ಹುಳಿಯಾರು
ಹುಳಿಯಾರು ಹೋಬಳಿಯ ಬೆಳ್ಳಾರ ಗ್ರಾಮದ ಹರಿಜನ ಕಾಲೋನಿಯಲ್ಲಿ ಮಾಡಿರುವ ಸಿಸಿ ರಸ್ತೆಯು ಕಳಪೆ ಕಾಮಗಾರಿ ಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.ಈ ಕಾಮಗಾರಿಯು ಅತ್ಯಂತ ಕಳಪೆ ಹಾಗೂ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಮಳೆಯ ನೀರು ಹರಿದು ಹೋಗಲು ಸ್ಥಳವಕಾಶ ಕಲ್ಪಿಸದ ಕಾರಣದಿಂದ ಸಣ್ಣ ಮಳೆ ಬಂದರೂ ಸಹ ಮಳೆಯ ನೀರೆಲ್ಲಾ ಮನೆಗಳಿಗೆ ನುಗ್ಗುತ್ತದೆ. ಅಲ್ಲದೆ ಚರಂಡಿಯನ್ನೂ ಸಹ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ ಚರಂಡಿಯಲ್ಲಿ ನೀರು ಹರಿಯದಂತೆ ಅಲ್ಲಲ್ಲೇ ನಿಂತು ಸೊಳ್ಳೆಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ ಎಂದು ದೂರಿದ್ದಾರೆ.
ಈ ರಸ್ತೆಗೆ ಎರಡೂ ಬದಿಯಲ್ಲಿ 7 ಅಡ್ಡ ರಸ್ತೆಗಳಿದ್ದು ಇವುಗಳಿಗೆ ಡೆಕ್ ಹಾಕದೆ ಹಾಗೆ ಬಿಟ್ಟಿದ್ದು ರಸ್ತೆ ದಾಟುವಾಗ ಮಕ್ಕಳು, ಮುದುಕರು ಬಿದ್ದು ಗಾಯಗಳಾಗಿವೆ. ಇದನ್ನ ನೋಡಲಾಗದೆ ಸ್ಥಳೀಯರೆ ಮಣ್ಣು ಹಾಕಿ ಓಡಾಡುವಂತೆ ಮಾಡಿಕೊಂಡಿದ್ದಾರೆ. ಅಲ್ಲದೆ ಈಗಾಗಲೇ ಸಿಸಿ ರಸ್ತೆಯು ಅಲ್ಲಲ್ಲಿ ಕಿತ್ತು ಹೋಗಿದ್ದು ಜಲ್ಲಿಗಳೆದ್ದು ಓಡಾಟಕ್ಕೆ ತೊಂದರೆಯಾಗಿದೆ.
ಎಸ್‍ಸಿಪಿ ಯೋಜನೆಯಲ್ಲಿ ಬರೋಬ್ಬರಿ 30 ಲಕ್ಷ ರೂ. ಹಣದಲ್ಲಿ ಕಾಮಗಾರಿ ನಡೆಯುತ್ತಿದ್ದರೂ ಒಂದೇ ಒಂದು ದಿನ ಸಂಬಂಧಪಟ್ಟ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿಲ್ಲ. ಹಾಗಾಗಿ ಗುತ್ತಿಗೆದಾರರು ತಮ್ಮ ಮನಸ್ಸೋ ಇಚ್ಛೆ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಊರಿನಲ್ಲಿ ಒಬ್ಬರು ತಾಲ್ಲೂಕು ಪಂಚಾಯಿತಿ ಸದಸ್ಯ ಸಹ ಇದ್ದಾರೆ. ಅವರೂ ಸಹ ಇದೇ ರಸ್ತೆಯಲ್ಲಿ ದಿನವೂ ಸಂಚರಿಸುತ್ತಾರೆ. ಆದರೂ ಈ ಬಗ್ಗೆ ಮೌನವಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಮೇಲಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪುನಃ ಗುಣಮಟ್ಟದ ಕಾಮಗಾರಿ ಮಾಡುವಂತೆ ಲ್ಯಾಂಡ್ ಆರ್ಮಿಯವರಿಗೆ ನೋಟಿಸ್ ನೀಡುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ