ದಾವಣಗೆರೆ :
ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಕರ್ನಾಟಕದ ಕೇಂದ್ರ ಬಿಂದು, ಬೆಣ್ಣೆ ನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಸಾಂಪ್ರದಾಯಿಕ ಎದುರಾಳಿಗಳಾಗಿರುವ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಡೆಯುವ ಮುನ್ಸೂಚನೆಗಳು ಗೊಚರಿಸುತ್ತಿವೆ.
ಹಾಲಿ ಬಿಜೆಪಿ ವಶದಲ್ಲಿರುವ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ವರೆಗೂ ಒಟ್ಟು 11 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, ಈ ಎಲ್ಲಾ ಚುನಾವಣೆಗಳಲ್ಲಿ ಬಹುತೇಕ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಮಧ್ಯೆಯೇ ನೇರ ಹಣಾಹಣಿ ನಡೆದಿದ್ದು, ಈ ಸಾಂಪ್ರದಾಯಿಕ ಎದುರಾಳಿ ಪಕ್ಷಗಳ ನಡುವೆಯೇ ಈ ಬಾರಿಯೂ ಮಹಾ ಸಮರ ನಡೆಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.
ಕ್ಷೇತ್ರದ ಹಿನ್ನೆಲೆ:
1977ರಿಂದ 2014ರ ವರೆಗೂ ನಡೆದ ಒಟ್ಟು 11 ಚುನಾವಣೆಗಳ ಪೈಕಿ ಕಾಂಗ್ರೆಸ್ ಆರು ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಿದ್ದರೆ, ಐದು ಬಾರಿ ಕಮಲ ಅರಳಿದೆ. 1991ರ ವರೆಗೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸತತ ಪ್ರಯತ್ನದ ಮೂಲಕ 1996ರ ಚುನಾವಣೆಯಲ್ಲಿ ಭೀಮಸಮುದ್ರದ ಜಿ.ಮಲ್ಲಿಕಾರ್ಜುನಪ್ಪನವರು ಬಿಜೆಪಿಯಿಂದ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯಿತು.
ಇದಾದ ಬಳಿಕ 1998ರ ಚುನಾವಣೆಯಲ್ಲಿ ಕಾಂಗ್ರೆಸ್‍ನ ಡಾ.ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿ, ಸಂಸತ್ತು ಪ್ರದರ್ಶಿಸಿದನ್ನು ಬಿಟ್ಟರೇ, 2014ರ ಲೋಕಸಭೆ ಚುನಾವಣೆಯ ವರೆಗೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬರುವ ಮೂಲಕ ಕಾಂಗ್ರೆಸ್ ವಶದಲ್ಲಿದ್ದ ದಾವಣಗೆರೆ ಕ್ಷೇತ್ರವನ್ನು ಬಿಜೆಪಿ ತನ್ನ ಮಡಲಿಗೆ ಹಾಕಿಕೊಂಡಿದೆ.
8ರ ಪೈಕಿ 6 ಬಿಜೆಪಿ:
ದಾವಣಗೆರೆ ಲೋಕಸಭಾ ಕ್ಷೇತ್ರವು ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ದಾವಣಗೆರೆ ಉತ್ತರ ಕ್ಷೇತ್ರ, ಜಗಳೂರು, ಹರಪನಹಳ್ಳಿ, ಚನ್ನಗಿರಿ, ಹೊನ್ನಾಳಿ ಹಾಗೂ ಮಾಯಕೊಂಡ ಕ್ಷೇತ್ರಗಳಲ್ಲಿ ಅಂದರೆ, ಆರು ಕ್ಷೇತ್ರಗಳ ಜೊತೆಗೆ 36 ಸದಸ್ಯರ ಬಲ ಹೊಂದಿರುವ ದಾವಣಗೆರೆ ಜಿಲ್ಲಾ ಪಂಚಾಯತ್ ಸಹ ಬಿಜೆಪಿ ವಶದಲ್ಲಿದೆ. ಇನ್ನುಳಿದ ದಾವಣಗೆರೆ ದಕ್ಷಿಣ ಹಾಗೂ ಹರಿಹರ ಕ್ಷೇತ್ರಗಳು ಮಾತ್ರ ಕಾಂಗ್ರೆಸ್ ತೆಕ್ಕೆಯಲ್ಲಿವೆ.
ಒಟ್ಟು ಮತದಾರರು:
ಕ್ಷೇತ್ರದಲ್ಲಿ 8,14,413 ಪುರುಷ, 7,96,874 ಮಹಿಳಾ, 110 ತೃತೀಯಲಿಂಗಿ ಹಾಗೂ 568 ಜನ ಸೇವಾ ಮತದಾರರು ಸೇರಿದಂತೆ ಒಟ್ಟು 16,11,965 ಮತದಾರರಿದ್ದು, ಕಳೆದ (2014ರ) ಚುನಾವಣೆಗಿಂತ ಈ ಬಾರಿ 1.18 ಲಕ್ಷ ಹೊಸ ಮತದಾರರು ಕ್ಷೇತ್ರದಲ್ಲಿ ನೋಂದಾಯಿಸಿಕೊಂಡಿದ್ದು, ಈ ಹೊಸ ಮತದಾರರನ್ನು ಸೆಳೆಯುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ, ತಮ್ಮ ಪಕ್ಷಗಳ ವಿಚಾರಧಾರೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ.
ಜಿಎಂಎಸ್-ಎಸ್ಸೆಸ್ಸೆಂ ಮಧ್ಯೆ ಸಮರ:
ಈಗಾಗಲೇ ಸತತ ಮೂರು ಬಾರಿ ಗೆಲುವಿನ ನಗೆ ಬೀರಿರುವ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ನಾಲ್ಕನೇ ಬಾರಿಯೂ ಆಯ್ಕೆ ಬಯಸಿ ಬಿಜೆಪಿಯಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದು, ಕ್ಷೇತ್ರದಾದ್ಯಂತ ಸುತ್ತಾಡುವ ಮೂಲಕ ಕಳೆದ ಒಂದು ತಿಂಗಳಿನಿಂದಲೇ ಮತ ಬೇಟೆಯಾಡುತ್ತಿದ್ದು, ಬಹುತೇಕ ಸಿದ್ದೇಶ್ವರ್ ಅವರೇ ಬಿಜೆಪಿ ಅಭ್ಯರ್ಥಿಯಾಗುವ ಸಂಭವವಿದ್ದು, ಪಕ್ಷ ಅಧಿಕೃತವಾಗಿ ಘೋಷಿಸುವುದೊಂದೆ ಬಾಕಿ ಇದೆ.
ಇನ್ನೂ ಮೂರು ಬಾರಿ ಸಿದ್ದೇಶ್ವರ್ ಎದುರು ಮಣಿದಿರುವ ಕಾಂಗ್ರೆಸ್‍ನ ಸಂಭವನೀಯ ಅಭ್ಯರ್ಥಿ ಎಂದೇ ಕರೆಯಲಾಗುತ್ತಿರುವ ಎಸ್.ಎಸ್.ಮಲ್ಲಿಕಾರ್ಜುನ್ ಅವರು, 2018ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕ್ಷೇತ್ರದಲ್ಲಿ ಪರಾಭವಗೊಂಡು ಮನೆ ಸೇರಿದ್ದ ಕಾರಣಕ್ಕೆ ಮೊದ, ಮೊದಲು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಹುಮ್ಮಸ್ಸು ತೋರಿರಲಿಲ್ಲ.
ಆದರೆ, ಮೊನ್ನೆ ತಾನೇ ನಡೆದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಪ್ರಾರಂಭೋತ್ಸವದಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ಎಲ್ಲೂ ಹೇಳಿಲ್ಲ. ವರಿಷ್ಠರು ಕಣಕ್ಕಿಳಿಯಲು ತಯಾರಿ ನಡೆಸುವಂತೆ ಸೂಚಿಸಿದ್ದು, ಇನ್ನೂ ಎರಡ್ಮೂರು ದಿನಗಳಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದರು.
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಲ್ಲಿಕಾರ್ಜುನ್ ತಮ್ಮ ಬಳಿ ಹೇಳಿಕೊಂಡಿದ್ದು, ಎಸ್ಸೆಸ್ಸೆಂ ಸ್ಪರ್ಧೆ ಬಹುತೇಕ ಖಚಿತ ಎಂದಿದ್ದರು. ಹೀಗಾಗಿ ಮಲ್ಲಿಕಾರ್ಜುನ್ ಅವರು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.
ಈ ಎಲ್ಲಾ ಕಾರಣಗಳಿಂದಾಗಿ ಕಳೆದ ಮೂರು ಬಾರಿಯಿಂದಲೂ ಲೋಕಸಭೆ ಚುನಾವಣೆಯಲ್ಲಿ ಭಾರೀ ಪೈಪೋಟಿ ನಡೆಸಿರುವ ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರುಗಳ ಮಧ್ಯೆಯೇ ನಾಲ್ಕನೇ ಬಾರಿಯೂ ಜಂಗೀ ಕುಸ್ತಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
