾವರಣದಿಂದ ಬಸವಳಿದಿದ್ದ ಜನಕ್ಕೆ ತಂಪೆರೆಯಿತು. ಪ್ರಸ್ತುತ ರಾಗಿಗೆ ಮಳೆ ಅತ್ಯಂತ ಅಗತ್ಯವಾಗಿತ್ತು. ಮಳೆಯಿಲ್ಲದೆ ತೇವಾಂಶ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಈ ಮಳೆಯಿಂದ ಬೆಳೆಗಳು ಹಸಿರಿನಿಂದ ನಳನಳಿಸುತ್ತಿದ್ದು ರೈತಾಪಿಗಳ ಮುಖದಲ್ಲಿ ಕಳೆ ಹೆಚ್ಚಿಸಿವೆ. ಕೊಳವೆ ಬಾವಿಯಲ್ಲಿನ ಅಲ್ಪ, ಸ್ವಲ್ಪ ನೀರೇ ಆಧಾರವಾಗಿದ್ದ ತೋಟಗಾರಿಕೆ ಬೆಳೆಗಳಿಗೂ ಈ ಮಳೆ ಸಹಕಾರಿಯಾಗಿದೆ.
ಮಳೆಯಿಂದ ಪಟ್ಟಣದ ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿದವು. ಅನೇಕ ತಿಂಗಳಿಂದ ಮಳೆಯನ್ನೇ ಕಾಣದ ಪಟ್ಟಣದಲ್ಲಿ ಸುರಿದ ಮಳೆಯಿಂದ ಗಲೀಜು ಕೊಚ್ಚಿಕೊಂಡು ಹೋಯಿತು. ದೂಳು ಸುರಿಯುತ್ತಿದ್ದ ರಸ್ತೆಗಳು ಸ್ವಚ್ಛವಾದವು.ಕೆಲ ತೋಟದಲ್ಲಿ, ಗುಂಡಿಗಳಲ್ಲಿ, ಕೃಷಿ ಹೊಂಡದಲ್ಲಿ ನೀರು ನಿಂತಿದ್ದು ಕೆರೆಗಳಿಗೂ ಸಹ ನೀರು ಬರಲಾರಂಭಿಸಿದೆ. ಮಳೆಯ ನಿರೀಕ್ಷೆಯಲ್ಲಿದ್ದ ಜನತೆಗೆ ಇಡೀ ದಿನ ಮೋಡ ಕವಿದ ವಾತಾವರಣದಿಂದ ಆಹ್ವಾದಕರವಾಗಿತ್ತು. ಮಳೆಯಿಂದ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ