ಫಸಲ್ ಭೀಮಾ ಯೋಜನೆಯ ಹಣ ಶೀಘ್ರದಲ್ಲೇ ರೈತರ ಖಾತೆಗೆ

ಚಳ್ಳಕೆರೆ

        ಚಳ್ಳಕೆರೆ ತಾಲ್ಲೂಕಿನಾದ್ಯಂತ ಪ್ರಧಾನ ಮಂತ್ರಿಗಳ ಫಸಲ್ ಬೀಮಾ ಯೋಜನೆಯ ಹಣ ಇದುವರೆಗೂ ರೈತ ಫಲಾನುಭವಿಗಳಿಗೆ ತಲುಪದೆ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಬಾಕಿ ನಿಂತ ಎಲ್ಲಾ ಫಲಾನುಭವಿಗಳಿಗೆ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮುಷ್ಕರ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರು.

     ತಾಲ್ಲೂಕಿನ ಸಾವಿರಾರು ರೈತರಿಗೆ ಇದುವರೆಗೂ ಫಸಲ್ ಬೀಮಾ ಯೋಜನೆಯ ಹಣ ಪಾವತಿಯಾಗದೇ ರೈತರು ಸಂಕಷ್ಟಗಳನ್ನು ಅನುಭವಿಸುತ್ತಿದ್ದು, ಭೀಕರ ಬರಗಾಲದ ಪರಿಸ್ಥಿತಿಯಲ್ಲಿ ರೈತರು ಬದುಕುವುದೇ ಕಷ್ಟಕರವಾಗಿರುವಾಗ ಸರ್ಕಾರ ಘೋಷಿಸಿದ ಫಸಲ್ ಭೀಮಾ ಯೋಜನೆಯ ವಿಮೆ ಹಣ ರೈತರಿಗೆ ದೊರಕದೇ ಇದ್ದು, ಕೂಡಲೇ ಸರ್ಕಾರ ಈ ಹಣವನ್ನು ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದರು.

       ಕ್ಷೇತ್ರದ ರೈತರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳೆ ವಿಮೆ ಪಾವತಿ ಕುರಿತು ಧರಣಿ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಕೂಡಲೇ ಸ್ಥಳಕ್ಕೆ ದಾವಿಸಿ ವಿಮೆ ಹಣ ಪಾವತಿಯಾಗದ ಬಗ್ಗೆ ರೈತರಿಂದ ಮಾಹಿತಿ ಪಡೆದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು. ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ ತಾಲ್ಲೂಕು ಬರಗಾಲ ಪೀಡಿತ ಪ್ರದೇಶವಾಗಿದ್ದು, ರೈತರು ಫಸಲ್ ಭೀಮಾ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದು, ಕೂಡಲೇ ಸರ್ಕಾರ ಈ ಹಣವನ್ನು ಬಿಡುಗಡೆಗೊಳಿಸಬೇಕೆಂದು ರೈತರ ಪರವಾಗಿ ಒತ್ತಾಯಿಸುವುದಾಗಿ ಅವರು ತಿಳಿಸಿದರು.

      ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ರೈತರು ತಮಗೆ ನ್ಯಾಯಯುತವಾಗಿ ದೊರಕಬೇಕಾದ ವಿಮೆ ಕಂತು ಹಣ ಇನ್ನೂ ಅವರ ಖಾತೆಗೆ ಜಮಾವಾಗದ ಕಾರಣ ಇಲ್ಲಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದೀರಿ, ರೈತರ ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಿದರು. ಆದಷ್ಟು ಬೇಗ ಫಸಲ್ ಭೀಮಾ ಯೋಜನೆ ಹಣ ರೈತರ ಖಾತೆಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.

        ಸ್ಥಳಕ್ಕೆ ಆಗಮಿಸಿದ ಕೃಷಿ ಇಲಾಖೆ ಆಯುಕ್ತ ಶಿವಕುಮಾರ್ ಮಾತನಾಡಿ, ಈಗಾಗಲೇ ಚಳ್ಳಕೆರೆ ತಾಲ್ಲೂಕಿನ ಕೆಲವು ರೈತರಿಗೆ ಫಸಲ್ ಭೀಮಾ ಯೋಜನೆಯಡಿ ಅವರ ಖಾತೆಗೆ ಹಣವನ್ನು ಪಾವತಿ ಮಾಡಲಾಗಿದೆ. ಇನ್ನೂ ಬಾಕಿ ಉಳಿದ ರೈತರಿಗೆ 8 ದಿನಗಳೊಳಗೆ, ಚುನಾವಣೆಗೆ ನೀತಿ ಸಂಹಿತೆ ಮುಗಿದ ನಂತರ ಹಣ ಪಾವತಿಮಾಡಲಾಗುವುದು. ರೈತರು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ವೈ.ಶ್ರೀನಿವಾಸ್, ರೈತರಾದ ಆರ್.ಎ.ದಯಾನಂದಮೂರ್ತಿ, ನೇರ್ಲಗುಂಟೆ ರಾಮಪ್ಪ, ಚಂದ್ರಣ್ಣರೆಡ್ಡಿ, ಹಂಪಣ್ಣ, ತಿಮ್ಮಣ್ಣ ಮುಂತಾದವರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link