ಪಿಂಚಣಿ ಎಡವಟ್ಟು: ಹೆಚ್ಚುವರಿಯಾಗಿ ಹಿಂಪಡೆದ ಹಣ ಪಡೆಯಲು ಹಿರಿಯ ನಾಗರೀಕರ ಅಲೆದಾಟ

ಹುಳಿಯಾರು:

    ಇದೊಂದು ವಿಚಿತ್ರ ಪ್ರಕರಣ. ಕೊಡಬೇಕಿದ್ದ ಪಿಂಚಣಿ ಹಣಕ್ಕೆ ಬದಲಾಗಿ ಹೆಚ್ಚು ಹಣ ಕೊಟ್ಟು ಆದ ಎಡವಟ್ಟು ಸರಿಪಡಿಸಲು ಮತ್ತೊಂದು ಎಡವಟ್ಟು ಮಾಡಿಕೊಂಡ ಅಪರೂಪದ ಪ್ರಕರಣ. ತಾಲೂಕು ಆಡಳಿತದಿಂದಾದ ಈ ಎಡವಟ್ಟಿಗೆ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸಬೇಕಿದ್ದ ಹಿರಿಯ ನಾಗರೀಕರು ಬಿಸಿಲಿನಲ್ಲಿ ಕಛೇರಿಯಿಂದ ಕಛೇರಿಗೆ, ಅಧಿಕಾರಿಗಳಿಂದ ಅಧಿಕಾರಿಗಳ ಬಳಿ ಅಲೆಯುವಂತ್ತಾಗಿದೆ.

     ಹೌದು, ಜಿಲ್ಲಾ ಖಜಾನೆಯಿಂದ ಫೆಬ್ರವರಿ ಮತ್ತು ಮಾರ್ಚ್ ಮಾಹೆಯಲ್ಲಿ ಡಬಲ್ ಪಿಂಚಣಿ ನೀಡಲಾಗಿದೆ. ಅಂದರೆ ತಿಂಗಳ ಆರಂಭದಲ್ಲಿ ಒಂದು ಬಾರಿ ಹಾಗೂ ಅಂತ್ಯದಲ್ಲಿ ಒಂದು ಬಾರಿ ಫಲಾನುಭವಿಗಳ ಖಾತೆಗೆ ಹಾಕಲಾಗಿದೆ. ಹೀಗೆ ಮಾಡಿರುವ ಎಡವಟ್ಟಿನಿಂದ ಜಿಲ್ಲೆಯ 130 ಮಂದಿ ಫಲಾನುಭವಿಗಳ ಖಾತೆಗೆ ಒಟ್ಟು 9,88,450 ರೂ. ಹೆಚ್ಚುವರಿಯಾಗಿ ಜಮೆಯಾಗಿದೆ. ಈ ಹಣವನ್ನು ಫಲಾನುಭವಿಗಳಿಂದ ವಸೂಲಿ ಮಾಡುವಂತೆ ತಹಸೀಲ್ದಾರ್ ಅವರಿಗೆ ಜಿಲ್ಲಾಧಿಕಾರಿಗಳು ಪತ್ರ ಸಹ ಬರೆದಿದ್ದಾರೆ.

    ಬ್ಯಾಂಕ್ ಶಾಖೆಯ ವ್ಯವಸ್ಥಾಪಕರನ್ನು ಸಂಪರ್ಕಿಸಿ ಖಾತೆಯಲ್ಲಿರುವ ಹಣ ಸರ್ಕಾರಕ್ಕೆ ಹಿಂಪಡೆಯುವಂತೆಯೂ ಖಾತೆಯಲ್ಲಿ ಇಲ್ಲದಿದ್ದರೆ ನಿರ್ಧಾಕ್ಷಿಣ್ಯವಾಗಿ ವಸೂಲಿ ಮಾಡಿ ಜಿಲ್ಲಾ ಖಜಾನೆ ಖಾತೆಗೆ ಜಮೆ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗೆ 3 ಸಾವಿರದಿಂದ 16,800 ರೂ. ವರೆವಿಗೂ ಫಲಾನುಭವಿಗಳ ಖಾತೆಗೆ ಹೆಚ್ಚುವರಿಯಾಗಿ ಜಮೆ ಮಾಡಿ ಈಗ ವಸೂಲಿ ಮಾಡುತ್ತಿದ್ದಾರೆ. ಆದರೆ ವಸೂಲಿ ಮಾಡುವಾಗ ಫಲಾನುಭವಿಗಳ ಮೂಲ ಪಿಂಚಣಿ ಹಣ ಬಿಟ್ಟು ಹೆಚ್ಚುವರಿಯಾಗಿ ನೀಡಿರುವ ಹಣ ವಸೂಲಿ ಮಾಡುವುದ ಬಿಟ್ಟು ಹಾಕಿರುವ ಅಷ್ಟೂ ಹಣದ ಜೊತೆ ಫಲಾನುಭವಿಗಳ ಹಣವನ್ನೇ ಪಡೆಯುತ್ತಿರುವುದು ವಿವಾದ ಸೃಷ್ಠಿಸಿದೆ.

      ಇದಕ್ಕೆ ನಿದರ್ಶನವಾಗಿ ಹುಳಿಯಾರಿನ ತಿಪಟೂರು ರಸ್ತೆಯ ಎನ್.ಕೆ.ಚಂದ್ರಶೇಖರಪ್ಪ ಪ್ರಕರಣವಿದೆ. ಇವರಿಗೆ ಸಂದ್ಯಾ ಸುರಕ್ಷಾ ಯೋಜನೆಯಡಿ 29-11-2018 ರಲ್ಲಿ ಮಾಸಿಕ ಪಿಂಚಣಿ ಮಂಜೂರಾಗಿತ್ತು. 01-01-2019 ರಿಂದ ಪಿಂಚಣಿ ಜಾರಿಗೆ ಬರುವಂತೆಯೂ ಮಾಸಿಕ 1 ಸಾವಿರ ರೂ. ನೀಡುವುದಾಗಿಯೂ ಹೇಳಲಾಗಿತ್ತು. ಆದರೆ ಜನವರಿ ಮಾಹೆಯಲ್ಲಿ ಇವರಿಗೆ ಮಾಸಿಕ ಪಿಂಚಣಿ ಬರಲೇ ಇಲ್ಲ. ಬದಲಾಗಿ ಅಚ್ಚರಿ ಎನ್ನುವಂತೆ ಫೆಬ್ರವರಿ ಮಾಹೆಯಲ್ಲಿ 6 ನೇ ತಾರೀಖು 2 ಸಾವಿರ ರೂ. 25 ನೇ ತಾರೀಖು 2 ಸಾವಿರ ರೂ. ಒಟ್ಟು 4 ಸಾವಿರ ರೂ. ಇವರ ಖಾತೆಗೆ ಪಿಂಚಣಿ ಹಣ ಜಮೆಯಾಗಿತ್ತು.

        ಅಲ್ಲದೆ ಮಾರ್ಚ್ 6 ರಂದು ಪುನಹ 2 ಸಾವಿರ ರೂ. ಪಿಂಚಣಿ ಹಣ ಬಂತು. ಎಚ್.ಡಿ. ಕುಮಾರ ಸ್ವಾಮಿ ಅವರು ಚುನಾವಣಾ ಸಂದರ್ಬದಲ್ಲಿ ಸಂದ್ಯಾ ಸುರಕ್ಷಾ ಹಣ ಹೆಚ್ಚು ಮಾಡುವ ಬಗ್ಗೆ ಭರವಸೆ ನೀಡಿದ್ದು ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲಿ ಹೆಚ್ಚು ಮಾಡಿದ್ದಾರೆಂದು ಫಲಾನುಭವಿ ಭಾವಿಸಿದ್ದರು. ಜನವರಿ ಮಾಹೆಯಲ್ಲಿ ಕೊಡಬೇಕಿದ್ದ ಹಣ ಸೇರಿ ಫೆಬ್ರವರಿ ಮಾಹೆಯಲ್ಲಿ 4 ಸಾವಿರ ರೂ. ಕೊಟ್ಟಿದ್ದಾರೆಂದು ತಿಳಿದು ಖಾತೆಯಿಂದ ಹಣ ಹಿಂಪಡೆದು ತನ್ನ ಔಷಧ ಸೇರಿದಂತೆ ಸಂಸಾರ ನಿರ್ವಹಣೆಗೆ ಬಳಸಿಕೊಂಡರು.

       ಆದರೆ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಪಿಂಚಣಿ ಹಣ ಬರಲೇ ಇಲ್ಲ. ಈ ಬಗ್ಗೆ ನಾಡಕಛೇರಿಗೆ ಮಾಹಿತಿ ಪಡೆಯಲು ತೆರಳಿದ್ದ ಚಂದ್ರಶೇಖರಪ್ಪ ಅವರಿಗೆ ಉಪ ತಹಶೀಲ್ದಾರ್ ಅವರು ನೋಟಿಸ್ ಪತ್ರ ಕೈಗಿಟ್ಟು ನಿಮಗೆ ಹೆಚ್ಚುವರಿಯಾಗಿ ಪಿಂಚಣಿ ನೀಡಲಾಗಿದ್ದು ವಾಪಸ್ ಕಟ್ಟುವಂತೆ ತಾಕೀತು ಮಾಡಿದರು. ಇದರಿಂದ ಗಾಭರಿಯಾದ ಚಂದ್ರಶೇಖರಪ್ಪ ಬ್ಯಾಂಕಿಗೆ ದೌಡಾಯಿಸಿ ಬಿಡಿಸಿಕೊಂಡಿದ್ದ ಪಿಂಚಣಿ ಹಣ 6 ಸಾವಿರ ರೂ. ವಾಪಸ್ಸ್ ಕಟ್ಟಿ ಬಂದು ಉಪತಹಸೀಲ್ದಾರ್ ಅವರಿಗೆ ಚಲನ್ ಸಹ ತೋರಿಸಿ ನಿರಾಳರಾದರು.

       ತಿಂಗಳಿಗೆ 1 ಸಾವಿರ ರೂ. ಪಿಂಚಣಿಯಂತೆ ಜವರಿಯಿಂದ ಮಾರ್ಚ್ ಮಾಹೆಗೆ 3 ಸಾವಿರ ರೂ. ಆಗುತ್ತದೆ. ಆದರೆ ತಾಲೂಕು ಆಡಳಿತ 6 ಸಾವಿರ ರೂ. ಹಣ ಜಮೆ ಮಾಡಿದ್ದು ಹೆಚ್ಚುವರಿ ಹಣ 3 ಸಾವಿರ ರೂ. ಮಾತ್ರ ಹಿಂಪಡೆಯಬೇಕಿರುವುದು ನ್ಯಾಯ ಸಮ್ಮತ. ಆದರೆ ಹಾಕಿರುವ 6 ಸಾವಿರ ರೂ. ಜೊತೆಗೆ ಚಂದ್ರಣ್ಣ ಅವರ ಖಾತೆಯಲ್ಲಿದ್ದ 2 ಸಾವಿರ ರೂ. ಸೇರಿಸಿ ಒಟ್ಟು 8 ಸಾವಿರ ರೂ. ಹಿಂಪಡೆದಿದ್ದಾರೆ. ಇದನ್ನು ನೋಡಿ ಅಚ್ಚರಿಗೊಂಡ ಚಂದ್ರಶೇಖರ್ ಕೊಟ್ಟಿರುವುದು 6 ಸಾವಿರ ರೂ. ಹಿಂಪಡೆದಿರುವುದು 8 ಸಾವಿರ ರೂ. ಏಕೆ, ನನ್ನ ಹಣ ನನಗೆ ವಾಪಸ್ ಕೊಡಿ ಎಂದು ಕೋರಿದ್ದಾರೆ.

       ಉಪತಹಸೀಲ್ದಾರ್ ರಿಂದ ತಹಸೀಲ್ದಾರ್, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಹೀಗೆ ಎಲ್ಲರ ಬಳಿಗೂ ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದರೂ ಯಾರೊಬ್ಬರೂ ಸ್ಪಂಧಿಸಿಲ್ಲ. ಜೊತೆಗೆ ಮಾಹೆಯಾನ ಬರುತ್ತಿದ್ದ ಪಿಂಚಣಿ ಸಹ ಸ್ಥಗಿತಗೊಳಿಸಿದ್ದಾರೆ. ಕಂದಾಯ ಇಲಾಖೆಯ ಈ ಎಡವಟ್ಟಿಗೆ ತಾಲೂಕಿನ 130 ಮಂದಿ ಈ ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯ ನಾಡಕಚೇರಿ ಮತ್ತು ಬ್ಯಾಂಕ್‍ಗೆ ಅಲೆದು ಅಲೆದು ಸೋತು ಹೋಗಿದ್ದಾರೆ. ಜಿಲ್ಲಾಧಿಕಾರಿಗಳಾದರೂ ಈ ಬಗ್ಗೆ ವಿಶೇಷ ಗಮನ ಹರಿಸಿ ಹಿರಿಯ ನಾಗರೀಕರಿ ಗಾಗಿರುವ ಅನ್ಯಾಯ ಸರಿಪಡಿಸುವರೇ ಕಾದು ನೋಡಬೇಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ