ಬಿಬಿಎಂಪಿ ವಿರುದ್ಧ ರೈತರ ಪ್ರತಿಭಟನೆ

ಬೆಂಗಳೂರು

    ಬಿಡದಿಯ ಕೊಡಿಯಾಲ ಕರೇನಹಳ್ಳಿಯಲ್ಲಿ ನಗರದ ತ್ಯಾಜ್ಯ ಕಸ ವಿಲೇವಾರಿ ಮಾಡಲು ಬಿಬಿಎಂಪಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿ.ಡಿ.ಆರ್) ಹಕ್ಕು ಪಡೆಯಲು ಮುಂದಾಗಿರುವುದನ್ನು ಖಂಡಿಸಿ ರೈತ ಹಿತ ರಕ್ಷಣಾ ಸಮಿತಿಯ ಸದಸ್ಯರು ಹಾಗೂ ರೈತರು ಮಂಗಳವಾರ ಬಿಬಿಎಂಪಿ ಕೇಂದ್ರ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

     ಕೊಡಿಯಾಲ ಕರೇನಹಳ್ಳಿಯಲ್ಲಿ ಕಸ ಹಾಕುವುದರಿಂದ ರೈತರಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು ಅಲ್ಲದೇ ಈ ಗ್ರಾಮಗಳ ಸುತ್ತುಮುತ್ತಲಿನಲ್ಲಿ ಬೆಂಗಳೂರಿನ ಕೊಳಚೆ ನೀರು ಹರಿಯುವ ವೃಷಭಾವತಿ ನದಿಯು ಸಹ ಇರುವುದರಿಂದ ಪ್ರವಾಸಿಗರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಹೋರಾಟಗಾರರು ತಿಳಿಸಿದರು.

     ಕಸ ವಿಲೇವಾರಿ ಕುರಿತಂತೆ ಈ ಹಿಂದೆ ಪ್ರತಿಭಟನೆ ಕೂಡ ನಡೆಸಲಾಗಿದ್ದು ಈ ಸಂದರ್ಭದಲ್ಲಿ ಅಂದಿನ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು ರೈತರ ಪರವಾಗಿ ಬೆಂಬಲಕ್ಕೆ ನಿಂತು ಹೋರಾಟ ಮಾಡಿದ್ದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಕೂಡ ರೈತರ ಹೋರಾಟಕ್ಕೆ ಬೆಂಬಲ ನೀಡಿ ರಾಮನಗರ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಮಾಡಲು ಬಿಡುವುದಿಲ್ಲ ಎಂದು ಆಶ್ವಾಸನೆ ನೀಡಿದರು. ಆದರೆ ಈಗ ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ 42 ಎಕರೆ ಜಮೀನನ್ನು ಖರೀದಿಸಿರುವ ಖಾಸಗಿ ವ್ಯಕ್ತಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಬಿಬಿಎಂಪಿ ಸಹ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಟಿಡಿಆರ್ ರದ್ದು ಪಡಿಸಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

     ಪ್ರತಿಭಟನೆಯಲ್ಲಿ ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ರೈತ ಮುಖಂಡ ಲೇಪಾಕ್ಷ, ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್ ಎಸ್.ಬೈರಮಂಗಲ ಮಂಡಲ ಪಂಚಾಯತಿಯ ಮಾಜಿ ಸದಸ್ಯ ಕೆ.ಟಿ. ನರಸಿಂಹಯ್ಯ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link