ದಾವಣಗೆರೆ:
ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿರುವ ಸುಪ್ರೀಂ ಕೋರ್ಟ್ ತೀರ್ಪಿಗೆ ಮಾಹಿತಿಯ ಕೊರತೆ ಇದೆ ಎಂದು ನಿವೃತ್ತ ನ್ಯಾಯಾಧೀಶ, ಶ್ರೀಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅಶೋಕ ಇಂಚಿಗೆರೆ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಧಾರ್ಮಿಕ ಹಾಗೂ ಸೂಕ್ಷ್ಮ ವಿಷಯಗಳ ಬಗ್ಗೆ ತೀರ್ಪು ನೀಡುವ ಮುನ್ನ ನ್ಯಾಯಾಧೀಶರು ಸರಿಯಾದ ಮಾಹಿತಿ ಸಂಗ್ರಹಿಸುವುದರ ಜೊತೆಗೆ, ಸ್ಥಳ ಪರಿಶೀಲನೆ ನಡೆಸಿ ತೀರ್ಪು ನೀಡುವುದು ಅವಶ್ಯವಾಗಿದೆ. ಆದರೆ, ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿರುವ ತೀರ್ಪಿಗೆ ಮಾಹಿತಿಯ ಕೊರತೆಯೇ ಕಾರಣವಾಗಿದೆ ಎಂದರು.
ಶ್ರೀಶಬರಿಮಲೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಪೀಠ ನೀಡಿರುವ ತೀರ್ಪಿನಿಂದ ಅಸಂಖ್ಯಾತ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗಿದೆ. ಆ ಕಾರಣಕ್ಕಾಗಿಯೇ ದೇಶದ್ಯಾಂತ ತೀವ್ರ ಪ್ರತಿಭಟನೆ, ಹೋರಾಟ ನಡೆದಿದ್ದು, ತೀರ್ಪನ್ನು ಪುನರ್ ಪರಿಶೀಲಿಸುವಂತೆ ಮೇಲ್ಮನವಿಯೂ ಸಲ್ಲಿಸಲಾಗಿದೆ ಎಂದರು.
ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ತೀರ್ಪು ನೀಡುವುದಕ್ಕೂ ಮುನ್ನ ನ್ಯಾಯಾಧೀಶರು ಸ್ಥಳ ಪರಿಶೀಲನೆ ಮಾಡಬೇಕಿತ್ತು. ಇಲ್ಲದಿದ್ದರೆ ಅವರೇ ಒಂದು ನಿಯೋಗ ರಚನೆ ಮಾಡಿ, ಅಲ್ಲಿನ ಭಕ್ತರ ಹಾಗೂ ಅಲ್ಲಿ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳ ಬಗ್ಗೆ ಸರಿಯಾದ ವರದಿಯನ್ನು ತರಿಸಿಕೊಂಡು, ಅಧ್ಯಯನ ಮಾಡಿದ ನಂತರ ತೀರ್ಪು ನೀಡಬೇಕಿತ್ತು. ಸುಪ್ರೀಂ ಕೋರ್ಟ್‍ನ ತೀರ್ಪು ಸರಿ ಎನಿಸಿದರೂ, ಪ್ರತಿಯೊಂದು ಧರ್ಮದಲ್ಲೂ ಅದರದೇ ಆದ ಧಾರ್ಮಿಕ ಕಟ್ಟಳೆಗಳಿವೆ ಎಂಬುದನ್ನು ಅರಿತುಕೊಳ್ಳಬೇಕಾಗಿದೆ. ಹಿಂದಿನಿಂದ ನಡೆದು ಬಂದ ಧರ್ಮಾಚರಣೆ, ನಂಬಿಕೆ, ಸಂಪ್ರದಾಯಗಳಿಗೆ ಪ್ರತಿಯೊಂದ ಧರ್ಮಿಯರು ಗೌರವ ನೀಡುತ್ತಾರೆ ಎಂದು ಹೇಳಿದರು.
ಹೆದ್ದಾರಿಗಳಲ್ಲಿ ಜ್ಯೋತಿ:
ಶಬರಿಮಲೆ ಕ್ಷೇತ್ರ ಸಂರಕ್ಷಣಾ ಅಭಿಯಾನದ ಅಂಗವಾಗಿ ರಾಜ್ಯದ ಪ್ರಮುಖ ಹೆದ್ದಾರಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಯ್ಯಪ್ಪ ಜ್ಯೋತಿ ಬೆಳಗಿಸುವ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಕೇರಳದ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಈ ಅಭಿಯಾನ ನಡೆಸಲಾಗಿದೆ. ಇದಕ್ಕೆ ಬೆಂಬಲವಾಗಿ ಕರ್ನಾಟಕದಲ್ಲೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಈಗಾಗಲೇ ದಕ್ಷಿಣದ ನಾಲ್ಕು ರಾಜ್ಯಗಳನ್ನೊಳಗೊಂಡ ಶ್ರೀಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಗಣ್ಯರ ನೇತೃತ್ವದಲ್ಲಿ ರಚಿಸಲಾಗಿದೆ. ಅದೇ ರೀತಿ ರಾಜ್ಯದಲ್ಲಿ ಇಂತಹ ಸಮಿತಿ ರಚಿಸಲಾಗಿದೆ. ಈ ಸಮಿತಿಯ ಮೂಲಕ ನಮ್ಮ ದೇಶದ ಶ್ರೇಷ್ಠ ಸನಾತನ ಹಿಂದು ಧರ್ಮ, ಸಂಸ್ಕತಿ, ಪರಂಪರೆ, ಮೌಲ್ಯಗಳನ್ನು ರಕ್ಷಿಸಲು ಪ್ರಯತ್ನಿಸಲಾಗುವುದು. ಇದರ ರೂಪರೇಷಗಳನ್ನು ಶೀಘ್ರದಲ್ಲಿಯೇ ತಯಾರಾಗಲಿದೆ ಎಂದು ಮಾಹಿತಿ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ