ಬೆಂಗಳೂರು

ನೆರೆ ಪೀಡಿತ 21 ಜಿಲ್ಲೆಗಳ 102 ತಾಲೂಕುಗಳಲ್ಲಿ ಬೆಳೆಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ರೈತರ ಖಾತೆಗೆ ತಕ್ಷಣ ಶೇಕಡಾ 25ರಷ್ಟು ಪರಿಹಾರವನ್ನು ನೀಡಬೇಕು. ಉಳಿದ ಹಣವನ್ನು ತಕ್ಷಣ ಉನ್ನತ ಮಟ್ಟದ ಸಮಿತಿ ರಚಿಸಿ ರೈತರಿಗೆ ಪಾವತಿಸುವತ್ತ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದ್ದಾರೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ವತಿಯಿಂದ ನೆರೆ ಪೀಡಿತ ಪ್ರದೇಶಗಳಿಗೆ ಅಧ್ಯಯನ ತಂಡ ಕಳುಹಿಸಲಾಗಿತ್ತು. ಈಶ್ವರ್ ಖಂಡ್ರೆ ನೇತೃತ್ವದ ತಂಡದಲ್ಲಿ ಡಿ ಎಸ್ ಹುಲಿಗೇರಿ, ಪ್ರಿಯಾಂಕ್ ಖರ್ಗೆ, ಆನಂದ್ ನ್ಯಾಮಗೌಡ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹಲವು ಶಾಸಕರು ಪ್ರವಾಸ ಮಾಡಿದ್ದು ಅಲ್ಲಿನ ಪರಿಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ನಾವು ಊಹಿಸಿದ್ದಕ್ಕಿಂತ ಹೆಚ್ಚಿಗೆ ಹಾನಿಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಅನಾಹುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ಪ್ರವಾಹದಿಂದ ಜನರ ಬದುಕು ಬೀದಿಗೆ ಬಿದ್ದಿದ್ದು, ತಕ್ಷಣ ರೈತರ ಬದುಕು ಕಟ್ಟಿಕೊಳ್ಳಲು 5 ಸಾವಿರ ರೂ ಬಾಡಿಗೆ ಬದಲಾಗಿ 10 ಸಾವಿರ ರೂ ಹಣ ನೀಡಬೇಕು. ಪುನರ್ ವಸತಿ ಕೇಂದ್ರಗಳನ್ನು ಅಗತ್ಯಕ್ಕೆ ತಕ್ಕಂತೆ ಇನ್ನು ಎರಡು ಮೂರು ತಿಂಗಳ ಕಾಲ ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು.
ಮನೆ ಕಳೆದುಕೊಂಡಿರುವ ಜನರು ವಾಸ್ತವ್ಯ ಹೂಡಲು ತಕ್ಷಣ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಕೊಡಬೇಕು. ನೆರೆಯಿಂದ ಆವೃತಗೊಂಡ ಮನೆಗಳಲ್ಲಿ ವಾಸ ಮಾಡಲು ಕಷ್ಟವಾಗುತ್ತಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಆ ಮನೆಗಳು ಕುಸಿಯುವ ಸಾಧ್ಯತೆ ಇದೆ, ಹೀಗಾಗಿ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಬೇಕು. ನೆರೆ ಹಾನಿಯಿಂದ ಯಥಾಸ್ಥಿತಿಗೆ ಬರುವವರೆಗೂ ಜನರಿಗೆ ಆಹಾರ ಧಾನ್ಯಗಳು, ದಿನ ಬಳಕೆಯ ನಿತ್ಯ ಅಗತ್ಯ ವಸ್ತುಗಳನ್ನು ಸರ್ಕಾರವೇ ಪೂರೈಸಬೇಕಿದೆ. ಎಲ್ಲವನ್ನು ಕಳೆದುಕೊಂಡ ಜನರು ಹತಾಶಗೊಳ್ಳುವ ಮೊದಲೆ ಅವರಿಗೆ ಜೀವನೋಪಾಯಕ್ಕಾಗಿ ಉದ್ಯೋಗ ಕಲ್ಪಿಸಬೇಕು ಎಂದು ಈಶ್ವರ್ ಖಂಡ್ರೆ ಮನವಿ ಮಾಡಿದರು.
ರೈತರ ಬೆಳೆ, ಕೃಷಿ ಉಪಕರಣಗಳು, ಬೆಳೆ ಎಲ್ಲವೂ ನಾಶವಾಗಿರುವ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯ ತ್ವರಿತವಾಗಿ ಕೈಗೊಳ್ಳಬೇಕಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ, ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ಬಿಡುಗಡೆಗೆ ತಡವಾಗಬಹುದು. ಶೀಘ್ರವಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಬೆಳೆ ಹಾನಿ, ಪರಿಹಾರ ನೀಡುವುದು ಸೇರಿದಂತೆ ಎಲ್ಲವೂ ಸೂಕ್ತವಾಗಿ ಮತ್ತು ಸಮಗ್ರವಾಗಿ ನಿರ್ವಹಿಸಬೇಕು ಎಂದರು.
ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಅಡಿ ನೋಂದಾಯಿಸಿಕೊಂಡಿರುವ ರೈತರಿಗೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೂರ್ಣಪ್ರಮಾಣದ ಹಣವನ್ನು ವಿಮಾ ಕಂಪನಿಗಳು ನೀಡಬೇಕಿದೆ. ಹೀಗಾಗಿ ತಕ್ಷಣ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಬೆಳೆ ನಷ್ಟ, ವಿಮಾ ಹಣ ವಿತರಣೆಗೆ ಮುಂದಾಗಬೇಕಿದೆ ಎಂದು ಅವರು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದರು.
ಅಂದಾಜು 20 ಲಕ್ಷ ಎಕರೆ ಬೆಳೆ ಹಾನಿಯಾಗಿದೆ ಎಂದುಕೊಂಡಿದ್ದೆವು, ಆದರೆ ಹಾನಿಯ ಪ್ರಮಾಣ 30 ಲಕ್ಷ ಎಕರೆಗೂ ಹೆಚ್ಚಿದೆ. ಇಂತಹ ದುರ್ಘಟನೆಗಳು ನಡೆದಾದ ಪ್ರಧಾನಿ ಮಂತ್ರಿಯವರು ಒಂದು ಸಮಿತಿ ರಚಿಸಬೇಕು. ವಿಮಾ ಕಂಪನಿಗಳು ಸಮಿತಿಯ ಸದಸ್ಯರಾಗಿರಬೇಕು. ಸಮಿತಿಯಿಂದ ತಕ್ಷಣಕ್ಕೆ ಶೇ 25ರಷ್ಟು ಹಾನಿಯ ಹಣವನ್ನು ನೀಡಬೇಕು. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ನಿಜವಾಗಿ ರೈತರಿಗೆ ಸಿಗುತ್ತಿಲ್ಲ, ಅವರಿಗೆ ಅನ್ಯಾಯ ಆಗುತ್ತಿದೆ ಎಂದು ಈಶ್ವರ್ ಖಂಡ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಬರೀ ಉದ್ಯಮಿಗಳಿಗೆ, ಬಂಡವಾಳ ಶಾಹಿಗಳಿಗೆ , ಮಧ್ಯವರ್ತಿಗಳಿಗೆ ಅನುಕೂಲ ಆಗಿದೆ. ರೈತರ ಖಾತೆಗೆ ಸರಿಯಾಗಿ ಹಣ ಸಂದಾಯ ಆಗಬೇಕು. ಕಡ್ಡಾಯವಾಗಿ ರೈತರು ಪ್ರೀಮಿಯಮ್ ಹಣವನ್ನು ವಿಮಾ ಕಂಪನಿಗೆ ಕಟ್ಟಬೇಕು ಎಂಬ ನಿಯಮಾವಳಿ ಇದೆ. ಆದರೆ ಇಂತಹ ಸಂದರ್ಭದಲ್ಲಿ ರೈತರ ಪ್ರಿಮಿಯಮ್ ಹಣವನ್ನು ಬ್ಯಾಂಕ್ ಗಳೇ ತುಂಬಬೇಕು. ಅಂದಾಜು ತಾತ್ಕಾಲಿಕ ಪರಿಹಾರವಾಗಿ 1000 ಕೋಟಿ ರೂ ನೀಡಬೇಕು, ಸಮೀಕ್ಷೆ ನಂತರ ಅಂದಾಜು 4000 ಕೋಟಿ ರೂ ಹಣವನ್ನು ರೈತರಿಗೆ ವಿಮಾನ ಕಂಪನಿಗಳು ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಜಮಖಂಡಿಯಲ್ಲಿ 30 ಸಾವಿರ ಎಕರೆ ಕಬ್ಬು ಬೆಳೆಯಲಾಗಿದ್ದು, ಅದರಲ್ಲಿ 20 ಸಾವಿರ ಎಕರೆ ಕಬ್ಬು ನಾಶವಾಗಿದೆ. ಕಬ್ಬು ವಾಣಿಜ್ಯ ಬೆಳೆ ಎಂದು ಕೇಂದ್ರ ಸರ್ಕಾರ ಗುರುತಿಸಿದ್ದು ಹೀಗಾಗಿ ಕಬ್ಬಿಗೆ ಬೆಳೆ ವಿಮೆ ಇಲ್ಲದೆ ಅನ್ಯಾಯವಾಗಿದೆ. ಕಬ್ಬನ್ನೂ ವಿಮೆಯ ವ್ಯಾಪ್ತಿಯಡಿಯೇ ತರಬೇಕು ಎಂದು ಈಶ್ವರ್ ಖಂಡ್ರೆ ಆಗ್ರಹಿಸಿದರು.
ನೆರೆ ಸಂತ್ರಸ್ತರನ್ನು ಶಾಶ್ವತ ಸ್ಥಳಾಂತರ ಮಾಡಲು ಸರ್ಕಾರ ಜಾಗ ಗುರುತಿಸಿ ಮನೆಗಳನ್ನು ನಿರ್ಮಿಸಿ ಕೊಡಬೇಕು. ಒಂದು ಬೆಡ್ ರೂಂ ಉಳ್ಳ 350 ಚದರ ಅಡಿ ಜಾಗಗಳಲ್ಲಿ ಮನೆ ನಿರ್ಮಿಸಲು ಸಾಧ್ಯವಿಲ್ಲ, ಕನಿಷ್ಠ 800 ಚದರ ಅಡಿಗಳ ಜಾಗದಲ್ಲಿ ಮನೆ ನಿರ್ಮಿಸಬೇಕು. 5 ಲಕ್ಷ ರೂ ಹಣದಿಂದ ಮನೆ ನಿರ್ಮಿಸಲು ಸಾಧ್ಯವಿಲ್ಲ, ಹೀಗಾಗಿ ಕನಿಷ್ಠ 10 ಲಕ್ಷ ರೂ ಅನುದಾನ ನೀಡಬೇಕೆಂದು ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಎನ್ ಡಿಆರ್ ಎಫ್ ರಕ್ಷಣಾ ತಂಡದ ಮಾಹಿತಿ ಪ್ರಕಾರ ಸಾವಿರಾರು ಎಮ್ಮೆ, ಹಸು, ದನಕರುಗಳು ಸಾವನ್ನಪ್ಪಿವೆ. ಎಮ್ಮೆ ಹಾಗೂ ಸೀಮೆ ಹಸುಗಳಿಗೆ ಲಕ್ಷಾಂತರ ರೂ ಬೆಲೆ ಬಾಳುತ್ತವೆ. ಅವುಗಳಿಗೆ ಕನಿಷ್ಠ 25 ಸಾವಿರ ರೂ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಇನ್ನೂ ಹೆಚ್ಚಿನ ಪರಿಹಾರವನ್ನು ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಅವರು ತಿಳಿಸಿದರು.
ನೆರೆ ಪ್ರದೇಶಗಳಿಗೆ ಕೇಂದ್ರದ ಗೃಹ ಹಾಗೂ ಹಣಕಾಸು ಸಚಿವರು ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ. ರಾಜ್ಯದಲ್ಲಿ 1 ಲಕ್ಷ ಕೋಟಿಗೂ ಅಧಿಕ ಹಾನಿ ಸಂಭವಿಸಿದೆ. ಹೀಗಾಗಿ ತಕ್ಷಣಕ್ಕೆ ಶೇ 10ರಷ್ಟು ಹಣ ಎಂದರೂ10 ಸಾವಿರ ಕೋಟಿ ರೂ ಗಳನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕೆಂದು ನಮ್ಮ ನಾಯಕರು ಒತ್ತಾಯ ಮಾಡಿದ್ದಾರೆ. ಯಡಿಯೂರಪ್ಪ ಅವರು ಸದನದಲ್ಲಿ ದ್ವೇಷದ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿದೆ. ತನಿಖೆ ಕೇವಲ 14 ತಿಂಗಳಿಗಷ್ಟೇ ಸೀಮಿತವಾಗಬಾರದು, ಆಪರೇಷನ್ ಕಮಲದ ಬಗ್ಗೆಯೂ ತನಿಖೆ ನಡೆಸಿದರೆ ಉತ್ತಮ ಎಂದು ಅವರು ಸಲಹೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








