ಕುಣಿಗಲ್,
ನಾವು ಎಷ್ಟೇ ಶತಮಾನಗಳ ಆಚೆಗೆ ಹೋದರೂ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ಹಬ್ಬ ಹರಿ-ದಿನಗಳು ಅರ್ಥ ಪೂರ್ಣವಾಗಿದ್ದು ಸಮಾಜದಲ್ಲಿ ಉತ್ತಮ ಬಾಂಧವ್ಯ ಮೂಡಿಸುವ ಮೂಲಕ ಮಾತ್ರ ಜನಸಾಮಾನ್ಯರೊಂದಿಗೆ ಆಸು ಹೊಕ್ಕಾಗಿವೆ ಎಂದು ಪ್ರಾಚಾರ್ಯರಾದ ಡಾ. ಕಪನಿಪಾಳ್ಯ ರಮೇಶ ಅಭಿಪ್ರಾಯ ಪಟ್ಟರು.
ಅವರು ಮೈಸೂರು ದಸರಾ ಅಂಗವಾಗಿ ನಡೆಯುವ ನವರಾತ್ರಿ ಉತ್ಸವದ ಪ್ರಯುಕ್ತ ಪಟ್ಟಣದ ಜ್ಞಾನಭಾರತಿ ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಆಯುಧಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ ಅಪಾರ ವಿದ್ಯಾರ್ಥಿ ಬಳಗದೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ನಂತರ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಮಾತನಾಡಿದ ಅವರು, ನಾವು ಎಷ್ಟೇ ಶತಮಾನಗಳ ಆಚೆಗೆ ಹೋದರೂ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ಹಬ್ಬ ಹರಿ-ದಿನಗಳು ಮಾತ್ರ ನಮ್ಮೊಂದಿಗೆ ಆಸು ಹೊಕ್ಕಾಗಿವೆ.
ಇವು ನಮ್ಮ ಭಾರತೀಯ ಸನಾತನ ಸಾಂಸ್ಕøತಿಕ ವೈಭವ ಮತ್ತು ಪರಂಪರೆಯ ಸಂಕೇತಗಳಾಗಿವೆ. ಆಧುನಿಕತೆಯ ಪ್ರಭಾವಕ್ಕೆ ಒಳಗಾಗಿ ಅದೆಷ್ಟೋ ಮಂದಿ ನಮ್ಮ ಪರಂಪರೆಯನ್ನು ಮರೆಯುತ್ತಿದ್ದಾರೆ. ಇದು ಭವಿಷ್ಯದ ಪೀಳಿಗೆಗೆ ಮಾರಕವಾಗಲಿದೆ. ನಮ್ಮ ಸಂಸ್ಕøತಿಯನ್ನು ಮರೆತರೆ ನಮ್ಮ ತನವನ್ನು ಕಳೆದುಕೊಂಡಂತೆ. ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮಾದರಿಯಲ್ಲಿ ನಮ್ಮ ಹಬ್ಬಗಳನ್ನು ಕಡ್ಡಾಯವಾಗಿ ಆಚರಿಸುವಂತಾಗಬೇಕು ಎಂದು ಅವರು ಹೇಳಿದರು.
ನಮ್ಮ ನಾಡಿನ ಧರ್ಮ, ಸಂಸ್ಕøತಿ ಮತ್ತು ಹಬ್ಬ ಆಚರಣೆಗಳ ಬಗ್ಗೆ ಇಂದಿನ ತಲೆಮಾರಿನ ಯುವ ಪೀಳಿಗೆಗೆ ವಿವರಿಸಬೇಕಾದ ಅಗತ್ಯತೆ ಇದೆ. ಅವುಗಳು ಎಂದಿಗೂ ಶಾಶ್ವತವಾಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಾಗಬೇಕು. ಹಬ್ಬಗಳ ಆಚರಣೆ ನಮ್ಮ ದೇಶದ ಶ್ರೀಮಂತಿಕೆಯ ಪ್ರತಿಬಿಂಬವಾಗಿದೆ. ಹೀಗಾಗಿ ಯುವ ಜನತೆ ವೈಜ್ಞಾನಿಕ ಚಿಂತನೆಗಳ ಜೊತೆ ಜೊತೆಗೆ ಧಾರ್ಮಿಕ ವಿಚಾರಗಳ ಕಡೆಗೂ ಮನಸ್ಸು ಕೊಡಬೇಕು ಎಂದು ಅವರು ಕರೆ ನೀಡಿದರು.
ದೇವರನ್ನು ನಂಬದವರು ನಾಸ್ತಿಕರ ಗುಂಪಿಗೆ ಸೇರುತ್ತಾರೆ. ಧರ್ಮವನ್ನು ನಂಬುವರನ್ನು ಆಸ್ತಿಕರು ಎನ್ನಲಾಗುತ್ತಿದೆ. ಆದರೆ, ನಂಬಿಕೆ ಅವರವರ ಮನಸ್ಥಿತಿಗೆ ಬಿಟ್ದ ವಿಚಾರ. ಹೀಗಾಗಿ, ಆಸ್ತಿಕರು ಮತ್ತು ನಾಸ್ತಿಕರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾವು ಇವೆಲ್ಲವನ್ನೂ ಮೀರಿದ ವೈಚಾರಿಕ ಚಿಂತನೆಗಳತ್ತ ಗಮನ ಹರಿಸೋಣ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಚಿತ್ತಾಕರ್ಷಕ ಬಣ್ಣ-ಬಣ್ಣದ ರಂಗೋಲಿಯಿಂದ ಸಿಂಗರಿಸಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದರು. ತಳಿರು-ತೋರಣ, ಕಬ್ಬುಕಟ್ಟಿ ಸಂಭ್ರಮಿಸಿದರು.
ಸಾಂಪ್ರದಾಯಿಕವಾಗಿ ಇಡೀ ಕಾಲೇಜಿನ ಕೊಠಡಿಗಳನ್ನು ಸ್ವಚ್ಛಗೊಳಿಸಿದರು. ದುರ್ಗಾಮಾತೆ ಮತ್ತು ಚಾಮುಂಡೇಶ್ವರಿಯ ವಿವಿಧ ಆಕರ್ಷಕ ಚಿತ್ತಾರಗಳನ್ನು ಬಿಡಿಸಿ ತಮ್ಮ ಪ್ರತಿಭೆಯನ್ನು ಹೊರ ಹಾಕಿದರು. ಕಾಲೇಜು ವಾಹನಗಳು, ವಿಜ್ಞಾನೋಪಕರಣಗಳು, ಗ್ರಂಥಾಲಯ, ಕಂಪ್ಯೂಟರ್, ಪಾಠೋಪಕರಣ ಮತ್ತು ಪೀಠೋಪಕರಣಗಳಿಗೆ ಪೂಜೆಯನ್ನು ಆಚರಿಸಿದ್ದು ವಿಶೇಷವಾಗಿತ್ತು.
ಕಾಲೇಜಿನಲ್ಲಿ ಬೂಂದಿ ಮತ್ತು ಕಾರ ವಿತರಿಸಲಾಯಿತು. ಉಪನ್ಯಾಸಕರು, ವಿದ್ಯಾರ್ಥಿಗಳಿಗೆ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಿಸುವ ಮೂಲಕ ಹಬ್ಬದ ಸಡಗರ ಹಂಚಿಕೊಂಡರು. ಸಂಸ್ಥೆಯ ಕಾರ್ಯದರ್ಶಿ ಜಿ.ಕೆ.ಅನಂತಯ್ಯ, ನಿರ್ದೇಶಕರಾದ ಬಿ.ಎಂ.ಹುಚ್ಚೇಗೌಡ, ಸೋಮಣ್ಣ, ಉಪನ್ಯಾಸಕರಾದ ಸತೀಶ್, ಸದಾಶಿವ, ಮಂಜುಸ್ವಾಮಿ, ಪ್ರಶಾಂತಲಿಂಗಂ, ಮಣಿರಾಜ್, ನಂದಿನಿ, ಅನನ್ಯ, ದಿವ್ಯ ಸೇರಿದಂತೆ ಮುಖ್ಯೋಪಾಧ್ಯಾಯಿನಿ ಗಂಗಮ್ಮ ಹಾಗೂ ಪ್ರಸನ್ನ ಅವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ