ಸ್ಮಾರ್ಟ್‍ಸಿಟಿ ಯೋಜನೆಯಡಿ ಕಳಪೆ ಕಾಮಗಾರಿ

ದಾವಣಗೆರೆ:

     ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಕಳಪೆ ಗುಣಮಟ್ಟ ಹಾಗೂ ಅವೈಜ್ಞಾನಿಕತೆಯಿಂದ ಕೂಡಿವೆ ಎಂದು ಜೆಡಿಎಸ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್ ಆರೋಪಿಸಿದ್ದಾರೆ.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಕೈಗೊಂಡಿರುವ ಕೆಲ ಕಾಮಗಾರಿಗಳು ಮುಗಿಯುವ ಹಂತ ತಲುಪಿದ್ದು, ಅವು ಸಂಪೂರ್ಣ ಕಳಪೆ ಗುಣಮಟ್ಟದಿಂದ ಹಾಗೂ ಅವೈಜ್ಞಾನಿಕತೆಯಿಂದ ಕೂಡಿವೆ ಎಂದು ದೂರಿದರು.

     ಸ್ಮಾರ್ಟ್‍ಸಿಟಿ ಯೋಜನೆಯಡಿ ಕಾಮಗಾರಿಗಳನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು, ಬೇರೆಯವರಿಗೆ ತುಂಡು ಗುತ್ತಿಗೆ ನೀಡುವ ಮೂಲಕ ಕಳಪೆ ಕಾಮಗಾರಿ ನಡೆಯಲು ನೇರವಾಗಿ ಕಾರಣವಾಗಿದ್ದಾರೆ. ಆದ್ದರಿಂದ ಸ್ಮಾರ್ಟ್‍ಸಿಟಿ ಯೋಜನೆಯ ಆಶಯದ ಶೇ.25 ರಷ್ಟು ಭಾಗವು ಕೆಲಸವಾಗುತ್ತಿಲ್ಲ. ತುಂಡು ಗುತ್ತಿಗೆ ನೀಡಿರುವುದು ಅಧಿಕಾರಿಗಳಿಗೆ ಗೊತ್ತಿದ್ದರೂ ಸಹ ಕಂಡುಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಸ್ಮಾರ್ಟ್‍ಸಿಟಿ ಯೋಜನೆಯ ಹೆಸರಿನಲ್ಲಿ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಅಂದ ದರ್ಬಾರ್ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕಿಪೇಟೆಗಳಲ್ಲಿನ ರಸ್ತೆಯಲ್ಲಿ ಮಳೆ ನೀರು ಚರಂಡಿಯಲ್ಲಿ ಅಳವಡಿಸಿರುವ ಪೈಪುಗಳ ಛೇಂಬರ್ ಮೇಲೆ ಮುಚ್ಚಿರುವ ಸ್ಲ್ಯಾಬ್‍ಗಳು ಸಮತಟ್ಟವಾಗಿರದ ಕಾರಣ ವಾಹನ ಸಂಚಾರಕ್ಕೆ ಹಾಗೂ ವಾಹನಗಳ ನಿಲುಗಡೆಗೆ ತೊಂದರೆಯಾಗುತ್ತಿದೆ. ಅಲ್ಲದೇ, ಲೋಕೋಪಯೋಗಿ ಇಲಾಖೆ ನಿಗದಿ ಪಡಿಸಿರುವ ರಸ್ತೆಗಳ ಅಳತೆಗೆ ಅನುಗುಣವಾಗಿ ಗುತ್ತಿಗೆದಾರರು ಕಾಮಗಾರಿಗಳನ್ನು ನಡೆಸುತ್ತಿಲ್ಲ ಎಂದು ಆರೋಪಿಸಿದರು.

      ಈಗಾಗಲೇ ಬೇರೆ, ಬೇರೆ ಯೋಜನೆಗಳಲ್ಲಿ ನಿರ್ಮಾಣವಾಗಿರುವ ಚರಂಡಿಗಳು ಉತ್ತಮ ಸ್ಥಿತಿಯಲ್ಲಿದ್ದರೂ, ಆ ಚರಂಡಿಗಳಿಗೆ ತೇಪೆ ಹಾಕಿ, ಹಣ ಲೂಟಿ ಒಡೆಯಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮುಂದಾಗಿದ್ದಾರೆ. ಅಲ್ಲದೇ, ಸಮರ್ಪಕವಾಗಿ ಪಾದಚಾರಿ ರಸ್ತೆ ಹಾಗೂ ಸೈಕಲ್ ರಸ್ತೆಯನ್ನು ಸಹ ನಿರ್ಮಾಣ ಮಾಡಲು ಆಸಕ್ತಿ ತೋರುತ್ತಿಲ್ಲ ಎಂದು ಕಿಡಿಕಾರಿದರು.

      ಮಂಡಕ್ಕಿಭಟ್ಟಿ ಬಡಾವಣೆಗೆ ಆಧುನಿಕ ಸ್ಪರ್ಷ ನೀಡುವ ಉದ್ದೇಶದಿಂದ ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಕ್ರಿಯಾ ಯೋಜನೆ ರೂಪಿಸಿ, ಅದಕ್ಕಾಗಿ 370 ಕೋಟಿ ರೂ.ಗಳನ್ನು ಸಹ ಮೀಸಲಿಡಲಾಗಿತ್ತು. ಆದರೆ, ಈ ವರೆಗೂ ಆ ಕಾಮಗಾರಿಯನ್ನು ಕೈಗೊಳ್ಳದಿರುವುದನ್ನು ನೋಡಿದರೆ, ಒಳಗಿಂದೊಳಗೆಯೇ ಮಂಡಕ್ಕಿಭಟ್ಟಿ ಕಾಮಗಾರಿಯನ್ನು ಕೈಬಿಡುವ ಹುನ್ನಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ ಎಂದು ಆಪಾದಿಸಿದರು.

       ಹಳೇ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ, ಐತಿಹಾಸಿಕ ಪ್ರೌಢಶಾಲಾ ಮೈದಾನಕ್ಕೆ ಸ್ಥಳಾಂತರಿಸುವ ನೆಪದಲ್ಲಿ ಹೈಸ್ಕೂಲ್ ಫೀಲ್ಡ್ ಜಾಗವನ್ನು ಕಬಳಿಸುವ ಹುನ್ನಾರ ನಡೆಯುತ್ತಿದೆ. ಹಳೇ ಬಸ್ ನಿಲ್ದಾಣದಲ್ಲಿ ಪ್ರಸ್ತುತ 25ರಿಂದ 30 ಮಳಿಗೆಗಳಿವೆ. ಆದರೆ, ತಾತ್ಕಾಲಿಕವಾಗಿ ನಿರ್ಮಿಸಲುದ್ದೇಶಿಸಿರುವ ಹಳೇ ಬಸ್ ನಿಲ್ದಾಣದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಾಣ ಮಾಡುತ್ತಿರುವುದರ ಹಿಂದಿನ ದುರುದೇಶ ವಾದರು ಏನು ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಪಡಿಸಬೇಕೆಂದು ಆಗ್ರಹಿಸಿದ ಅವರು, ನಗರದಲ್ಲಿನ ಜನ ದಟ್ಟಣೆ ಹಾಗೂ ವಾಹನ ದಟ್ಟಣೆಯನ್ನು ತಡೆಯುವ ಸಲುವಾಗಿ, ಹಳೇ ಬಸ್ ನಿಲ್ದಾಣದ ಬದಲಾಗಿ, ನಗರದ ನಾಲ್ಕು ಭಾಗಗಳಲ್ಲಿ ಉಪ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

         ಸ್ಮಾರ್ಟ್‍ಸಿಟಿ ಯೋಜನೆಯಡಿ ಈಗಾಗಲೇ ಶೇ.30 ರಷ್ಟು ಕಾಮಗಾರಿಗಳು ಮುಕ್ತಾಯದ ಹಂತ ತಲುಪಿವೆ. ಆದರೆ, ಎಲ್ಲಾ ಕಾಮಗಾರಿಗಳು ಕಳಪೆ ಹಾಗೂ ಅವೈಜ್ಞಾನಿಕತೆಯಿಂದ ಕೂಡಿವೆ. ಇನ್ನೂ ಮುಂದಾದರೂ ಜಿಲ್ಲಾಡಳಿತ ಹಾಗೂ ಸ್ಮಾರ್ಟ್‍ಸಿಟಿ ಕಂಪೆನಿ ಪರಸ್ಪರ ಸಮನ್ವಯತೆ ಸಾಧಿಸಿ, ಇನ್ನುಳಿದ ಶೇ.70ರಷ್ಟು ಕಾಮಗಾರಿಗಳನ್ನಾದರೂ ವೈಜ್ಞಾನಿಕವಾಗಿ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

        ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಮನ್ಸೂರ್ ಅಲಿ, ಇನಾಯತ್ ಅಲಿಖಾನ್, ಹೆಚ್.ವಿ.ಪ್ರಭುಲಿಂಗಪ್ಪ, ನರಸಿಂಹಮೂರ್ತಿ, ಖಾದರ್ ಭಾಷಾ, ವೈ.ಎಂ.ಜಿಕ್ರಿಯಾ ಸಾಬ್, ಫಾರೂಕ್ ಖಾನ್, ಸೈಯದ್ ರಸೂಲ್ ಸಾಬ್, ಸಲೀಂ ಸಾಬ್, ಜಾಹೀರ್ ಖಾನ್, ಸನ್ಸರ್, ಮುಸ್ತಾಕ್, ಸುಲೇಮಾನ್, ವೀರೇಶ್, ಖಲಂದರ್ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ