ತುರುವೇಕೆರೆ
ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಬಗರ್ ಹುಕುಂ ಜಮೀನನ್ನು ಸಕ್ರಮಗೊಳಿಸಲು ಸರ್ಕಾರ ಅರ್ಜಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ನಾಮುಂದು ತಾ ಮುಂದು ಎಂಬಂತೆ ರೈತರು ಅರ್ಜಿ ಪಡೆಯಲು ಮುಗಿಬೀಳುತ್ತಿದ್ದ ದೃಶ್ಯ ತಾಲ್ಲೂಕು ಕಚೇರಿ ಮುಂದೆ ಗುರುವಾರ ಕಂಡು ಬಂತು.
ರೈತರು ಹಲವಾರು ವರ್ಷಗಳಿಂದ ಬಗರ್ ಹುಕುಂ ಜಮೀನನ್ನು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಈ ಜಮೀನು ತಮಗೆ ದಕ್ಕುವುದೋ ಇಲ್ಲವೋ ಎಂಬ ಆತಂಕದಲ್ಲಿದ್ದ ರೈತರಿಗೆ ಇದೀಗ ಸಕ್ರಮಗೊಳಿಸಲು ಸರ್ಕಾರ ನಮೂನೆ 57 ರಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ತಾಲ್ಲೂಕಿನಾದ್ಯಂತ ನೂರಾರು ರೈತರು ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿ ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಲು ಪರದಾಡಿದರು.
ಸಂಜೆಯಾದರೂ ಸಹಾ ಅರ್ಜಿ ಸಲ್ಲಿಸುವವರ ಸಂಖ್ಯೆ ಕ್ಷೀಣಿಸಿರಲಿಲ್ಲ. ಸರ್ಕಾರ ಅರ್ಜಿ ಸಲ್ಲಿಸಲು ಮಾರ್ಚ್ 16 ರವರೆಗೆ ಗಡುವು ನೀಡಿದ್ದರೂ ಸಹಾ ರೈತರು ಹೇಗೋ ಏನೋ ಎಂಬ ಆತಂಕದಲ್ಲಿ ಆತುರಾತುರವಾಗಿ ಅರ್ಜಿ ಸಲ್ಲಿಸಲು ಮುಗಿಬಿದ್ದುದು ಸರ್ವೆಸಾಮಾನ್ಯವಾಗಿತ್ತು.
ಅರ್ಜಿ ಸ್ವೀಕೃತಿ ಅವಧಿ ಮುಗಿದ ತರುವಾಯ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಂತರ ಅರ್ಹ ಫಲಾನುಭವಿಗಳನ್ನು ಸರ್ಕಾರ ಆಯ್ಕೆಮಾಡಲಿದೆ. ಅರ್ಜಿ ಸ್ವೀಕೃತಿ ಪ್ರಾರಂಭದ ಮೊದಲ ದಿನವಾದ್ದರಿಂದ ಇಂದು ಹೆಚ್ಚು ರೈತರು ಅರ್ಜಿ ಸಲ್ಲಿಸಲು ಬಂದಿದ್ದು ದಿನಕ್ರಮೇಣ ಕಡಿಮೆಯಾಗಲಿದೆ ಎಂದು ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ