ಡಿಸಿಸಿ ಬ್ಯಾಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ 

ಕುಣಿಗಲ್
     ತಾಲ್ಲೂಕಿನ ಜಾಣಗೆರೆ ವಿಎಸ್‍ಎಸ್‍ಎನ್‍ನಲ್ಲಿ  ಅಮಾಯಕ ರೈತರಿಗೆ ಸಾಲಕೊಡುವ ಮತ್ತು ಮನ್ನಾ ಮಾಡುವ ಬಗ್ಗೆ ವಂಚನೆ ಮಾಡುವ ಮೂಲಕ ಮಕ್ಮಲ್ ಟೋಪಿ ಹಾಕುತ್ತಿದ್ದಾರೆಂದು ಆರೋಪಿಸಿ ರೈತರು ಜಿಲ್ಲಾ ರೈತಸಂಘದ ಅಧ್ಯಕ್ಷ ಆನಂದ್ ಪಟೇಲ್ ನೇತೃತ್ವದಲ್ಲಿ ಪಟ್ಟಣದ ಡಿಸಿಸಿ ಬ್ಯಾಂಕ್ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. 
    ಇಲ್ಲಿನ ವಿಎಸ್‍ಎಸ್‍ಎನ್‍ನಲ್ಲಿ ರೈತರಿಗೆ ಮಂಜೂರು ಆಗಿರುವ ಸಾಲದ ಹಣ ನೀಡದೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯವರು ಇಲ್ಲಸಲ್ಲದ ಸಬೂಬು ಹೇಳುತ್ತಲೆ ಕಾಲಹರಣ ಮಾಡಿ ಮಂಜೂರಾದ ಪೂರ್ತಿ ಹಣವನ್ನು ಅಮಾಯಕ ರೈತರಿಗೆ ನೀಡದೆ ಕೇವಲ 10 ಸಾವಿರ ಹಣವನ್ನು ನೀಡಿ ಉಳಿದ ಹಣವನ್ನು ವಿಎಸ್‍ಎಸ್‍ಎನ್‍ನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆಂದು ರೈತಸಂಘದ ಅಧ್ಯಕ್ಷ ಗಂಭೀರ ಆರೋಪವನ್ನು ಮಾಡಿದರು.   
   ಇಲ್ಲಿ 2017-18ನೇ ಸಾಲಿನಲ್ಲಿ ಪದ್ಮಮ್ಮ, ಕೆಂಪಮ್ಮ, ನಾಗಯ್ಯ ಸೇರಿದಂತೆ ಹತ್ತಾರು ರೈತರಿಂದ ಸಾಲಕೊಡುತ್ತೇವೆಂದು ನಂಬಿಸಿ ಅವರಿಂದ ಸಂಪೂರ್ಣ ದಾಖಲೆಗಳನ್ನು ಪಡೆದು ತಲಾ 50 ಸಾವಿರ ಹಾಗೂ 25 ಸಾವಿರ ದಂತೆ ಸಾಲ ಮಂಜೂರು ಮಾಡಿದ್ದು ಕೇವಲ ರೈತರಿಗೆ 10 ರಿಂದ 15 ಸಾವಿರ ರೂ. ಹಣವನ್ನು ನೀಡಿ ಉಳಿದ ಹಣವನ್ನು ಲಪಟಾಯಿಸಿದ್ದಾರೆ.
    ಗುನ್ನಾಗೆರೆಯ ಕೆಂಪಮ್ಮನವರಿಗೆ ಮಂಜೂರಾದ 25 ಸಾವಿರದಲ್ಲಿ ನಯಾಪೈಸೆ ಸಾಲ ನೀಡದೆ ಪೂರ್ತಿ ಹಣವನ್ನು ವಂಚಿಸಿರುವುದು ಆಕೆಯ ಪಾಸ್‍ಬುಕ್‍ನಲ್ಲಿ ಎಂಟ್ರಿಯಿಂದ ಗೊತ್ತಾಗಿದೆ. ಇದನ್ನು ತಿಳಿಯದಾಗದೆ ಕೆಲ ತಿಂಗಳು ರೈತರು ಪರದಾಡಿದ ಪ್ರಸಂಗವೂ ನಡೆದಿದೆ. ಈ ಎಲ್ಲಾ ನೋವುಗಳನ್ನು ರೈತಸಂಘದೊಂದಿಗೆ ಹಂಚಿಕೊಂಡಾಗ ಅವರು ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ನ್ಯಾಯಕ್ಕಾಗಿ ಆಗ್ರಹಿಸಿದರು.  ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕುಬೇರನಾಯ್ಕ ಫೋನ್ ಮೂಲಕ ಮಾತನಾಡಿ ಕೂಡಲೇ ತನಿಖಾ ತಂಡವನ್ನು ರಚಿಸಿ ತಪ್ಪು ಮಾಡಿದವರ ವಿರುದ್ಧ ನಿರ್ದಾಕ್ಷ್ಯಿಣ್ಯವಾಗಿ ಕ್ರಮಕೈಗೊಳ್ಳುವ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ಕೈಬಿಟ್ಟರು.
 
     ಪ್ರತಿಭಟನೆಯಲ್ಲಿ ರೈತಸಂಘದ ಕಾರ್ಯದರ್ಶಿ ವೆಂಕಟೇಶ್, ಶ್ರೀರಂಗಯ್ಯ, ಕೆಂಪಮ್ಮ, ದೇವರಾಜ್, ಮರಿಯಪ್ಪ ಸಾಕಮ್ಮ, ಕೆಂಪಮ್ಮ ಮೊದಲಾದರು ಭಾಗವಹಿಸಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link